ಸಾಥನ್‌ಕುಲಂ ಲಾಕಪ್ ಡೆತ್ ಪ್ರಕರಣ:ಎಲ್ಲಾ 5 ಮಂದಿ ಆರೋಪಿ ಪೊಲೀಸರು ಮಧುರೈ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್
ತಮಿಳುನಾಡಿನ ಸತಾನ್‌ಕುಲಂನಲ್ಲಿ ಅಪ್ಪ-ಮಗ ಲಾಕಪ್'ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೂತುಕುಡಿಯ ಪೆರುರಾನಿ ಜಿಲ್ಲಾ ನ್ಯಾಯಾಲಯದಿಂದ ಎಲ್ಲಾ ಐದು ಮಂದಿ ಆರೋಪಿ ಪೊಲೀಸರನ್ನು ತಮಿಳು ನಾಡು ಕಾರಾಗೃಹ ಇಲಾಖೆ ಮಧುರೈ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಿದೆ.
Published: 05th July 2020 09:07 AM | Last Updated: 05th July 2020 09:07 AM | A+A A-

ಆರೋಪಿ ಪೊಲೀಸರನ್ನು ಕರೆದೊಯ್ದ ವಾಹನ
ತೂತುಕುಡಿ: ತಮಿಳುನಾಡಿನ ಸತಾನ್‌ಕುಲಂನಲ್ಲಿ ಅಪ್ಪ-ಮಗ ಲಾಕಪ್'ಡೆತ್ ಪ್ರಕರಣಕ್ಕೆ ಸಂಬಂಧಿಸಿದಂತೆ ತೂತುಕುಡಿಯ ಪೆರುರಾನಿ ಜಿಲ್ಲಾ ನ್ಯಾಯಾಲಯದಿಂದ ಎಲ್ಲಾ ಐದು ಮಂದಿ ಆರೋಪಿ ಪೊಲೀಸರನ್ನು ತಮಿಳು ನಾಡು ಕಾರಾಗೃಹ ಇಲಾಖೆ ಮಧುರೈ ಕೇಂದ್ರ ಕಾರಾಗೃಹಕ್ಕೆ ವರ್ಗಾಯಿಸಿದೆ.
ಮದುರೈ ಕೇಂದ್ರ ಕಾರಾಗೃಹಕ್ಕೆ ಬೆಂಗಾವಲು ವಾಹನದ ಭದ್ರತೆ ಮೂಲಕ ಎಲ್ಲಾ 5 ಮಂದಿ ಪೊಲೀಸರನ್ನು ವರ್ಗಾಯಿಸಲಾಗಿದೆ ಎಂದು ತೂತುಕುಡಿ ಎಸ್ಪಿ ಎಸ್ ಜಯಕುಮಾರ್ ತಿಳಿಸಿದ್ದಾರೆ.
ಪಿ.ಜಯರಾಜ್ ಮತ್ತು ಅವರ ಮಗ ಫೆನಿಕ್ಸ್ ಅವರನ್ನು ಲಾಕ್'ಡೌನ್ ವೇಳೆ ತಮ್ಮ ಮೊಬೈಲ್ ಅಂಗಡಿ ತೆರೆದು ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಪೊಲೀಸರು ಆರೋಪಿಸಿ ವಶಕ್ಕೆ ಪಡೆದುಕೊಂಡಿದ್ದರು. ಈ ವೇಳೆ ಪೊಲೀಸರು ಇಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಪರಿಣಾಮ ಘಟನೆ ನಡೆದ ಒಂದು ವಾರದಲ್ಲಿ ಇಬ್ಬರೂ ಮೃತಪಟ್ಟಿದ್ದರು. ಘಟನೆಗೆ ರಾಷ್ಟ್ರವ್ಯಾಪ್ತಿ ತೀವ್ರ ವಿರೋಧಗಳು ವ್ಯಕ್ತವಾಗಲು ಆರಂಭಿಸಿತ್ತು. ಮೊನ್ನೆ ಶುಕ್ರವಾರ ಐದನೇ ಆರೋಪಿ ಪೊಲೀಸ್ ಇನ್ಸ್ ಪೆಕ್ಟರ್ ಶ್ರೀಧರ್ ನನ್ನು ಸಿಬಿ-ಸಿಐಡಿ ಅಧಿಕಾರಿಗಳು ಬಂಧಿಸಿದ್ದರು.
ಮುಂದಿನ ವಾರ ಕಸ್ಟಡಿಗೆ: ಎಲ್ಲಾ 5 ಮಂದಿ ಪೊಲೀಸರನ್ನು ತನಿಖೆಗೆ ಮುಂದಿನ ವಾರ ಕಸ್ಪಡಿಗೆ ಒಯ್ಯುವ ಸಾಧ್ಯತೆಯಿದ್ದು ಸಾಕ್ಷಿಗಳ ಹೇಳಿಕೆ, ದಾಖಲೆಗಳು, ಇದುವರೆಗೆ ಸಂಗ್ರಹಿಸಿದ ಸಾಕ್ಷಿಗಳನ್ನು ತನಿಖೆ ವೇಳೆ ಸಲ್ಲಿಸಲಾಗುವುದು ಎಂದು ಸಿಬಿ-ಸಿಐಡಿ ಮಹಾ ನಿರ್ದೇಶಕ ಕೆ ಶಂಕರ್ ಮಾಧ್ಯಮಗಳಿಗೆ ನಿನ್ನೆ ತಿಳಿಸಿದ್ದಾರೆ.
ಮಾಧ್ಯಮಕ್ಕೆ ಸಮ್ಮನ್ಸ್: ತಂದೆ-ಮಗ ಜಯರಾಜ್ ಮತ್ತು ಫೆನಿಕ್ಸ್ ನ ಮಾರ್ಫ್ ಮಾಡಲಾದ ಚಿತ್ರವನ್ನು ಆನ್ ಲೈನ್ ಮಾಧ್ಯಮವೊಂದು ಪ್ರಕಟಿಸಿದ್ದು ಅದು ಮರಣೋತ್ತರ ಪರೀಕ್ಷೆ ವರದಿಗೆ ಹೊಂದಿಕೆಯಾಗುತ್ತಿಲ್ಲ. ಜನರಿಗೆ ತಪ್ಪು ಸಂದೇಶ ರವಾನಿಸಿ ಅನಿಶ್ಚಿತತೆ ಉಂಟುಮಾಡಲು ಮಾಧ್ಯಮ ಈ ರೀತಿ ಫೋಟೋ ಪ್ರಕಟಿಸಿದೆ ಎಂದು ಕಂಡುಬರುತ್ತಿದೆ. ವಾಸ್ತವ ವಿಷಯಕ್ಕೆ ದೂರವಾದ ಇಂತಹ ಪೋಸ್ಟ್ ಗಳು ತನಿಖೆಯ ದಿಕ್ಕನ್ನು ಬದಲಾಯಿಸುತ್ತವೆ, ಹೀಗಾಗಿ ಆ ಮಾಧ್ಯಮದ ಸಂಪಾದಕರನ್ನು ವಿಚಾರಣೆಗೆ ಹಾಜರಾಗಲು ಸಮ್ಮನ್ಸ್ ಕಳುಹಿಸಲಾಗಿದೆ ಎಂದಿದ್ದಾರೆ.
ಸೋಷಿಯಲ್ ಮೀಡಿಯಾಗಳಲ್ಲಿ ತಪ್ಪು ಮಾಹಿತಿಗಳನ್ನು ಹಂಚಬೇಡಿ, ಇದರಿಂದ ಜನರಲ್ಲಿ ಇನ್ನಷ್ಟು ಗೊಂದಲ ಉಂಟಾಗುತ್ತದೆ ಎಂದು ಮನವಿ ಮಾಡಿದ್ದು, ವಾಸ್ತವಾಂಶಗಳನ್ನು ಪರಿಶೀಲಿಸದೆ ಸುಳ್ಳು ಸುದ್ದಿಗಳನ್ನು ಮತ್ತು ಫೋಟೋಗಳನ್ನು ಹಬ್ಬಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಇನ್ಸ್ ಪೆಕ್ಟರ್ ಜನರಲ್ ಕೆ ಶಂಕರ್ ತಿಳಿಸಿದ್ದಾರೆ.