ವೆಂಟಿಲೇಟರ್ ಖರೀದಿಯಲ್ಲಿ ಹಗರಣದ ವಾಸನೆ: ಕಾಂಗ್ರೆಸ್ ಆರೋಪ

ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಮಧ್ಯೆ ಸರ್ಕಾರ ವೆಂಟಿಲೇಟರ್‌ಗಳ ಖರೀದಿಗೆ ಸಂಬಂಧಿಸಿದ ಹಗರಣದಲ್ಲಿ ತೊಡಗಿದ್ದು, ದೇಶದ ಜನರನ್ನು ಮರುಳು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಗೌರವ್ ವಲ್ಲಭ್
ಗೌರವ್ ವಲ್ಲಭ್

ನವದೆಹಲಿ: ಕೋವಿಡ್ ಸಾಂಕ್ರಾಮಿಕ ಪರಿಸ್ಥಿತಿಯ ಮಧ್ಯೆ ಸರ್ಕಾರ ವೆಂಟಿಲೇಟರ್‌ಗಳ ಖರೀದಿಗೆ ಸಂಬಂಧಿಸಿದ ಹಗರಣದಲ್ಲಿ ತೊಡಗಿದ್ದು, ದೇಶದ ಜನರನ್ನು ಮರುಳು ಮಾಡಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.

ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ವಕ್ತಾರ ಗೌರವ್ ವಲ್ಲಭ್, ದೇಶದಲ್ಲಿ ದೃಢಪಟ್ಟ ಪ್ರಕರಣಗಳು 6.7 ಲಕ್ಷ ತಲುಪಿವೆ. ಕಳೆದ 24 ಗಂಟೆಗಳಲ್ಲಿ ಹೊಸ ಸಾವುಗಳ ಸಂಖ್ಯೆಯಲ್ಲಿ ದಾಖಲೆಯ  ಏರಿಕೆ ಕಂಡುಬಂದಿದೆ. ರೋಗದಿಂದ ಸಾವನ್ನಪ್ಪಿದವರ ಸಂಖ್ಯೆ 20,000 ಸನಿಹದಲ್ಲಿದೆ ಎಂದು ಹೇಳಿದರು.

ಸರ್ಕಾರ 40,000 ವೆಂಟಿಲೇಟರ್‌ಗಳ ಖರೀದಿಗೆ ಬೇಡಿಕೆ ಪ್ರಸ್ತಾವ ಸಲ್ಲಿಸಿದೆ. ಅನೇಕ ಕಂಪನಿಗಳು ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ. ಇದೇ ಹಣದಿಂದ ವೆಂಟಿಲೇಟರ್‍ ಗಳನ್ನು ಖರೀದಿಸಲಾಗುತ್ತಿದೆಯೇ? ಎಂದು ವಲ್ಲಭ್‍ ಪ್ರಶ್ನಿಸಿದ್ದಾರೆ.

ಮಾರ್ಚ್ 31ರಂದು ಪಿಎಂ-ಕೇರ್ಸ್ ನಿಧಿ ಮೂಲಕ ಸ್ಕ್ಯಾನ್ ರೆ ಟೆಕ್ನಾಲಜಿಸ್ ಕಂಪನಿಯಿಂದ 30 ಸಾವಿರ ಹಾಗೂ ಅಗ್ವಾ ಹೆಲ್ತ್ ಕೇರ್ ನಿಂದ 10 ಸಾವಿರ ವೆಂಟಿಲೇಟರ್ ಸೇರಿದಂತೆ ಒಟ್ಟು 40 ಸಾವಿರ ವೆಂಟಿಲೇಟರ್ ಗಳ ಖರೀದಿಗೆ ಸರ್ಕಾರ ಆದೇಶಿಸಿದೆ.ನಂತರ ಸರ್ಕಾರದಿಂದ ನಡೆಯಲ್ಪಡುತ್ತಿರುವ ಕೋವಿಡ್ ಆಸ್ಪತ್ರೆಗಳಿಗಾಗಿ 50 ಸಾವಿರ ವೆಂಟಿಲೇಟರ್ ಪೂರೈಕೆಗಾಗಿ 2 ಸಾವಿರ ಕೋಟಿಯನ್ನು ಪಿಎಂ-ಕೇರ್ಸ್ ಫಂಡ್ ನಲ್ಲಿ  ಮೀಸಲು ಇಡಲಾಗಿದೆ. ಇದಕ್ಕೂ ಮುಂಚೆ ಮಾಡಿರುವ 40 ವೆಂಟಿಲೇಟರ್ ಗಳ ಆರ್ಡರ್ ಜೊತೆಗೆ 50 ಸಾವಿರ ವೆಂಟಿಲೇಟರ್ ಗಳ ಖರೀದಿಗೆ ಪಿಎಂ-ಕೇರ್ಸ್ ಫಂಡ್ ಮೂಲಕ ಆದೇಶಿಸಲಾಗಿದೆಯೇ, ಅವರೆಡು ಬೇರೆ ಬೇರೆಯೇ ಎಂದು ಪ್ರಶ್ನಿಸಿದರು.

ಪ್ರಧಾನ ಮಂತ್ರಿ ಕಾರ್ಯಾಲಯದ ಹೇಳಿಕೆ ಪ್ರಕಾರ, ಜೂನ್ 23ರವರೆಗೂ ಕೇವಲ 1,340 ವೆಂಟಿಲೇಟರ್ ಗಳನ್ನು ಪೂರೈಸಲಾಗಿದೆ ಎಂದು ಹೇಳಿದ ಅವರು, ಪ್ರತಿ ವೆಂಟಿಲೇಟರ್ ಗಳಿಗೆ 1 ಲಕ್ಷದ 50 ಸಾವಿರ ಎಂದು ಅಗ್ವಾ ಹೇಲ್ತ್ ಕೇರ್ ಕಂಪನಿ ಹೇಳುವಾಗ ಪ್ರತಿ ವೆಂಟಿಲೇಟರ್ ಗಳಿಗೆ 4 ಲಕ್ಷದಂತೆ ಸರ್ಕಾರ ಆರ್ಡರ್ ಮಾಡಿದೆ.1 ಲಕ್ಷದ 50 ಸಾವಿರಕ್ಕೆ ವೆಂಟಿಲೇಟರ್ ದೊರೆಯುವಾಗ ಪಿಎಂ-ಕೇರ್ಸ್ ಫಂಡ್ ನಲ್ಲಿ ಏಕೆ 4 ಲಕ್ಷ ಹಂಚಿಕೆ ಮಾಡಲಾಯಿತು.ಹೆಚ್ಚುವರಿ ಹಣ ಏಲ್ಲಿಗೆ ಹೋಯಿತು ಅನ್ನೋದು ಗೊತ್ತಾಗಬೇಕಾಗಿದೆ ಎಂದರು.

ವೆಂಟಿಲೇಟರ್  ಖರೀದಿಗೆ ಆದೇಶಿಸುವಾಗ ಟೆಂಡರ್ ಹಾಗೂ ಬಿಡ್ಡಿಂಗ್ ಪ್ರಕ್ರಿಯೆ ನಡೆದಿದೆಯೇ ಎಂದು ಗೌರವ್ ವಲ್ಲಭ್ ಕೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com