ನನ್ನ ಪತಿ ಮಾಡಿದ್ದು ತಪ್ಪು ಕೆಲಸ, ಈ ದುರಾದೃಷ್ಟಕ್ಕೆ ಅರ್ಹರಾಗಿದ್ದರು: ಪತ್ನಿ ರಿಚಾ

ಎನ್ ಕೌಂಟರ್ ನಲ್ಲಿ ಪೊಲೀಸರಿಂದ ಹತ್ಯೆಗೀಡಾದ ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್ ದುಬೆಯ ಪತ್ನಿ ಪ್ರತಿಕ್ರಿಯೆ ನೀಡಿದ್ದಾಳೆ.
ವಿಕಾಸ್ ದುಬೆಯ ಎನ್ ಕೌಂಟರ್ ನಡೆದ ಸ್ಥಳ
ವಿಕಾಸ್ ದುಬೆಯ ಎನ್ ಕೌಂಟರ್ ನಡೆದ ಸ್ಥಳ

ಲಕ್ನೊ: ಎನ್ ಕೌಂಟರ್ ನಲ್ಲಿ ಪೊಲೀಸರಿಂದ ಹತ್ಯೆಗೀಡಾದ ಉತ್ತರ ಪ್ರದೇಶದ ಕುಖ್ಯಾತ ರೌಡಿ ವಿಕಾಸ್ ದುಬೆಯ ಪತ್ನಿ ಪ್ರತಿಕ್ರಿಯೆ ನೀಡಿದ್ದಾಳೆ.

ತನ್ನ ಪತಿ ಮಾಡುತ್ತಿದ್ದ ಕೆಲಸ ತಪ್ಪಾಗಿದ್ದು ಜೀವನದಲ್ಲಿ ಮಾಡಿದ ದುಷ್ಕೃತ್ಯಗಳಿಗೆ ಸರಿಯಾಗಿ ಅಂತ್ಯ ಸಿಕ್ಕಿದೆ ಎಂದು ಹೇಳಿದ್ದಾಳೆ. ನಿನ್ನೆ ಪೊಲೀಸರ ತೀವ್ರ ಭದ್ರತೆ ಮಧ್ಯೆ ವಿಕಾಸ್ ದುಬೆಯ ಅಂತ್ಯಸಂಸ್ಕಾರ ನೆರವೇರಿತು.

ವಿಕಾಸ್ ದುಬೆಯ ಪತ್ನಿ ರಿಚಾ ಬೈರೊಘಾಟ್ ಗೆ ತನ್ನ ಪತಿಯ ಅಂತ್ಯಸಂಸ್ಕಾರಕ್ಕೆ ಮಗನ ಜತೆಗೂಡಿ ಬಂದಿದ್ದಳು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಸಿಟ್ಟಾಗಿ ಆಕ್ರೋಶ ವ್ಯಕ್ತಪಡಿಸಿದ್ದಾಳೆ.

ವಿಕಾಸ್ ದುಬೆಯ ಬಾವ ದಿನೇಶ್ ತಿವಾರಿ ಆತನ ಅಂತ್ಯಸಂಸ್ಕಾರ ನೆರವೇರಿಸಿದ್ದು, ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಿತು ಎಂದು ಎಸ್ಪಿ ಬ್ರಿಜೇಶ್ ಶ್ರೀವಾಸ್ತವ ತಿಳಿಸಿದ್ದಾರೆ.

ಉಜ್ಜೈನಿಯಿಂದ ಲಕ್ನೊಗೆ ವಿಕಾಸ್ ದುಬೆಯನ್ನು ಪೊಲೀಸರು ಕಾರಿನಲ್ಲಿ ಕರೆತರುತ್ತಿದ್ದ ವೇಳೆ ನಗರದ ಹೊರವಲಯದಲ್ಲಿ ರಸ್ತೆ ಮಧ್ಯೆ ಕಾರು ಮಗುಚಿಬಿದ್ದಿತು. ಈ ವೇಳೆ ವಿಕಾಸ್ ದುಬೆ ಕಾರಿನಿಂದ ಹೊರಗೆ ಬಂದು ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಈ ವೇಳೆ ಎನ್ ಕೌಂಟರ್ ನಡೆದು ವಿಕಾಸ್ ದುಬೆ ಹತ್ಯೆಯಾಗಿದೆ.

ಕಳೆದ ಜುಲೈ 2ರಂದು ವಿಕಾಸ್ ದುಬೆಯನ್ನು ಬಿಕ್ರು ಗ್ರಾಮದ ಹತ್ತಿರ ಬಂಧಿಸಲು ಹೋಗಿದ್ದಾಗ ಪೊಲೀಸರ ಮೇಲೆ ಆತ ಮತ್ತು ಆತನ ಸಹಚರರು ದಾಳಿ ಮಾಡಿ 8 ಮಂದಿ ಪೊಲೀಸರು ಹುತಾತ್ಮರಾಗಿದ್ದರು.

ಈ ಬಗ್ಗೆ ವಿಕಾಸ್ ದುಬೆಯ ಪತ್ನಿ ಬಳಿ ನಿಮ್ಮ ಪತಿ ಈ ರೀತಿ ಅಂತ್ಯ ಕಾಣಬೇಕಾಗುತ್ತದೆ ಎಂದು ನೀವು ಭಾವಿಸಿದ್ದಿರೇ ಎಂದು ಕೇಳಿದಾಗ ಹೌದೌದು,ವಿಕಾಸ್ ತಪ್ಪು ಮಾಡಿದ್ದಾರೆ, ಹೀಗಾಗಿ ಅವರಿಗೆ ಈ ರೀತಿ ಅಂತ್ಯ ಸಿಗಬೇಕಾಗಿದ್ದು ಅನಿವಾರ್ಯವಾಗಿತ್ತು ಎಂದು ಹೇಳಿ ನೀವೆಲ್ಲಾ ಇಲ್ಲಿಗೆ ಬಂದು ನನಗೇಕೆ ತೊಂದರೆ ಕೊಡುತ್ತೀರಿ, ಇಲ್ಲಿಂದ ಹೋಗಿ ಎಂದು ಮಾಧ್ಯಮದವರತ್ತ ಸಿಟ್ಟಿನಿಂದ ಹೇಳುತ್ತಾ ಈ ಎನ್ ಕೌಂಟರ್ ಆಗಲು ನೀವು ಕೂಡ ಕಾರಣ ಎಂದು ಬೊಬ್ಬಿಟ್ಟಳು.

ಅಂತ್ಯಕ್ರಿಯೆಯಾದ ನಂತರ ಪತ್ನಿ ಮತ್ತು ಮಗನನ್ನು ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರು. ವಿಕಾಸ್ ದುಬೆಯ ತಂದೆ ಮಾತ್ರ ಪೊಲೀಸರು ಮಾಡಿದ ಕೆಲಸ ಸರಿಯಾಗಿದೆ ಎಂದಿದ್ದಾರೆ. ಮಗನ ಅಂತ್ಯಸಂಸ್ಕಾರಕ್ಕೆ ಹೋಗುವುದಿಲ್ಲ, ಪೊಲೀಸರು ಸರಿಯಾದ ಬುದ್ದಿ ಕಲಿಸಿದ್ದಾರೆ ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com