ರಾಜಸ್ಥಾನ: ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚನೆಗೆ ಸಚಿನ್ ಪೈಲಟ್ ಬಣದ ಶಾಸಕರ ಒತ್ತಾಯ

ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವಂತೆ, ಸಚಿನ್ ಪೈಲಟ್ ಗುಂಪಿನ ಕೆಲ ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಇರುವ ಶಾಸಕರ ಬೆಂಬಲ ತಿಳಿಯಲು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಸಚಿನ್ ಪೈಲಟ್
ಸಚಿನ್ ಪೈಲಟ್

ಜೈಪುರ: ರಾಜಸ್ಥಾನದಲ್ಲಿ ರಾಜಕೀಯ ಬಿಕ್ಕಟ್ಟು ತಲೆದೋರಿರುವಂತೆ, ಸಚಿನ್ ಪೈಲಟ್ ಗುಂಪಿನ ಕೆಲ ಶಾಸಕರು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರಿಗೆ ಇರುವ ಶಾಸಕರ ಬೆಂಬಲ ತಿಳಿಯಲು ವಿಧಾನಸಭೆಯಲ್ಲಿ ವಿಶ್ವಾಸಮತ ಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ತಮ್ಮಗೆ 109 ಶಾಸಕರ ಬೆಂಬಲ ಇರುವುದಾಗಿ ಅಶೋಕ್ ಗೆಹ್ಲೋಟ್ ಗುಂಪಿನ ಶಾಸಕರು ಹೇಳುತ್ತಿದ್ದಾರೆ. ಆದರೆ, ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚನೆ ಪ್ರಕ್ರಿಯೆ ನಡೆಯಬೇಕು. ಇದರಲ್ಲಿ ಅಶೋಕ್ ಗೆಹ್ಲೋಟ್ ಅವರಿಗೆ 109 ಶಾಸಕರ ಬೆಂಬಲ ಇದೆಯೇ ಎಂಬುದು ಗೊತ್ತಾಗಲಿದೆ ಎಂದು ಜೈಪುರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಸಭೆಗೆ ಗೈರು ಹಾಜರಾಗಿದ್ದ ಸಚಿನ್ ಪೈಲಟ್ ಗುಂಪಿನ ಶಾಸಕ ರಮೇಶ್ ಮೀನಾ ಹೇಳಿದ್ದಾರೆ.

ಸೋಮವಾರ ಹಾಗೂ ಮಂಗಳವಾರ ಜೈಪುರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದಿಂದ ದೂರ ಉಳಿದಿದ್ದ ಶಾಸಕರಲ್ಲಿ ರಮೇಶ್ ಮೀನಾ ಕೂಡಾ ಒಬ್ಬರಾಗಿದ್ದು, ಅವರನ್ನು ಸಚಿನ್ ಪೈಲಟ್ ಹಾಗೂ ವಿಶ್ವೇಂದ್ರ ಸಿಂಗ್ ಜೊತೆಗೆ ಇಂದು ಕಾಂಗ್ರೆಸ್ ಸಂಪುಟದಿಂದ ಕಿತ್ತು ಹಾಕಲಾಗಿದೆ.

ಅಶೋಕ್ ಗೆಹ್ಲೋಟ್ ಅವರಿಗೆ 109 ಶಾಸಕರ ಬೆಂಬಲವಿದೆ ಎಂಬುದು ಸರಿಯಲ್ಲ ಎಂದು ಹಿರಿಯ ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಶಾಸಕ ಭನ್ವರ್ ಲಾಲ್ ಶರ್ಮಾ ಕೂಡಾ ಹೇಳಿದ್ದಾರೆ.

ಬಿಜೆಪಿ ಸೇರಲ್ಲ, ಆದರೆ, ನಾಯಕತ್ವ ಬದಲಾವಣೆಯಾಗಬೇಕಿದೆ. 109 ಶಾಸಕರ ಬೆಂಬಲವಿದೆ ಎಂಬುದು ಸಂಪೂರ್ಣ ಸುಳ್ಳು. ಕಾಂಗ್ರೆಸ್  107, ಇತರರು 22 ಶಾಸಕರು ಇದ್ದಾರೆ. ನಮ್ಮೊಂದಿಗೆ ಆರು ಮಂದಿ ಇದ್ದಾರೆ. 81ಕ್ಕೂ ಹೆಚ್ಚು ಶಾಸಕರು ಆ ಕಡೆ ಇದ್ದಾರೆ. ಇದನ್ನು ಹೊರತುಪಡಿಸಿ ಹೋಟೆಲ್ ನಲ್ಲಿ ಹಾಗೂ ಮಾಧ್ಯಮಗಳ  ಮುಂದೆ ಶಾಸಕರ ಪ್ರದರ್ಶನ ಮಾಡುವ ಅಗತ್ಯವೇನಿತ್ತು ಎಂದು ಶರ್ಮಾ ಪ್ರಶ್ನಿಸಿದ್ದಾರೆ.

ಒಂದು ಬಾರಿ ವಿಶ್ವಾಸಮತ ಯಾಚಿಸಿದರೆ ಪರಿಸ್ಥಿತಿ ಸ್ಪಷ್ಟವಾಗಲಿದೆ ಎಂದುಏಳು ಬಾರಿ ಶಾಸಕರಾಗಿರುವ ಶರ್ಮಾ ಒತ್ತಾಯಿಸಿದ್ದಾರೆ. ಮತ್ತೋರ್ವ ಕಾಂಗ್ರೆಸ್ ಶಾಸಕ ದೀಪೇಂದರ್ ಸಿಂಗ್ ಶೇಖಾವತ್ ಕೂಡಾ ಸೋಮವಾರ ಇದೇ ರೀತಿಯಲ್ಲಿ ಒತ್ತಾಯಿಸಿದ್ದಾರೆ.

ಪಕ್ಷಕ್ಕಾಗಿ ಐದು ವರ್ಷ ದುಡಿದ ಮುಖಂಡರು ಹಾಗೂ ಕಾರ್ಯಕರ್ತರನ್ನು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿರ್ಲಕ್ಷಿಸಿದ್ದಾರೆ ಎಂದು ಕಾಂಗ್ರೆಸ್ ಶಾಸಕ , ಸಚಿನ್ ಪೈಲಟ್ ಆಪ್ತ ಮುರಾರಿ ಲೀಲಾ ಮೀನು ಆರೋಪಿಸಿದ್ದಾರೆ.

ಇನ್ನೊಂದೆಡೆ ಬಂಡಾಯ ನಾಯಕ ಸಚಿನ್ ಪೈಲಟ್ ಬಿಜೆಪಿಯೊಂದಿಗೆ ಕೈ ಜೋಡಿಸಿದ್ದಾರೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಆರೋಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com