ನಿರ್ಭಯಾ ಹತ್ಯಾಚಾರಿಗಳಿಗೆ ನಾಳೆ ಗಲ್ಲು ಫಿಕ್ಸ್..?; ಶಿಕ್ಷೆಗೆ ತಡೆ ನೀಡುವಂತೆ ಸಲ್ಲಿಸಿದ್ದ ಅರ್ಜಿ ವಜಾ!
ನವದೆಹಲಿ: ಕಳೆದ 8 ವರ್ಷಗಳಿಂದ ಕುತೂಹಲ ಕೆರಳಿಸಿದ್ದ ನಿರ್ಭಯಾ ಹತ್ಯಾಚಾರಿಗಳ ಗಲ್ಲು ಶಿಕ್ಷೆ ನಾಳೆ ಜಾರಿಯಾಗುವುದೇ..? ಇಂತಹುದೊಂದು ಆಸೆ ಇದೀಗ ಎಲ್ಲ ಭಾರತೀಯರಲ್ಲೂ ಹುಟ್ಟಿದ್ದು, ಗಲ್ಲು ಶಿಕ್ಷೆಗೆ ತಡೆ ನೀಡುವಂತೆ ಅಪರಾಧಿ ಸಲ್ಲಿಸಿದ್ದ ಅರ್ಜಿಯನ್ನೂ ದೆಹಲಿ ಕೋರ್ಟ್ ವಜಾಗೊಳಿಸಿದೆ.
ನಿರ್ಭಯಾ ಪ್ರಕರಣದ ಪ್ರಮುಖ ಅಪರಾಧಿ ಪವನ್ ಗುಪ್ತಾ ಸಲ್ಲಿಸಿದ್ದ ಕ್ಯುರೇಟಿವ್ ಅರ್ಜಿಯನ್ನು ದೆಹಲಿಯ ಪಾಟಿಯಾಲಾ ಹೌಸ್ ನ ಸೆಷನ್ಸ್ ಕೋರ್ಟ್ ಇಂದು ವಜಾಗೊಳಿಸಿದೆ. ಆ ಮೂಲಕ ನಿರ್ಭಯಾ ಹತ್ಯಾಚಾರಿಗಳು ಸಲ್ಲಿಕೆ ಮಾಡಿದ ಎಲ್ಲ ಅರ್ಜಿಗಳ ವಿಚಾರಣೆ ತಾರ್ಕಿಕ ಅಂತ್ಯಕಂಡಿದ್ದು, ನಾಳೆ ಎಲ್ಲ ನಾಲ್ಕೂ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನು ತನ್ನ ಅರ್ಜಿಯಲ್ಲಿ ಅಪರಾಧಿ ಪವನ್ ಗುಪ್ತಾ ಪರ ವಕೀಲರು, 'ಈ ಹಿಂದೆ ನ್ಯಾಯಾಲಯ ನೀಡಿದ್ದ ಗಲ್ಲು ಶಿಕ್ಷೆಯಲ್ಲಿ ಲೋಪದೋಷಗಳಿದ್ದು, ನ್ಯಾಯಾಲಯ ಕೆಲ ಪ್ರಮುಖ ಅಂಶಗಳನ್ನು ಪರಿಗಣಿಸದೇ ತೀರ್ಪು ನೀಡಿದೆ. ಹೀಗಾಗಿ ತಮಗೆ ನೀಡಿರುವ ಗಲ್ಲು ಶಿಕ್ಷೆಗೆ ತಡೆ ನೀಡಬೇಕು ಎಂದು ಹೇಳಿದ್ದರು. ಅಲ್ಲದೆ ತಮ್ಮ ಕಕ್ಷೀದಾರ ಮತ್ತೆ ರಾಷ್ಟ್ರಪತಿಗಳಿಗೆ ಕ್ಷಮಾದಾನ ಅರ್ಜಿ ಸಲ್ಲಿಕೆ ಮಾಡಿದ್ದು, ಇದರ ವಿಚಾರಣೆ ಕೂಡ ಇನ್ನೂ ಪೂರ್ಣಗೊಂಡಿಲ್ಲ ಎಂದು ವಾದ ಮಂಡಿಸಿದ್ದರು.
ಈ ವಾದಗಳನ್ನು ಅಲ್ಲಗಳೆದ ದೆಹಲಿ ಸೆಷನ್ಸ್ ಕೋರ್ಟ್ ಪವನ್ ಗುಪ್ತಾ ಅರ್ಜಿಯನ್ನು ವಜಾಗೊಳಿಸಿದೆ. ಹೀಗಾಗಿ ಈ ಹಿಂದಿನ ತೀರ್ಪಿನಂತೆ ನಾಳೆ ಮುಂಜಾನೆ ನಿರ್ಭಯಾ ಪ್ರಕರಣದ ಅಪರಾಧಿಗಳನ್ನು ಗಲ್ಲಿಗೇರಿಸಬೇಕಿದೆ. ಆದರೆ ಮತ್ತೊಂದು ತುದಿಯಲ್ಲಿ ನಿರ್ಭಯಾ ಹತ್ಯಾಚಾರಿಗಳನ್ನು ಪ್ರತ್ಯೇಕವಾಗಿ ಗಲ್ಲಿಗೇರಿಸಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಕೆ ಮಾಡಿದ್ದ ಅರ್ಜಿಯ ವಿಚಾರಣೆ ಇದೇ ಮಾರ್ಚ್ 5ರಂದು ನಡೆಯಲಿದೆ. ಹೀಗಾಗಿ ನಾಳೆ ಗಲ್ಲು ಶಿಕ್ಷೆ ಜಾರಿಯಾಗುತ್ತದೆಯೋ ಇಲ್ಲವೋ ಎಂಬ ಕುತೂಹಲ ಮೂಡಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ