ತಿಮ್ಮಪ್ಪನಿಗೂ ಕೊರೋನಾ ಎಫೆಕ್ಟ್: ಶಂಕಿತ ವ್ಯಕ್ತಿ ದೇಗುಲ ಪ್ರವೇಶ, ತಿರುಮಲ ಬಂದ್

ವಿಶ್ವದ ಶ್ರೀಮಂತ ದೇಗುಲ ಮತ್ತು ಪವಿತ್ರ ಯಾತ್ರಾ ಸ್ಥಳ ತಿರುಪತಿ ತಿರುಮಲದಲ್ಲೂ ಕೊರೋನಾ ಭೀತಿ ಆರಂಭವಾಗಿದ್ದು, ಕೊರೋನಾ ಶಂಕಿತ ವ್ಯಕ್ತಿಯೊಬ್ಬರು ದೇಗುಲಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಿಮ್ಮಪ್ಪನ ದರ್ಶನ ಬಂದ್ ಮಾಡಲು ನಿರ್ಧರಿಸಲಾಗಿದೆ.
ತಿರುಮಲ ಚೆಕ್ ಪೋಸ್ಚ್ ಬಂದ್
ತಿರುಮಲ ಚೆಕ್ ಪೋಸ್ಚ್ ಬಂದ್

ತಿರುಪತಿ: ವಿಶ್ವದ ಶ್ರೀಮಂತ ದೇಗುಲ ಮತ್ತು ಪವಿತ್ರ ಯಾತ್ರಾ ಸ್ಥಳ ತಿರುಪತಿ ತಿರುಮಲದಲ್ಲೂ ಕೊರೋನಾ ಭೀತಿ ಆರಂಭವಾಗಿದ್ದು, ಕೊರೋನಾ ಶಂಕಿತ ವ್ಯಕ್ತಿಯೊಬ್ಬರು ದೇಗುಲಕ್ಕೆ ಭೇಟಿ ನೀಡಿದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ತಿಮ್ಮಪ್ಪನ ದರ್ಶನ ಬಂದ್ ಮಾಡಲು ನಿರ್ಧರಿಸಲಾಗಿದೆ.

ಇಂದು ಕೊರೋನಾ ವೈರಸ್ ಲಕ್ಷಣಗಳಿದ್ದ ವೃದ್ಧರೊಬ್ಬರು ದೇವಸ್ಥಾನದ ಬಳಿ ಕುಸಿದು ಬಿದ್ದಿದ್ದು, ಅವರನ್ನು ತಿರುಪತಿಯ ಎಸ್ ವಿಐಎಂಎಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.ಅಂತೆಯೇ ಶಂಕಿತನೊಂದಿಗೆ ಇದ್ದ ಆತನ ಸಂಬಂಧಿಕರನ್ನೂ ಕೂಡ ಪ್ರತ್ಯೇಕವಾಗಿ ಇರಿಸಲಾಗಿದ್ದು, ತಿರುಮಲದ ಮಾಧವನಿಲಯದಲ್ಲಿ ಪ್ರತ್ಯೇಕ ಕೊಠಡಿಯಲ್ಲಿರಿಸಿ ತೀವ್ರ ನಿಗಾ ಇರಿಸಲಾಗಿದೆ ಎಂದು ತಿಳಿದುಬಂದಿದೆ.

ತಿರುಪತಿಯಲ್ಲಿ ವ್ಯಕ್ತಿಯೊಬ್ಬರು ಕುಸಿದಬಿದ್ದ ಘಟನೆಯ ಹಿನ್ನೆಲೆಯಲ್ಲಿ ತಿರುಪತಿ ಸೇರಿದಂತೆ ರಾಜ್ಯದ ಎಲ್ಲಾ ಪ್ರಮುಖ ದೇವಾಲಯ, ಮಸೀದಿ ಮತ್ತು ಚರ್ಚ್ ಗಳನ್ನು ಮಾರ್ಚ್ 31ರ ವರೆಗೆ ಬಂದ್ ಮಾಡಲಾಗುತ್ತಿದೆ ಎಂದು ಆಂಧ್ರ ಪ್ರದೇಶ ಆರೋಗ್ಯ ಸಚಿವ ಅಲ್ಲಕಲಿ ಕೃಷ್ಣ ಶ್ರೀನಿವಾಸ್ ಅವರು ಹೇಳಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ತಿರುಮಲ ದೇಗುಲವನ್ನು ಮಾರ್ಚ್ 31ರ ವರೆಗೆ ಸಾರ್ವಜನಿಕರಿಗೆ ಬಂದ್ ಮಾಡಲಾಗುತ್ತಿದೆ. ಆದರೆ ಅರ್ಚಕರು ನಿತ್ಯ ಪೂಜಾ ಕೈಂಕರ್ಯ ಮುಂದುವರೆಸಲಿದ್ದಾರೆ ಎಂದು ಟಿಟಿಡಿ ಕಾರ್ಯಕಾರಿ ಅಧಿಕಾರಿ ಎಕೆ ಸಿಂಘಾಲ್ ಅವರು ತಿಳಿಸಿದ್ದಾರೆ.

ಏಳು ದಿನಗಳ ನಂತರ ಪರಿಸ್ಥಿತಿ ನೋಡಿಕೊಂಡು ಮತ್ತೆ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡುವ ಬಗ್ಗೆ ಟಿಟಿಡಿ ನಿರ್ಧರಿಸಲಿದೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ತಿರುಮಲದಲ್ಲಿರುವ ಎಲ್ಲ ಭಕ್ತಾದಿಗಳನ್ನು ತಿರುಪತಿಗೆ ವಾಪಸ್ ಕಳುಹಿಸಲಾಗುತ್ತಿದ್ದು, ಇದರ ಮೊದಲ ಹಂತವಾಗಿ ಅಲಿಪಿರಿ ಮೂಲಕ ಕಾಲ್ನಡಿಗೆ ಭಕ್ತಾದಿಗಳನ್ನು ವಾಪಸ್ ಕಳುಹಿಸಲಾಗುತ್ತಿದೆ. ಕ್ರಮೇಣ ಬೆಟ್ಟದ ಮೇಲಿರುವ ಎಲ್ಲ ಭಕ್ತಾದಿಗಳನ್ನೂ ಕೆಳಗೆ ಕಳುಹಿಸಿ ಬಳಿಕ ದೇಗುಲವನ್ನು ತಾತ್ಕಾಲಿಕವಾಗಿ ಮುಚ್ಚಿ ಸ್ವಚ್ಛತಾ ಕಾರ್ಯ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಇನ್ನು ಈ ಬಗ್ಗೆ ಟಿಟಿಡಿ ಅಧ್ಯಕ್ಷ ವೈ ವಿ ಸುಬ್ಬಾ ರೆಡ್ಡಿ ಅವರು ಖಾಸಗಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದು, ಕಳೆದ ಹಲವು ದಿನಗಳಿಂದ ದೇಗಲುಕ್ಕೆ ಆಗಮಿಸದಂತೆ ಭಕ್ತಾದಿಗಳಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇವೆ. ಆದರೀಗ ದೇಗುಲವನ್ನು ಮುಚ್ಚಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಭಕ್ತರಿಗೆ ದೇಗುಲ ಮುಚ್ಚಿದರೂ ಅಲ್ಲಿನ ಅರ್ಚಕರು ನಿತ್ಯ ಪೂಜಾ ಕೈಂಕರ್ಯ ಮುಂದುವರೆಸಲಿದ್ದಾರೆ ಎಂದು ಹೇಳಿದ್ದಾರೆ.

ಇನ್ನು ಕೊರೋನಾ ವೈರಸ್ ಹರಡುವುದನ್ನು ತಡೆಯುವುದಕ್ಕಾಗಿ ಪುರಿ ಜಗನ್ನಾಥ್ ದೇವಸ್ಥಾನ ಸೇರಿದಂತೆ ದೇಶಾದ್ಯಂತ ಬಹುತೇಕ ಧಾರ್ಮಿಕ ಕ್ಷೇತ್ರಗಳನ್ನು ಬಂದ್ ಮಾಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com