ಕನಿಕಾ ಕಪೂರ್ ಗೆ ಕೊರೋನಾ ಸೋಂಕು: ರಾಷ್ಟ್ರಪತಿ ಭವನ, ಸಂಸತ್ತಿನವರೆಗೆ ತಟ್ಟಿದ ಭೀತಿ, ರಾಷ್ಟ್ರಪತಿಗಳಿಗೆ ತಪಾಸಣೆ

ಮಾರಕ ಕೊರೋನಾ ವೈರಸ್ ಸೋಂಕಿನ ಬಿಸಿ ಇದೀಗ ರಾಷ್ಟ್ರಪತಿ ಭವನ ಮತ್ತು ಸಂಸತ್ತಿಗೂ ತಟ್ಟಿದೆ. ಅದಕ್ಕೆ ಕಾರಣ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು.
ರಾಷ್ಟ್ರಪತಿ ಭವನದಲ್ಲಿ ನಡೆದ ಉಪಹಾರ ಕೂಟದಲ್ಲಿ ಉತ್ತರ ಪ್ರದೇಶ, ರಾಜಸ್ತಾನ ಸಂಸದರಿಗೆ ರಾಷ್ಟ್ರಪತಿಗಳಿಂದ ಸ್ವಾಗತ, ಬಲ ಬದಿಯಲ್ಲಿರುವವರು ದುಶ್ಯಂತ್ ಸಿಂಗ್
ರಾಷ್ಟ್ರಪತಿ ಭವನದಲ್ಲಿ ನಡೆದ ಉಪಹಾರ ಕೂಟದಲ್ಲಿ ಉತ್ತರ ಪ್ರದೇಶ, ರಾಜಸ್ತಾನ ಸಂಸದರಿಗೆ ರಾಷ್ಟ್ರಪತಿಗಳಿಂದ ಸ್ವಾಗತ, ಬಲ ಬದಿಯಲ್ಲಿರುವವರು ದುಶ್ಯಂತ್ ಸಿಂಗ್

ನವದೆಹಲಿ:ಮಾರಕ ಕೊರೋನಾ ವೈರಸ್ ಸೋಂಕಿನ ಬಿಸಿ ಇದೀಗ ರಾಷ್ಟ್ರಪತಿ ಭವನ ಮತ್ತು ಸಂಸತ್ತಿಗೂ ತಟ್ಟಿದೆ. ಅದಕ್ಕೆ ಕಾರಣ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ಕೊರೋನಾ ಸೋಂಕು ಕಾಣಿಸಿಕೊಂಡಿರುವುದು.

ನಿನ್ನೆ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಗೆ ಕೊರೋನಾ ಸೋಂಕು ಇರುವ ವಿಚಾರ ದೃಢಪಟ್ಟಿತ್ತು. ಅವರು ಇತ್ತೀಚೆಗೆ ಲಕ್ನೊದ ಆಪ್ತರ ನಿವಾಸದಲ್ಲಿ ಹೋಳಿ ಹಬ್ಬದ ಪಾರ್ಟಿಯೊಂದರಲ್ಲಿ ಭಾಗಿಯಾಗಿದ್ದರು. ಆ ಪಾರ್ಟಿಗೆ ರಾಜಸ್ತಾನ ಮಾಜಿ ಮುಖ್ಯಮಂತ್ರಿ, ರಾಜಕಾರಣಿ ವಸುಂಧರಾ ರಾಜೇ ಮತ್ತು ಅವರ ಪುತ್ರ ಸಂಸದ ದುಶ್ಯಂತ್ ಸಿಂಗ್ ಸೇರಿದಂತೆ ಹಲವರು ಆಗಮಿಸಿ ಒಟ್ಟೊಟ್ಟಿಗೆ ನಿಂತು ಫೋಟೋಗಳನ್ನು ತೆಗೆಸಿಕೊಂಡಿದ್ದರು. 

ಪಾರ್ಟಿ ಮುಗಿಸಿಕೊಂಡು ದುಶ್ಯಂತ್ ಸಿಂಗ್ ಸಂಸತ್ತು ಕಲಾಪದಲ್ಲಿ ಕಳೆದ ವಾರ ಭಾಗಿಯಾಗಿದ್ದರು. ಆಗ ಇವರ ಸಂಪರ್ಕಕ್ಕೆ ಹಲವು ರಾಜ್ಯಸಭಾ ಮತ್ತು ಲೋಕಸಭಾ ಸದಸ್ಯರು ಬಂದಿದ್ದಾರೆ. ನಿನ್ನೆ ಕನಿಕಾಗೆ ಕೊರೋನಾ ದೃಢಪಟ್ಟ ನಂತರ ಇದೀಗ ದುಶ್ಯಂತ್ ಸಿಂಗ್ ಮತ್ತು ವಸುಂಧರಾ ರಾಜೆ ಕೂಡ ಮನೆಯಲ್ಲಿ ಸ್ವಯಂ ನಿರ್ಬಂಧ ವಿಧಿಸಿ ಉಳಿದುಕೊಂಡಿದ್ದಾರೆ.

ಆಗಿರುವ ಸಮಸ್ಯೆಯೇನು?: ದುಶ್ಯಂತ್ ಸಿಂಗ್ ಅವರು ಕೇವಲ ಕಲಾಪದಲ್ಲಿ ಭಾಗವಹಿಸಿ ಸುಮ್ಮನಾಗಲಿಲ್ಲ. ಮೊನ್ನೆ ಮಾರ್ಚ್ 18ರಂದು ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೆಹಲಿಯ ರಾಷ್ಟ್ರಪತಿ ಭವನದಲ್ಲಿ ಕೇಂದ್ರ ಸಚಿವರು, ಸಂಸದರು, ವಿರೋಧ ಪಕ್ಷದ ನಾಯಕರಿಗೆ ಉಪಹಾರ ಕೂಟ ಏರ್ಪಡಿಸಿದ್ದರು. ಅದಕ್ಕೆ ದುಶ್ಯಂತ್ ಸಿಂಗ್ ಅವರು ಕೂಡ ರಾಜಸ್ತಾನದ ಸಂಸದರ ಜೊತೆ ಆಗಮಿಸಿದ್ದರು. 

ಅಷ್ಟೇ ಅಲ್ಲ ಈ ಉಪಹಾರ ಕೂಟದಲ್ಲಿ ಕೇಂದ್ರದ ಮಾಜಿ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್, ಬಿಜೆಪಿ ಸಂಸದೆ ಹೇಮಮಾಲಿನಿ, ಕೇಂದ್ರ ಸಚಿವ ಅರ್ಜುನ್ ರಾಮ್ ಮೆಘವಾಲ್, ಸಚಿವೆ ಮನೇಕಾ ಗಾಂಧಿ, ಕಾಂಗ್ರೆಸ್ ಸಂಸದೆ ಕುಮಾರಿ ಸೆಲ್ಜಾ, ಬಾಕ್ಸರ್ ಮೇರಿ ಕೊಮ್ ಸೇರಿದಂತೆ ಇನ್ನೂ ಹಲವರು ಭಾಗವಹಿಸಿದ್ದರು.

ನಂತರ ದುಶ್ಯಂತ್ ಸಿಂಗ್ ಅವರು ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಭಾಗವಹಿಸಿದ್ದು ಅದರಲ್ಲಿ ತೃಣಮೂಲ ಸಂಸದೆ ಡೆರೆಕ್ ಒ ಬ್ರೆಯಾನ್ ದುಶ್ಯಂತ್ ಸಿಂಗ್ ಅವರ ಹತ್ತಿರವೇ ಕುಳಿತಿದ್ದರು. ಇದೀಗ ಬ್ರಿಯೆನ್ ಕೂಡ ಮನೆಯಲ್ಲಿಯೇ ಉಳಿದುಕೊಂಡಿದ್ದಾರೆ. ಇದೀಗ ಉಪಹಾರ ಕೂಟದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದುಶ್ಯಂತ್ ಸಿಂಗ್ ಅವರನ್ನು ಭೇಟಿ ಮಾಡಿದ್ದರಿಂದ ಅವರು ಕೂಡ ಆರೋಗ್ಯ ತಪಾಸಣೆಗೆ ಒಳಗಾಗಲಿದ್ದಾರೆ.

ಇನ್ನು ಸತ್ಯವನ್ನು ಮರೆಮಾಚಿ ಸಾರ್ವಜನಿಕರನ್ನು ಅಪಾಯಕ್ಕೆ ತಳ್ಳಿದ ಆರೋಪದ ಮೇಲೆ ಕನಿಕಾ ಕಪೂರ್ ವಿರುದ್ಧ ಕೇಸು ದಾಖಲಾಗಿದ್ದು ನಿನ್ನೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕನಿಕಾ ಅವರು ಭೇಟಿ ಮಾಡಿದ್ದ ಸ್ಥಳಗಳಾದ ಲಕ್ನೊ, ನೊಯ್ಡಾ ಮತ್ತು ಕಾನ್ಪುರಗಳಲ್ಲಿ ಸ್ಥಳಗಳನ್ನು ಸ್ವಚ್ಛಗೊಳಿಸುವಂತೆ ಆದೇಶ ನೀಡಿದ್ದಾರೆ. ಅವರ ಜೊತೆ ಯಾರೆಲ್ಲಾ ಸಂಪರ್ಕಕ್ಕೆ ಬಂದಿದ್ದರು ಎಂದು ಸಂಬಂಧಪಟ್ಟ ಆಡಳಿತಾಧಿಕಾರಿಗಳು ಜನರನ್ನು ಸಂಪರ್ಕಿಸುವಂತೆ ಸೂಚಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com