ವಿಶಾಖಪಟ್ಟಣದಲ್ಲಿ ವಿಷಾನಿಲ ಸೋರಿಕೆ, ಕನಿಷ್ಠ 5 ಸಾವು, ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥ!

ಅಂಧ್ರ ಪ್ರದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿಗಳಿಸಿದ್ದ ವಿಶಾಖಪಟ್ಟಣದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಅಧಿಕ ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.
ವಿಷಾನಿಲ ಸೋರಿಕೆಯಿಂದ ಅಸ್ವಸ್ಥರಾಗಿರುವ ಜನ
ವಿಷಾನಿಲ ಸೋರಿಕೆಯಿಂದ ಅಸ್ವಸ್ಥರಾಗಿರುವ ಜನ

ವಿಶಾಖಪಟ್ಟಣ: ಆಂಧ್ರಪ್ರದೇಶದ ವಾಣಿಜ್ಯ ರಾಜಧಾನಿ ಎಂದೇ ಖ್ಯಾತಿಗಳಿಸಿದ್ದ ವಿಶಾಖಪಟ್ಟಣದ ರಾಸಾಯನಿಕ ಕಾರ್ಖಾನೆಯೊಂದರಲ್ಲಿ ವಿಷಾನಿಲ ಸೋರಿಕೆಯಾದ ಪರಿಣಾಮ ಕನಿಷ್ಠ 5 ಮಂದಿ ಸಾವನ್ನಪ್ಪಿದ್ದು, 1 ಸಾವಿರಕ್ಕೂ ಅಧಿಕ ಮಂದಿ ತೀವ್ರ ಅಸ್ವಸ್ಥರಾಗಿದ್ದಾರೆ.

ಇಂದು ಮುಂಜಾನೆ ಸುಮಾರು 3 ಗಂಟೆ ಹೊತ್ತಿನಲ್ಲಿ ವಿಶಾಖಪಟ್ಟಣಂನ ಗೋಪಾಲಪಟ್ಟಣದ, ನಾಯ್ಡು ತೋಟಾ ಸಮೀಪದ ಆರ್ ಆರ್ ವೆಂಕಟಪುರಂನಲ್ಲಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರೀಯಲ್ಲಿ ವಿಷಾನಿಲ ಸೋರಿಕೆಯಾಗಿದ್ದು, ಗಾಳಿಯಲ್ಲಿ ವಿಷಾನಿಲ ಸುತ್ತಮುತ್ತಲ ಪ್ರದೇಶಗಳಿಗೆ  ಹರಡಿದೆ. ಪರಿಣಾಮ ಬೆಳಗ್ಗೆ ವಾಕಿಂಗ್ ಗೆ ಮತ್ತು ಇತರೆ ಕಾರ್ಯಗಳಿಗೆ ಬಂದವರು ವಿಷಾನಿಲವನ್ನು ಉಸಿರಾಡಿ ಕೂಡಲೇ ಅಸ್ವಸ್ಥರಾಗಿದ್ದಾರೆ. ಮೂಲಗಳ ಪ್ರಕಾರ ಸುಮಾರು 1 ಸಾವಿರಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದು, 5 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಇಂದು ಬೆಳಗ್ಗೆ ಸ್ಥಳೀಯರು ರಸ್ತೆಯಲ್ಲಿ ಪ್ರಜ್ಞಾಹೀನರಾಗಿ ಬಿದ್ದಿದ್ದವರನ್ನು ಕಂಡು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದು, ವಾಹನದಲ್ಲಿ ಬಂದ ಪೊಲೀಸರು ರಸ್ತೆಯಲ್ಲಿ ಬಿದ್ದಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಎಲ್ಲರೂ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರು ಎಂದು  ಹೇಳಲಾಗಿದೆ. ಈ ಪೈಕಿ ಇದೀಗ ಮೂವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಕಾರ್ಖಾನೆಯಿಂದ ಸೋರಿಕೆಯಾಗಿರುವ ವಿಷಾನಿಲ ಗಾಳಿಯೊಂದಿಗೆ ಮಿಶ್ರಣವಾಗಿದ್ದು, ಸುಮಾರು 3 ಕಿ.ಮೀ ವ್ಯಾಪ್ತಿಯವರೆಗೂ ಪ್ರಸರಿಸಿರಬಹುದು ಎಂದು ಶಂಕಿಸಲಾಗಿದೆ. 

ಘಟನಾ ಸ್ಥಳಕ್ಕೆ ವಿಶಾಖಪಟ್ಟಣಂ ಜಿಲ್ಲಾಧಿಕಾರಿ ವಿ ವಿನಯ್ ಚಾಂದ್ ಅವರು ದೌಡಾಯಿಸಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು2 ಗಂಟೆಯಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲಾಗಿದ್ದು, ಅಸ್ವಸ್ಥರೆಲ್ಲರನ್ನೂ ಆಸ್ಪತ್ರೆಗೆ ಸಾಗಿಸಲಾಗಿದೆ. ಅಂತೆಯೇ ಸ್ಥಳೀಯರನ್ನು  ಮನೆಯಿಂದ ಹೊರಗೆ ಬರದಂತೆ ಸೂಚಿಸಲಾಗಿದೆ. ಉಸಿರಾಟದ ತೊಂದರೆ ಇರುವವರಿಗೆ ಕೃತಕ ಆಮ್ಲಜನಕದ ವ್ಯವಸ್ಥೆ ಮಾಡಲಾಗಿದೆ. ಅಸ್ವಸ್ಥರನ್ನು ಆಸ್ಪತ್ರೆಗೆ ಸಾಗಿಸಲು ರಾಷ್ಟ್ಪೀಯ ವಿಪತ್ತು ನಿರ್ವಹಣಾ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳಗಳನ್ನು ನಿಯೋಜಿಸಲಾಗಿದ್ದು,. ಇದೀಗ  ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ ಎಂದು ಹೇಳಿದ್ದಾರೆ.

ಕಾರ್ಖಾನೆಯಿಂದ ವಿಷಾನಿಲ ಸೋರಿಕೆಗೆ ನಿಖರ ಕಾರಣ ತಿಳಿದುಬಂದಿಲ್ಲವಾದರೂ, ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಪ್ರಸ್ತುತ ವಿಷಾನಿಲ ಸೋರಿಕೆಯಾಗಿರುವ ಎಲ್ ಜಿ ಪಾಲಿಮರ್ಸ್ ಇಂಡಸ್ಟ್ರಿ ಸಂಸ್ಥೆ 1961ರಲ್ಲಿ ನಿರ್ಮಾಣವಾಗಿತ್ತು. ಆರಂಭದಲ್ಲಿ ಇದು ಹಿಂದೂಸ್ತಾನ್ ಪಾಲಿಮರ್ಸ್ ಎಂದು ಹೆಸರಿತ್ತು. ಬಳಿಕ 1978ರಲ್ಲಿ ಮೆಕ್ ಡೊವೆಲ್ ಮತ್ತು ಕಂಪನಿ ಲಿಮಿಟೆಡ್ ಆಫ್ ಯುಬಿ ಸಮೂಹದೊಂದಿಗೆ  ವಿಲೀನಗೊಂಡಿತ್ತು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com