ಪ್ರಧಾನಿ ಮೋದಿ ಆರ್ಥಿಕ ಪ್ಯಾಕೆಜ್ ಘೋಷಣೆ: ರಾಜಕೀಯ ನಾಯಕರು ಏನೆಂದರು?

ಕೊರೋನಾ ವೈರಸ್ ತಡೆಗೆ ದೇಶಾದ್ಯಂತ 3ನೇ ಹಂತದ ಲಾಕ್ ಡೌನ್ ಚಾಲ್ತಿಯಲ್ಲಿರುವಾಗ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದಕ್ಕೆ ರಾಜಕೀಯ ನಾಯಕರು ಪರ-ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)
ಪ್ರಧಾನ ಮಂತ್ರಿ ನರೇಂದ್ರ ಮೋದಿ(ಸಂಗ್ರಹ ಚಿತ್ರ)

ನವದೆಹಲಿ: ಕೊರೋನಾ ವೈರಸ್ ತಡೆಗೆ ದೇಶಾದ್ಯಂತ 3ನೇ ಹಂತದ ಲಾಕ್ ಡೌನ್ ಚಾಲ್ತಿಯಲ್ಲಿರುವಾಗ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ 20 ಲಕ್ಷ ಕೋಟಿ ರೂಪಾಯಿಗಳ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದಕ್ಕೆ ರಾಜಕೀಯ ನಾಯಕರು ಪರ-ವಿರೋಧವಾಗಿ ಪ್ರತಿಕ್ರಿಯಿಸಿದ್ದಾರೆ.

ಕೋವಿಡ್19 ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು, ಆರ್ಥಿಕತೆಗೆ ಶಕ್ತಿ ತುಂಬಲು ಮತ್ತು ಸಂಕಷ್ಟ ಎದುರಿಸುತ್ತಿರುವ ಎಲ್ಲ ವರ್ಗಗಳ ಜನತೆಗೆ ನೆರವಾಗಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು 20 ಲಕ್ಷ ಕೋಟಿ ರೂ. ಮೊತ್ತದ (ನಮ್ಮ ಜಿಡಿಪಿಯ ಶೇ.10ರಷ್ಟು) ಅಭೂತಪೂರ್ವ ಆರ್ಥಿಕ ಪ್ಯಾಕೇಜ್ ಘೋಷಿಸಿರುವುದನ್ನು ಸ್ವಾಗತಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಆರ್ಥಿಕ ಪ್ಯಾಕೇಜ್ ಬಗ್ಗೆ ಸಚಿವೆ ನಿರ್ಮಲಾ ಸೀತಾರಾಮನ್ ವಿವರಣೆ ನೀಡಲಿದ್ದು ಈ ಪ್ಯಾಕೇಜ್ ಸ್ವಾವಲಂಬಿ ಭಾರತದ ನಿರ್ಮಾಣದಲ್ಲಿ ಮುಖ್ಯ ಪಾತ್ರ ವಹಿಸಲಿದೆ. ವಿಶ್ವವೇ ಭಾರತದ ಕೋವಿಡ್ -19 ವಿರುದ್ಧದ ಹೋರಾಟಕ್ಕೆ ಮೆಚ್ಚುಗೆ ಸೂಚಿಸಿದ್ದು ಇದರಲ್ಲಿ ಭಾರತ ಗೆಲ್ಲಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

ಪ್ರಧಾನಿ ಮೋದಿ ಅವರ ಭಾಷಣವನ್ನು ಟೀಕಿಸಿರುವ ಪ್ರತಿಪಕ್ಷ ಕಾಂಗ್ರೆಸ್, ದೇಶ ಪ್ರಧಾನಿ ಮೋದಿ ಅವರ ಭಾಷಣದಿಂದ ನಿರಾಶವಾಗಿದೆ ಎಂದು ಹೇಳಿದೆ. ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆಗೆ ತಲುಪಿಸುವುದು ಮತ್ತು ಅವರಿಗೆ ಸೂಕ್ತ ಆರ್ಥಿಕ ನೆರವು ನೀಡುವ ಕುರಿತು ಪ್ರಧಾನಿ ಮೋದಿ ಭಾಷಣದಲ್ಲಿ ಸೂಕ್ತ ಉಲ್ಲೇಖವಿರಲಿಲ್ಲ ಎಂದು ಕಾಂಗ್ರೆಸ್ ಆರೋಪಿಸಿದೆ.

ಈ ಕುರಿತು ಮಾತನಾಡಿರುವ ಕಾಂಗ್ರೆಸ್ ವಕ್ತಾರ ರಣ್‌ದೀಪ್ ಸುರ್ಜೆವಾಲಾ, ಪ್ರಧಾನಿ ಮೋದಿ ಅವರ ಇಂದಿನ ಭಾಷಣ ಮಾಧ್ಯಮ ಪ್ರಚಾರದಂತಿತ್ತು ಎಂದು ಕಿಡಿಕಾರಿದ್ದಾರೆ. ರಸ್ತೆಗಳಲ್ಲಿರುವ ಲಕ್ಷಾಂತರ ಕಾರ್ಮಿಕರ ನೆರವಿಗೆ ಬರುವ ಕುರಿತು ಸೂಕ್ತ ಮಾಹಿತಿಯೇ ನೀಡದ ಪ್ರಧಾನಿ, ಎಂದಿನಂತೆ ಮಾಮೂಲಿ ಭಾಷಣ ಮಾಡಿದ್ದಾರೆ ಎಂದು ಸುರ್ಜೆವಾಲಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದೇಶದ ಆರ್ಥಿಕ ಸ್ಥಿರತೆಗಾಗಿ ಪ್ರಧಾನಿ ಮೋದಿ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಘೋಷಣೆ ಮಾಡಿರುವ ನಡೆಯನ್ನು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸ್ವಾಗತಿಸಿದ್ದಾರೆ. ಆರ್ಥಿಕ ಪ್ಯಾಕೇಜ್ ಘೋಷಣೆಯನ್ನು ಸರಿಯಾದ ಮಾರ್ಗ ಎಂದು ಬಣ್ಣಿಸಿರುವ ಅಶೋಕ್ ಗೆಹ್ಲೋಟ್, ಆರ್ಥಿಕ ಸ್ಥಿರತೆಗಾಗಿ ಇದು ಅತ್ಯಂತ ಅವಶ್ಯ ಎಂದು ಹೇಳಿದ್ದಾರೆ.

ವಲಸೆ ಕಾರ್ಮಿಕರ ಕುರಿತು ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ್ದು, ಸಂಕಷ್ಟದಲ್ಲಿರುವ ವಲಸೆ ಕಾರ್ಮಿಕರನ್ನು ಸುರಕ್ಷಿತವಾಗಿ ಮನೆಗೆ ಸೇರಿಸುವುದು ಮತ್ತು ಅವರಿಗೆ ಆರ್ಥಿಕ ನೆರವು ಒದಗಿಸುವುದು ಸರ್ಕಾರದ ಆದ್ಯ ಕರ್ತವ್ಯ ಎಂದು ಹೇಳಿದ್ದಾರೆ.

ಮಾಜಿ ವಿತ್ತ ಸಚಿವ ಪಿ ಚಿದಂಬರಂ, ಪ್ರಧಾನಿ ಮೋದಿ ಹೆಡ್‌ಲೈನ್ ಹಾಗೂ ಖಾಲಿ ಪುಟವನ್ನಷ್ಟೇ ನೀಡಿದ್ದಾರೆ. ಇದಕ್ಕೆ ಸಹಜವಾಗಿ ನನ್ನ ಪ್ರತಿಕ್ರಿಯೆ ಖಾಲಿಯಾಗಿದೆ ಎಂದು ಟೀಕಿಸಿದ್ದಾರೆ.ಖಾಲಿ ಪುಟವನ್ನು ಹಣಕಾಸು ಸಚಿವರು ತುಂಬುವುದನ್ನು ಕಾದು ನೋಡುತ್ತಿರುವುದಾಗಿ ತಿಳಿಸಿದ್ದಾರೆ.ಇಂದು ಹಣಕಾಸು ಸಚಿವರು ಖಾಲಿ ಪುಟವನ್ನು ಭರ್ತಿ ಮಾಡುವುದನ್ನು ಎದುರು ನೋಡುತ್ತಿದ್ದೇವೆ. ನಿಜವಾಗಿಯೂ ಸರಕಾರವು ಆರ್ಥಿಕತೆಗೆ ತುಂಬುವ ಪ್ರತಿಯೊಂದು ಹೆಚ್ಚುವರಿ ಹಣವನ್ನು ನಾವು ಎಣಿಕೆ ಮಾಡಲಿದ್ದೇವೆ' ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com