ಎಸ್‌ಪಿ ಮುಖಂಡ ಅಜಮ್ ಖಾನ್ ಸ್ವಾಧೀನಪಡಿಸಿಕೊಂಡಿದ್ದ ವಕ್ಫ್ ಆಸ್ತಿ 26 ಕುಟುಂಬಗಳಿಗೆ ಹಂಚಿಕೆ

ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ, ಸಮಾಜವಾದಿ ಪಕ್ಷದ ಮುಖಂಡ ಮೊಹಮ್ಮದ್ ಅಜಮ್ ಖಾನ್ ಅವರನ್ನು ವಕ್ಫ್ ಆಸ್ತಿ ಸಂಖ್ಯೆ 157 ರ ಮುತಾವಲ್ಲಿಯಿಂದ ತೆಗೆದುಹಾಕಿ 2016ರಲ್ಲಿ ಅವರು ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಬಡವರಿಗೆ ಹಂಚಿದೆ.
ಅಜಂ ಖಾನ್
ಅಜಂ ಖಾನ್

ರಾಮ್‍ಪುರ್: ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿ, ಸಮಾಜವಾದಿ ಪಕ್ಷದ ಮುಖಂಡ ಮೊಹಮ್ಮದ್ ಅಜಮ್ ಖಾನ್ ಅವರನ್ನು ವಕ್ಫ್ ಆಸ್ತಿ ಸಂಖ್ಯೆ 157 ರ ಮುತಾವಲ್ಲಿಯಿಂದ ತೆಗೆದುಹಾಕಿ 2016ರಲ್ಲಿ ಅವರು ಸ್ವಾಧೀನಪಡಿಸಿಕೊಂಡಿದ್ದ ಜಮೀನನ್ನು ಬಡವರಿಗೆ ಹಂಚಿದೆ.

ರಾಮ್‍ಪುರ ಸಂಸದರೂ ಆಗಿರುವ ಅಜಮ್‍ ಖಾನ್ ಅವರನ್ನು ಸ್ಥಾನದಿಂದ ತೆಗೆದುಹಾಕಿದ ನಂತರ, ವಕ್ಫ್ ಮಂಡಳಿಯು ಅವರ ಸ್ಥಾನಕ್ಕೆ ಆಡಳಿತಾಧಿಕಾರಿಯನ್ನು ನೇಮಕ ಮಾಡಿ, 26 ಬಡ ಕುಟುಂಬಗಳಿಗೆ ಜಮೀನನ್ನು ಮರು ಹಂಚಿಕೆ ಮಾಡಿದೆ.

ಮಾರ್ಚ್ 31 ರಂದು ಉತ್ತರ ಪ್ರದೇಶ ಸುನ್ನಿ ಕೇಂದ್ರೀಯ ವಕ್ಫ್ ಮಂಡಳಿಯ ಅಧಿಕಾರಾವಧಿ ಮುಗಿಯುವ ಮೊದಲು ಮಾರ್ಚ್ 20 ರಂದು ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಆದರೆ, ಈ ವಿಷಯವನ್ನು ಗುರುವಾರ ಬಹಿರಂಗಪಡಿಸಲಾಯಿತು.

ಮಾರ್ಚ್ 20 ರಂದು ಮಂಡಳಿಯು ಆದೇಶವನ್ನು ಕಳುಹಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಲಾಕ್‌ಡೌನ್ ಕಾರಣ ಆದೇಶದ ಪ್ರತಿಯನ್ನು ರಾಮ್‍ಪುರ್ ಜಿಲ್ಲಾಡಳಿತ ಬುಧವಾರ ಪಡೆದಿದೆ.

2016 ರಲ್ಲಿ 26 ಬಡ ಕುಟುಂಬಗಳು ವಾಸಿಸುತ್ತಿದ್ದ ವಕ್ಫ್ ಆಸ್ತಿ ಸಂಖ್ಯೆ 157 ರ ಮುತಾವಲ್ಲಿ ಆಗಿ ಅಜಮ್ ಖಾನ್ ಅವರನ್ನು ನೇಮಿಸಲಾಗಿತ್ತು. ಈ ಕುಟುಂಬಗಳನ್ನು ಅಲ್ಲಿಂದ ಹೊರಹಾಕಲಾಗಿತ್ತು. ಅಲ್ಲದೆ, ಇಡೀ ಪ್ರದೇಶವನ್ನು ನೆಲಸಮ ಮಾಡಿ, ಅಲ್ಲಿ ಅಜಮ್ ಖಾನ್‍ ಇಂಗ್ಲಿಷ್ ಮಧ್ಯಮ ಶಾಲಾ ಕಟ್ಟಡ ನಿರ್ಮಿಸಿದ್ದರು. 

ಅಜಮ್ ಖಾನ್ ನಿರ್ಮಿಸಿರುವ ಅಕ್ರಮ ಕಟ್ಟಡವನ್ನು ನೆಲಸಮ ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ. 
ಮಗನ ಪಾಸ್‍ಪೋರ್ಟ್‍ನಲ್ಲಿ ಹುಟ್ಟಿದ ದಿನಾಂಕವನ್ನು ನಕಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ, ಖಾನ್ ಅವರ ಪತ್ನಿ ಶಾಸಕಿ ತಾಂಜಿಮ್ ಫಾತಿಮಾ ಮತ್ತು ಅವರ ಮಗನನ್ನು ಸೀತಾಪುರ ಜೈಲಿನಲ್ಲಿ ಇರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com