ಪ್ರತಿಭಟನೆ ಸೂಪರ್‌ಸ್ಪ್ರೆಡರ್ ಆಗುವ ಆತಂಕ, ಹೊಸ ಕೃಷಿ ಕಾಯಿದೆ ಕೊರೋನಾಗಿಂತ ಅಪಾಯಕಾರಿ ಎಂದ ರೈತರು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಚಲೋ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಸೋಮವಾರ 5ನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನಾನಿರತ ರೈತರು
ಪ್ರತಿಭಟನಾನಿರತ ರೈತರು

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರೈತ ವಿರೋಧಿ ಕೃಷಿ ಕಾಯಿದೆಗಳನ್ನು ಹಿಂಪಡೆಯುವಂತೆ ಒತ್ತಾಯಿಸಿ ದೆಹಲಿ ಚಲೋ ಹೆಸರಿನಲ್ಲಿ ನಡೆಯುತ್ತಿರುವ ರೈತರ ಬೃಹತ್ ಪ್ರತಿಭಟನೆ ಸೋಮವಾರ 5ನೇ ದಿನಕ್ಕೆ ಕಾಲಿಟ್ಟಿದೆ.

ಈ ಮಧ್ಯೆ, ಸಾಮಾಜಿಕ ಅಂತರ ಮರೆತು ಸಾವಿರಾರು ಸಂಖ್ಯೆಯಲ್ಲಿ ಸೇರಿರುವ ರೈತರು ಕೊರೋನಾ ಸೂಪರ್‌ಸ್ಪ್ರೆಡರ್ ಆಗುವ ಸಾಧ್ಯತೆ ಇದೆ ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ಆದರೆ ಹೊಸ ಕೃಷಿ ಕಾಯಿದೆಗಳು ಕೊರೋನಾಗಿಂತ ಅಪಾಯಕಾರಿ ಎಂದು ರೈತ ಮುಖಂಡರು ಹೇಳಿದ್ದಾರೆ.

"ಪ್ರತಿಭಟನೆಯು ಒಂದು ಸಾಮೂಹಿಕ ಸಭೆಯಾಗಿರುವುದರಿಂದ ಸಾರ್ವಜನಿಕ ಆರೋಗ್ಯ ದೃಷ್ಟಿಯಿಂದ ರೈತರು ಕೊರೋನಾ ವೈರಸ್ ಮಾರ್ಗಸೂಚಿಯನ್ನು ಅನುಸರಿಸಿ ಎಂದು ನಾನು ಒತ್ತಾಯಿಸುತ್ತೇನೆ. ಇದು ವಿಫಲವಾದರೆ ಅದು ಹೆಚ್ಚು ಹರಡುವ ಸಾಧ್ಯತೆ ಇದೆ" ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಸಾಂಕ್ರಾಮಿಕ ರೋಗಶಾಸ್ತ್ರ ಮತ್ತು ಸಂವಹನ ವಿಭಾಗದ ಮುಖ್ಯಸ್ಥ ಡಾ. ಸಮೀರನ್ ಪಾಂಡಾ ಎಚ್ಚರಿಸಿದ್ದಾರೆ.

ರಾಷ್ಟ್ರ ರಾಜಧಾನಿಯ ಎಲ್ಲಾ ಐದು ಪ್ರವೇಶದ್ವಾರಗಳನ್ನು ಬಂದ್ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಕೆ ನೀಡಿರುವ ರೈತರು, ಕೊರೋನಾ ಸೋಂಕು ಮತ್ತಷ್ಟು ಉಲ್ಬಣಗೊಳ್ಳಬಹುದು ಎಂಬುದು ತಮಗೆ ಗೊತ್ತು. ಆದರೆ ಕೇಂದ್ರದ ಹೊಸ ಕೃಷಿ ಕಾನೂನುಗಳು ಕೊರೋನಾಗಿಂತ ದೊಡ್ಡ ಅಪಾಯಕಾರಿಯಾಗಿವೆ ಎಂದಿದ್ದಾರೆ.

"ನಾವು ಕೊರೋನಾದಿಂದಲೂ ಬದುಕುಳಿಯಬಹುದು, ಆದರೆ ನಮ್ಮ ಅನ್ನ ಮತ್ತು ಜೀವನ ಕಿತ್ತಿಕೊಳ್ಳುತ್ತಿರುವ ಈ ಕ್ರೂರ ಕಾನೂನುಗಳಿಂದ ನಾವು ಬದುಕಲು ಸಾಧ್ಯವಿಲ್ಲ ಎಂದು ಪಂಜಾಬ್‌ನ ಫರೀದ್‌ಕೋಟ್‌ನ ರೈತ ಮುಖಂಡ ಗುರ್ಮೀತ್ ಸಿಂಗ್ ಅವರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com