ಕಿಂಗ್ ಗಳನ್ನೂ ಮೀರಿಸಿದ 'ಕಿಂಗ್ ಮೇಕರ್' ರಾಮ್ ವಿಲಾಸ್ ಪಾಸ್ವಾನ್

ತತ್ವ ಸಿದ್ದಾಂತಗಳು, ಸಮುದಾಯಗಳ ವಿಚಾರಗಳಲ್ಲಿ ಭಿನ್ನತೆಯಿದ್ದರೂ ಕೂಡ ಕೇಂದ್ರ ಸಚಿವರಾಗಿದ್ದ ಎಲ್ ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.
ರಾಮ್ ವಿಲಾಸ್ ಪಾಸ್ವಾನ್
ರಾಮ್ ವಿಲಾಸ್ ಪಾಸ್ವಾನ್

ನವದೆಹಲಿ: ತತ್ವ ಸಿದ್ದಾಂತಗಳು, ಸಮುದಾಯಗಳ ವಿಚಾರಗಳಲ್ಲಿ ಭಿನ್ನತೆಯಿದ್ದರೂ ಕೂಡ ಕೇಂದ್ರ ಸಚಿವರಾಗಿದ್ದ ಎಲ್ ಜೆಪಿ ನಾಯಕ ರಾಮ್ ವಿಲಾಸ್ ಪಾಸ್ವಾನ್ ಎಲ್ಲಾ ರಾಜಕೀಯ ಪಕ್ಷಗಳ ನಾಯಕರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದರು.

ರಾಜಕೀಯದಲ್ಲಿ, ನೀವು ಬೆಂಬಲಿಸುವ ಜನರು ಕೆಲವೊಮ್ಮೆ ನಿಮ್ಮನ್ನು ಮರೆತುಬಿಡಬಹುದು ಆದರೆ ನೀವು ಗುಂಪಿನ ಮೇಲೆ ಆಕ್ರಮಣ ಮಾಡಿದರೆ, ಅವರು ನಿಮ್ಮನ್ನು ಎಂದಿಗೂ ಮರೆಯುವುದಿಲ್ಲ ಮತ್ತು ಕ್ಷಮಿಸುವುದಿಲ್ಲ ಎಂದು ಹೀಗೆ ಅನೌಪಚಾರಿಕವಾಗಿ ಮಾತನಾಡುವಾಗ ರಾಮ್ ವಿಲಾಸ್ ಪಾಸ್ವಾನ್ ಹೇಳಿದ್ದರು.

ತಮ್ಮ 5 ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಜೀವನದಲ್ಲಿ ರಾಮ್ ವಿಲಾಸ್ ಪಾಸ್ವಾನ್ ರಾಜನಂತೆ ಮೆರೆಯದೆ ಇದ್ದಿರಬಹುದು, ಆದರೆ ಯಾವುದೇ ಸರ್ಕಾರ ಬಂದರೂ ಕಿಂಗ್ ಮೇಕರ್ ಆಗದ್ದರು ಎಂಬುದನ್ನು ತಳ್ಳಿಹಾಕುವಂತಿಲ್ಲ. ಸ್ನೇಹಿತರನ್ನು ಮಾಡಿಕೊಳ್ಳುವುದರಲ್ಲಿ ಮತ್ತು ಸೇತುವೆಯಾಗಿ ನಿಲ್ಲುವ ವಿಚಾರದಲ್ಲಿ ಪಾಸ್ವಾನ್ ನಂಬಿಕೆ ಹೊಂದಿದ್ದರು. ತಮ್ಮ ರಾಜಕೀಯ ಬದುಕಿನಲ್ಲಿ ವಿರೋಧಿಗಳ ವಿರುದ್ಧ ಏನೇ ಹೇಳಿಕೆ ನೀಡಿದ್ದರೂ ಅದು ದೀರ್ಘಕಾಲದವರೆಗೆ ನೆನಪಿನಲ್ಲಿ ಉಳಿದು ಶಾಶ್ವತವಾಗಿ ಹಗೆ ಸಾಧಿಸುವಂತಹ ಮಾತುಗಳನ್ನು ಆಡುತ್ತಿರಲಿಲ್ಲ. ಅದು ದಲಿತ ನಾಯಕರಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಶಕ್ತಿಯಾಗಿತ್ತು.

ರಾಜಕೀಯ ವೃತ್ತಿ ಬದುಕು ಆರಂಭ: ರಾಮ್ ವಿಲಾಸ್ ಪಾಸ್ವಾನ್ ಮೊದಲಿಗೆ ಶಾಸಕರಾಗಿ ಆಯ್ಕೆಯಾಗಿದ್ದು 1969ರಲ್ಲಿ ಪ್ರಮುಖ ಕಾಂಗ್ರೆಸ್ಸೇತರ ನಾಯಕನಾಗಿ. ನಂತರ ಸಮಾಜವಾದಿ ಪಕ್ಷಗಳಲ್ಲಿ ಹಲವು ಹುದ್ದೆಗಳನ್ನು ವಹಿಸುತ್ತಾ ಸಮಯಕ್ಕೆ ತಕ್ಕಂತೆ ಬದಲಾಗಿ 80-90ರ ದಶಕದಲ್ಲಿ ಪ್ರಮುಖ ದಲಿತ ನಾಯಕನಾಗಿ ಗುರುತಿಸಿಕೊಂಡರು.

ರಾಮ್ ವಿಲಾಸ್ ಪಾಸ್ವಾನ್ ಜನಿಸಿದ್ದು ಬಿಹಾರದ ಖಗರಿಯಾದಲ್ಲಿ 1946ರಲ್ಲಿ. ಲೋಕಸಭೆಗೆ 8 ಬಾರಿ ಆಯ್ಕೆಯಾಗಿ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದರು.

ಚರಣ್ ಸಿಂಗ್ ನೇತೃತ್ವದ ಲೋಕ ಅದಾಲತ್ ನಲ್ಲಿ ವರ್ಷಗಳ ಕಾಲ ಪಾಸ್ವಾನ್ ಜೊತೆಗೆ ಇದ್ದ ಸಂಯುಕ್ತ ಜನತಾ ದಳದ ಕೆ ಸಿ ತ್ಯಾಗಿ, ಲೋಕ ಜನಶಕ್ತಿ ಸಂಸ್ಥಾಪಕ ಪಾಸ್ವಾನ್, ಉತ್ತರ ಭಾರತದಲ್ಲಿ ದಲಿತರ ಧ್ವನಿಯಾಗಿದ್ದರು ಎಂದು ಬಣ್ಣಿಸಿದ್ದಾರೆ.
ಪ್ರಮುಖ ಸಾಮಾಜಿಕ ರಾಜಕೀಯ ಧುರೀಣ, 1975-77ರಲ್ಲಿ ತುರ್ತು ಪರಿಸ್ಥಿತಿ ವಿರೋಧಿಸಿದ್ದ ಮತ್ತೊಬ್ಬ ದಲಿತ ನಾಯಕನ ಯುಗ, ಪರದೆ ಇಳಿದಿದೆ ಎಂದು ಹೇಳಿದ್ದಾರೆ.

1989ರಲ್ಲಿ ಅಧಿಕಾರಕ್ಕೆ ಬಂದ ವಿ.ಪಿ.ಸಿಂಗ್ ಸರ್ಕಾರದಲ್ಲಿ ಪ್ರಮುಖ ಖಾತೆ ವಹಿಸಿಕೊಂಡಿದ್ದರು ರಾಮ್ ವಿಲಾಸ್ ಪಾಸ್ವಾನ್. ಮಂಡಲ್ ಆಯೋಗ ವರದಿ ಜಾರಿಗೆ ಶಿಫಾರಸು ಮಾಡಿದ್ದರು. ಇತರ ಹಿಂದುಳಿದ ವರ್ಗಕ್ಕೆ ಮೀಸಲಾತಿ ನೀಡಲು ಈ ಆಯೋಗದ ವರದಿಯಲ್ಲಿ ಶಿಫಾರಸು ಮಾಡಿತ್ತು.

ಪಾಸ್ವಾನ್ ಅವರ ಸರಳತೆ ಮತ್ತು ಪ್ರಾಮಾಣಿಕತೆ ಅನುಕರಣೀಯವಾಗಿ ಉಳಿಯುತ್ತದೆ ಎಂದು ತ್ಯಾಗಿ ಹೇಳುತ್ತಾರೆ. ಸಾಮಾಜಿಕ ಅಥವಾ ರಾಜಕೀಯ ವಿಭಜನೆಗಳಿಗೆ ಕಡಿವಾಣ ಹಾಕುವ ಅವರ ರಾಜಕೀಯಕ್ಕೆ ಇದು ಒಂದು ಸಂಕೇತವಾಗಿದೆ, ಅವರು ದಲಿತರಿಂದ ಹೆಚ್ಚಾಗಿ ಬೆಂಬಲವನ್ನು ಪಡೆದಿದ್ದರೂ ಸಹ ಅವರು ಮೇಲ್ಜಾತಿಯವರಲ್ಲಿ ಹೆಚ್ಚು ಇಷ್ಟಪಟ್ಟ ರಾಜ್ಯ ನಾಯಕರಲ್ಲಿ ಒಬ್ಬರಾಗಿದ್ದರು.

ರಾಜಕಾರಣಿಯಾಗಿ ಅವರ ಮೌಲ್ಯಕ್ಕೆ ಗೌರವ ಸಿಕ್ಕಿದೆ ಎಂಬುದಕ್ಕೆ ಅವರು ವಾಜಪೇಯಿ ನೇತೃತ್ವದ ಎನ್ ಡಿಎ ಮತ್ತು ಸೋನಿಯಾ ನೇತೃತ್ವದ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದುದೇ ಸಾಕ್ಷಿ. ಕೇಸರಿ ಪಕ್ಷದೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿ ಅವರು ವಾಜಪೇಯಿ ಸರ್ಕಾರವನ್ನು ತೊರೆದಾಗ, ಆಗಿನ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಯವರ ಮೇಲೂ ಅವರು ವಾಗ್ದಾಳಿ ನಡೆಸಿದ್ದರು. ಆದರೆ 2014 ರಲ್ಲಿ ಮೋದಿ ನೇತೃತ್ವದ ಬಿಜೆಪಿಯೊಂದಿಗೆ ಕೈಜೋಡಿಸಿದಾಗ, ಅವರು ಶೀಘ್ರದಲ್ಲೇ ಪ್ರಧಾನಮಂತ್ರಿಯ ವಿಶ್ವಾಸಾರ್ಹ ಸಹೋದ್ಯೋಗಿಯಾದರು. ಅದರಲ್ಲೂ ದಲಿತರ ವಿಚಾರದಲ್ಲಿ ಪ್ರಧಾನಿಯವರ ವಿಶ್ವಾಸ ಗಳಿಸಿಕೊಂಡರು.

ಅವರ ರಾಜಕೀಯ ಜೀವನದ ಮೊದಲಾರ್ಧದಲ್ಲಿ, ಆರ್ ಎಸ್ ಎಸ್ ನ್ನು ತೀವ್ರವಾಗಿ ಟೀಕಿಸುತ್ತಿದ್ದ ಅವರು ನಂತರ ತಣ್ಣಗಾದರೂ,ಹಿಂದುತ್ವ ಸಂಘಟನೆ ವಿಚಾರದಲ್ಲಿ ದಲಿತರ ಬಗೆಗಿನ ಅಭಿಪ್ರಾಯವನ್ನು ಬಿಜೆಪಿ ಬದಲಿಸಬೇಕಾದ ಅಗತ್ಯವಿದೆ ಎಂದು ಹೇಳುತ್ತಿದ್ದರು. ಪ್ರತಿ ಚುನಾವಣೆಯ ನಂತರ ಅಂತಿಮವಾಗಿ ಅಧಿಕಾರಕ್ಕೆ ಬರುವ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಅವರ ಕೌಶಲ್ಯಕ್ಕಾಗಿ ಅವರನ್ನು ಕೆಲವು ರಾಜಕೀಯ ನಾಯಕರು 'ಮೌಸಮ್ ವೈಗ್ಯಾನಿಕ್' (ಹವಾಮಾನ ತಜ್ಞ) ಎಂದು ಅಪಹಾಸ್ಯ ಮಾಡುತ್ತಿದ್ದರು.

ಇದೀಗ ಅವರ 37 ವರ್ಷದ ಪುತ್ರ ಚಿರಾಗ್ ಪಾಸ್ವಾನ್ ತಂದೆ 2000ದಲ್ಲಿ ಸ್ಥಾಪಿಸಿದ ಪಕ್ಷವನ್ನು ಮುನ್ನಡೆಸಲು ನೋಡುತ್ತಿದ್ದಾರೆ. ತಂದೆಯಿಂದ ರಾಜಕೀಯದ ಅನುಭವ ಪಡೆಯಲು ಸಂಸದ 37 ವರ್ಷದ ಪುತ್ರ ಚಿರಾಗ್ ಪಾಸ್ವಾನ್ ಗೆ ಇನ್ನಷ್ಟು ಸಮಯ ರಾಮ್ ವಿಲಾಸ್ ಪಾಸ್ವಾನ್ ಬದುಕುಳಿಯಬೇಕಾಗುತ್ತಿತ್ತು ಎಂದು ಅನಿಸದೆ ಇರದು.

ಬಿಹಾರ ಚುನಾವಣೆ ಹೊಸ್ತಿಲಿನಲ್ಲಿ  ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿ(ಯು) ಮತ್ತು ಬೇರೆ ವಿರೋಧ ಪಕ್ಷಗಳ ವಿರುದ್ಧ ಲೋಕ ಜನಶಕ್ತಿ ಪಕ್ಷ ಸೆಣಸುವುದು ಅಷ್ಟು ಸುಲಭವಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com