ಕೇಂದ್ರ ಸರ್ಕಾರಿ ನೌಕರರಿಗೆ 10 ಸಾವಿರ ರೂ. ಹಬ್ಬದ ಮುಂಗಡ; ಎಲ್ ಟಿಸಿ ಬದಲು ನಗದು ವೋಚರ್: ನಿರ್ಮಲಾ ಸೀತಾರಾಮನ್ 

ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚಿಸಲು, ಗ್ರಾಹಕರ ಖರ್ಚು ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರ ತನ್ನ ಉದ್ಯೋಗಿಗಳಿಗೆ 10 ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆಯನ್ನು ಘೋಷಿಸಿದೆ. 

Published: 12th October 2020 02:31 PM  |   Last Updated: 12th October 2020 03:51 PM   |  A+A-


Nirmala Sitharaman

ನಿರ್ಮಲಾ ಸೀತಾರಾಮನ್

Posted By : Srinivas Rao BV
Source : PTI

ನವದೆಹಲಿ: ಆರ್ಥಿಕತೆಯಲ್ಲಿ ಬೇಡಿಕೆ ಹೆಚ್ಚಿಸಲು, ಗ್ರಾಹಕರ ಖರ್ಚು ಶಕ್ತಿ ಹೆಚ್ಚಿಸಲು ಕೇಂದ್ರ ಸರ್ಕಾರದ ಉದ್ಯೋಗಿಗಳಿಗೆ 10 ಸಾವಿರ ರೂಪಾಯಿ ಬಡ್ಡಿ ರಹಿತ ಹಬ್ಬದ ಮುಂಗಡ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಿಸಿದೆ.

ಅ.12 ರಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಮುಂಗಡ ಯೋಜನೆಯನ್ನು 6 ನೇ ವೇತನ ಆಯೋಗದಿಂದ  ನಿಲ್ಲಿಸಲಾಗಿದೆ. ಆದರೆ ಈ ಬಾರಿ ವಿಶೇಷವಾಗಿ ಕೇಂದ್ರ ಸರ್ಕಾರಿ ಅಧಿಕಾರಿಗಳು, ನೌಕರರಿಗೆ ಬಡ್ಡಿ ರಹಿತ ಮುಂಗಡವನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. 

ರುಪೇ ಕಾರ್ಡ್ ರೂಪದಲ್ಲಿ 10 ಸಾವಿರ ರೂಪಾಯಿ ಮುಂಗಡ ದೊರೆಯಲಿದ್ದು, ಮಾ.31, 2021 ವರೆಗೂ ಇದನ್ನು ಬಳಕೆ ಮಾಡಿಕೊಳ್ಳಬಹುದಾಗಿದೆ. ಈ ಹಣವನ್ನು 10 ಕಂತುಗಳಲ್ಲಿ ಮರುಪಾವತಿ ಮಾಡಬಹುದಾಗಿದ್ದು, ಕೇಂದ್ರ ಸರ್ಕಾರ ಇದಕ್ಕಾಗಿ 4,000 ಕೋಟಿ ರೂಪಾಯಿ ಖರ್ಚು ಮಾಡುತ್ತಿದೆ ಎಂದು ಹಣಕಾಸು ಸಚಿವರು ತಿಳಿಸಿದ್ದಾರೆ. 

ಇನ್ನು ಪ್ರತಿ ನಾಲ್ಕು ವರ್ಷಗಳಿಗೆ ಒಮ್ಮೆ ನೀಡಲಾಗುವ ಎಲ್ ಟಿಸಿಯ ಬದಲಾಗಿ ಈ ಬಾರಿ ನಗದು ವೋಚರ್ ಗಳನ್ನು ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. 

ಕೇಂದ್ರ ಸರ್ಕಾರದ ಉದ್ಯೋಗಿಗಳು ತಾವು ಬಯಸುವ ಪ್ರದೇಶಗಳಿಗೆ ಭೇಟಿ ನೀಡಲು ಹಾಗೂ ಒಮ್ಮೆ ತಮ್ಮ ಊರಿಗೆ ತೆರಳುವ ವೆಚ್ಚವನ್ನು ಎಲ್ ಟಿಸಿ ರೂಪದಲ್ಲಿ ಪಡೆಯುತ್ತಿದ್ದರು. ಆದರೆ ಈ ಬಾರಿ ಕೋವಿಡ್-19 ಕಾರಣದಿಂದಾಗಿ ಪ್ರಯಾಣ ಸೂಕ್ತವಲ್ಲದ ಹಿನ್ನೆಲೆಯಲ್ಲಿ ಎಲ್ ಟಿಸಿ ಬದಲಿಗೆ ನಗದು ವೋಚರ್ ಗಳನ್ನು ನೀಡಲಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. 

ನಗದು ವೋಚರ್ ಗಳನ್ನು ಆಹಾರಯೇತರ, ಶೇ.12 ಹಾಗೂ ಹೆಚ್ಚಿನ ಜಿಎಸ್ ಟಿ ರೇಟೆಡ್ ಉತ್ಪನ್ನಗಳನ್ನು ಖರೀದಿಸಲು ಮಾತ್ರ ಬಳಕೆ ಮಾಡಬಹುದಾಗಿದ್ದು, ಜಿಎಸ್ ಟಿ ನೋಂದಾಯಿತ ಔಟ್ ಲೆಟ್ ಗಳಲ್ಲಿ ಡಿಜಿಟಲ್ ಮೋಡ್ ನಲ್ಲೇ ಪಾವತಿ ಮಾಡಬೇಕಾಗುತ್ತದೆ.

Stay up to date on all the latest ರಾಷ್ಟ್ರೀಯ news
Poll
Covid-_Vaccine1

ರಾಜಕಾರಣಿಗಳಿಗೆ ಮೊದಲು ಕೋವಿಡ್-19 ಲಸಿಕೆ ನೀಡಬೇಕೇ?


Result
ಇಲ್ಲ, ಸಾಮಾನ್ಯ ಜನರಿಗೆ ಮೊದಲು
ಹೌದು, ಅವರು ನಮ್ಮ ನಾಯಕರು
flipboard facebook twitter whatsapp