"ತಂದೆಯಿಂದಾಗಿ ನೀವು ಎಂಬುದನ್ನು ಮರೆಯಬೇಡಿ": ಮಕ್ಕಳಿಗೆ ಸುಪ್ರೀಂ ಕೋರ್ಟ್ ಚಾಟಿ

ಜನ್ಮ ಕೊಟ್ಟ ತಂದೆಯನ್ನು ಅವರ ಮುಪ್ಪಿನ ಕಾಲದಲ್ಲಿ ಮನೆಯಿಂದ ಹೊರಹಾಕಿದ್ದು  ಏಕೆ? ಎಂದು ಇಬ್ಬರು ಗಂಡು ಮಕ್ಕಳನ್ನು ಸುಪ್ರೀಂ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ನವದೆಹಲಿ: ಜನ್ಮ ಕೊಟ್ಟ ತಂದೆಯನ್ನು ಅ ಮುಪ್ಪಿನ ಕಾಲದಲ್ಲಿ ಮನೆಯಿಂದ ಹೊರಹಾಕಿದ್ದು ಏಕೆ? ಎಂದು ಅವರ ಇಬ್ಬರು ಗಂಡು ಮಕ್ಕಳನ್ನು ಸುಪ್ರೀಂ ಕೋರ್ಟ್ ಖಾರವಾಗಿ ಪ್ರಶ್ನಿಸಿದೆ.

ನೀವು ಈ ಹಂತಕ್ಕೆ ಏರಲು ಅವರು (ತಂದೆ-ತಾಯಿ) ತಮ್ಮ ಜೀವನವನ್ನೇ ಸವೆಸಿರುವುದನ್ನು ನೀವು ಮರೆತು, ವೃದ್ಧಾಪ್ಯದಲ್ಲಿ ಅವರನ್ನು ಕಡೆಗಣಿಸಿದ್ದೀರಿ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದೆ. ವಯೋವೃದ್ಧ ತಂದೆಯೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ದೆಹಲಿಯ ಇಬ್ಬರು ಸಹೋದರರ ವಿರುದ್ದ ಸುಪ್ರೀಂ ಕೋರ್ಟ್ ಕೆಂಡಾಮಂಡಲವಾಯಿತು.

ವಯೋ ವೃದ್ಧನಾಗಿರುವ ತಮಗೆ ನಿರ್ವಹಣೆಯ ವೆಚ್ಚವನ್ನೂ ನೀಡದೆ ಬಹು ರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವ ತನ್ನ ಇಬ್ಬರು ಪುತ್ರರು ಕಡೆಗಣಿಸಿದ್ದಾರೆ ಎಂದು ಆರೋಪಿಸಿ ದೆಹಲಿ ಮೂಲದ ವ್ಯಕ್ತಿಯೊಬ್ಬರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ನ್ಯಾಯಮೂರ್ತಿ ಖಾನ್ವಿಲ್ಕರ್ ನೇತೃತ್ವದ ನ್ಯಾಯಪೀಠ.. ತಂದೆ ತಾಯಿಯರ ವಿಷಯದಲ್ಲಿ ಮಕ್ಕಳ ಈ ಮನೋಭಾವವನ್ನು ಕಠಿಣ ಶಬ್ದಗಳಲ್ಲಿ ಖಂಡಿಸಿತು.

ನೀವು ಅವರಿಂದಾಗಿ ಇಲ್ಲಿದ್ದೀರಿ ಎಂಬುದನ್ನು ಮರೆಯಬೇಡಿ. ಅವರ ಶ್ರಮದಿಂದ ಉನ್ನತ ಶಿಕ್ಷಣ ಕಲಿತು ದೊಡ್ಡ ಉದ್ಯೋಗ ಪಡೆದುಕೊಂಡಿದ್ದೀರಿ, ಅವರ ಕಾರಣದಿಂದಾಗಿ ಬಂದಿರುವ ಪಿತ್ರಾರ್ಜಿತ ಆಸ್ತಿಯ ಮೇಲಿನ ಅವರ ಹಕ್ಕು ಕಸಿದುಕೊಳ್ಳುವುದು ಕ್ಷಮಿಸಲಾಗದು ಎಂದು ನ್ಯಾಯಪೀಠ ಗುಡುಗಿತು.

ವಯೋವೃದ್ದ ತಂದೆಯನ್ನು ಮನೆ ಬಿಟ್ಟು ಹೊರಹೋಗುವಂತೆ ಒತ್ತಾಯಿಸುವುದು. ಹಣಕಾಸಿನ ನೆರವು ನೀಡಲು ನಿರಾಕರಿಸುವುದು ಖಂಡಿತ ಕ್ಷಮಾರ್ಹವಲ್ಲ ಎಂದು ಅವರು ಹೇಳಿತು. ಅವರ ಪೂರ್ವಜರಿಂದ ಬಂದಿರುವ ಆಸ್ತಿಯನ್ನು ಪಡೆದುಕೊಂಡಿರುವ ನೀವು ಅದರ ಬಾಡಿಗೆಯ ಸ್ವಲ್ಪ ಭಾಗವನ್ನೂ ಅವರಿಗೆ ಪಾವತಿಸಲು ನಿರಾಕರಿಸಿರುವ ಮಕ್ಕಳ ಕ್ರಮವನ್ನು ನ್ಯಾಯ ಪೀಠ ಪ್ರಶ್ನಿಸಿತು.

ತನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ ಎಂದು ವೃದ್ದ ತಂದೆ ಕಳೆದ ವರ್ಷ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಟ್ರಬ್ಯುನಲ್ ಕೋರ್ಟ್, ಇಬ್ಬರು ಗಂಡು ಮಕ್ಕಳು ತಮ್ಮ ತಂದೆಗೆ ನಿರ್ವಹಣಾ ವೆಚ್ಚವಾಗಿ 7,000 ರೂ. ಪಾವತಿಸುವಂತೆ ಆದೇಶಿಸಿತ್ತು. ತಂದೆ-ತಾಯಿ ನಿರ್ವಹಣೆ, ಕಲ್ಯಾಣ, ಹಿರಿಯ ನಾಗರಿಕರ ಕಾಯ್ದೆ, 2007 ರ ನಿಬಂಧನೆಗಳನ್ನು ಉಲ್ಲೇಖಿಸಿ ನ್ಯಾಯಾಧಿಕರಣದ ಆದೇಶವನ್ನು ಹೈಕೋರ್ಟ್ ನಲ್ಲಿ ಪುತ್ರರು ಪ್ರಶ್ನಿಸಿದ್ದು, ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು.

ಇದರಿಂದ ವೃದ್ಧ ತಂದೆ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಪ್ರಸ್ತುತ ಕಾಲದಲ್ಲಿ ಕೇವಲ 7,000 ರೂಗಳಿಂದ ಒಬ್ಬ ಮನುಷ್ಯ ಜೀವನ ಸಾಗಿಸಲು ಸಾಧ್ಯವೇ ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು. ತಂದೆಯ ಜೀವನ ನಿರ್ವಹಣೆಗೆ 10,000 ರೂ ಪಾವತಿಸಬೇಕೆಂದು ಅವರ ಪರ ವಕೀಲರು ನ್ಯಾಯಾಲಯಕ್ಕೆ ಮನವಿ ಮಾಡಿದರು. ಈ ಸಂಬಂಧ ವಾರದೊಳಗೆ ಉತ್ತರಿಸುವಂತೆ ಸುಪ್ರೀಂ ಕೋರ್ಟ್ ಇಬ್ಬರೂ ಮಕ್ಕಳಿಗೆ ನೋಟಿಸ್ ಜಾರಿ ಮಾಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com