ರಾಜ್ಯಪಾಲರು ಹೇಗೆ ವರ್ತಿಸಬಾರದು ಎಂಬುದನ್ನು ಕೋಶಿಯಾರಿ ತೋರಿಸಿಕೊಟ್ಟಿದ್ದಾರೆ: ಶಿವಸೇನೆ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು, ನೀವು "ಜಾತ್ಯತೀತ ಅನಿಸಿಕೊಳ್ಳಲು ಹಿಂದುತ್ವವನ್ನು ತ್ಯಜಿಸಿದರೇ" ಎಂದು ಕೇಳಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ, ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
Published: 15th October 2020 05:08 PM | Last Updated: 15th October 2020 05:08 PM | A+A A-

ಉದ್ಧವ್ ಠಾಕ್ರೆ - ಭಗತ್ ಸಿಂಗ್ ಕೋಶಿಯಾರಿ
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದು, ನೀವು "ಜಾತ್ಯತೀತ ಅನಿಸಿಕೊಳ್ಳಲು ಹಿಂದುತ್ವವನ್ನು ತ್ಯಜಿಸಿದರೇ" ಎಂದು ಕೇಳಿದ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಶಿವಸೇನೆ, ರಾಜ್ಯಪಾಲರು ರಾಜ್ಯ ಸರ್ಕಾರದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
"ಭಗತ್ ಸಿಂಗ್ ಕೋಶಿಯಾರಿ ಅವರು ರಾಜ್ಯಪಾಲರ ಹುದ್ದೆಯಲ್ಲಿ ಕುಳಿತಿರುವ ವ್ಯಕ್ತಿಯು ಹೇಗೆ ವರ್ತಿಸಬಾರದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅವರು 'ಸಂಘ ಪ್ರಚಾರಕ' ಅಥವಾ ಬಿಜೆಪಿಯ ನಾಯಕರಾಗಿಬೇಕಾಗಿತ್ತು. ಆದರೆ ಇಂದು ಅವರು ಮಹಾರಾಷ್ಟ್ರದಂತಹ ಪ್ರಗತಿಪರ ರಾಜ್ಯದ ರಾಜ್ಯಪಾಲರಾಗಿದ್ದಾರೆ. ಅವರು ತಮ್ಮ ಅನುಕೂಲಕ್ಕೆ ತಕ್ಕಂತೆ ಈ ವಿಷಯವನ್ನು ಮರೆತಂತೆ ತೋರುತ್ತಿದೆ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಸಂಪಾದಕೀಯದಲ್ಲಿ ತಿಳಿಸಿದೆ.
ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ರಾಜ್ಯಪಾಲ ಕೋಶಿಯಾರಿ ಬರೆದ ಪತ್ರ ಅವಿವೇಕದ ನಡೆ ಎಂದು ಶಿವಸೇನೆ ಟೀಕಿಸಿದೆ. ಅಲ್ಲದೆ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರನ್ನು ಹಿಂದಕ್ಕೆ ಕರೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದೆ.
ಕೊರೋನಾ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದ್ದ ದೇವಸ್ಥಾನಳನ್ನು ಮತ್ತೆ ತೆರೆಯುವ ವಿಚಾರವಾಗಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ನೇತೃತ್ವದ ಸರ್ಕಾರ ಮತ್ತು ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ನಡುವೆ ‘ಜಾತ್ಯತೀತ’ದ ವಿಷಯವಾಗಿ ಹಗ್ಗ ಜಗ್ಗಾಟ ನಡೆಯುತ್ತಿದೆ.
ಬಿಜೆಪಿ ಹಾಗೂ ಸಂಘ ಸಂಸ್ಥೆಗಳ ಮನವಿಯ ನಂತರವೂ ದೇವಾಲಯಗಳನ್ನು ತೆರೆಯದ ಸರ್ಕಾರದ ನಿಲುವಿನ ಕುರಿತು ಉದ್ಧವ್ ಠಾಕ್ರೆಗೆ ಪತ್ರ ಬರೆದಿದ್ದ ರಾಜ್ಯಪಾಲ ಕೋಶಿಯಾರಿ ಅವರು, ರಾಜ್ಯ ಸರ್ಕಾರ ದೇವಸ್ಥಾನಗಳನ್ನು ತೆರೆಯಲು ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಹೇಳಿ, ಠಾಕ್ರೆ ಅವರು "ಜಾತ್ಯತೀತ ಅನಿಸಿಕೊಳ್ಳಲು ಹಿಂದುತ್ವವನ್ನು ತ್ಯಜಿಸಿದರೇ" ಎಂದು ಲೇವಡಿ ಮಾಡಿದ್ದರು. ಇದಕ್ಕೆ ತೀಕ್ಷಣವಾಗಿಯೇ ಪ್ರತಿಕ್ರಿಯಿಸಿದ್ದ ಸಿಎಂ ಠಾಕ್ರೆ, ಜಾತ್ಯತೀತ ಎಂಬುದು ಸಂವಿಧಾನದ ಭಾಗ. ನೀವು ರಾಜ್ಯಪಾಲರಾಗಿ ಸಂವಿಧಾನಕ್ಕೆ ನಿಷ್ಠೆಯಿಂದ ಇರುವುದಾಗಿ ಪ್ರಮಾಣ ಮಾಡಿದ್ದೀರಿ. ಹಿಂದುತ್ವದ ಬಗ್ಗೆ ಉಪದೇಶ ಮಾಡಬೇಡಿ ಎಂದು ತಿರುಗೇಟು ನೀಡಿದ್ದರು.