ಭಾರತ ಶಕ್ತಿ, ಸಾಮರ್ಥ್ಯ ಮತ್ತು ವ್ಯಾಪ್ತಿಯಲ್ಲಿ ಚೀನಾಕ್ಕಿಂತ ದೊಡ್ಡದಾಗಿರಬೇಕು: ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್

ಭಾರತ ತನ್ನ ಶಕ್ತಿ, ಸಾಮರ್ಥ್ಯ ಮತ್ತು ವ್ಯಾಪ್ತಿಯಲ್ಲಿ ಚೀನಾಕ್ಕಿಂತ ದೊಡ್ಡದಾಗಿರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.
ಮೋಹನ್ ಭಾಗವತ್
ಮೋಹನ್ ಭಾಗವತ್

ನಾಗ್ಪುರ: ಭಾರತ ತನ್ನ ಶಕ್ತಿ, ಸಾಮರ್ಥ್ಯ ಮತ್ತು ವ್ಯಾಪ್ತಿಯಲ್ಲಿ ಚೀನಾಕ್ಕಿಂತ ದೊಡ್ಡದಾಗಿರಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ.

ನಾಗ್ಪುರ್‌ದ ಕೇಂದ್ರ ಕಚೇರಿಯಲ್ಲಿ ವಿಜಯದಶಮಿ ಅಂಗವಾಗಿ ಹಮ್ಮಿಕೊಳ್ಳಲಾಗಿರುವ ವಾರ್ಷಿಕ ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋಹನ್ ಭಾಗವತ್, ಕಳೆದೊಂದು ವರ್ಷದಲ್ಲಿ ದೇಶದಲ್ಲಿ ನಡೆದ ಹಲವು ವಿಚಾರಗಳ ಕುರಿತು ಪ್ರಸ್ತಾಪ ಮಾಡಿ ಮಾತನಾಡಿದರು. ಈ ವೇಳೆ ಲಡಾಖ್ ಗಡಿಯಲ್ಲಿ  ಚೀನಾದ ಆಕ್ರಮಣವನ್ನು ಪ್ರಸ್ತಾಪಿಸಿದ ಮೋಹನ್ ಭಾಗವತ್, ನೆಲದಾಹಿ ಚೀನಾದ ಹುನ್ನಾರಗಳಿಗೆ ನಮ್ಮ ಸೇನೆ ದಿಟ್ಟ ಉತ್ತರ ನೀಡಿದೆ ಎಂದು ಹೇಳಿದರು. ಭಾರತ ಮಾತ್ರವಲ್ಲದೇ ತೈವಾನ್, ವಿಯೆಟ್ನಾಂ, ಜಪಾನ್ ಹಾಗೂ ಅಮೆರಿಕದೊಂದಿಗೂ ದ್ವೇಷ ಸಾಧಿಸುತ್ತಿರುವ ಚೀನಾ ವಿರುದ್ಧ ಜಾಗತಿಕ ಕ್ರಮ ಕೈಗೊಳ್ಳುವ  ಸಮಯವಿದು ಎಂದು ಭಾಗವತ್ ಅಭಿಪ್ರಾಯಪಟ್ಟರು.

ಆರ್ಟಿಕಲ್ 370, ರದ್ದತಿ, ರಾಮಜನ್ಮಭೂಮಿ ಕುರಿತು ಸುಪ್ರೀಂಕೋರ್ಟ್ ರತೀರ್ಪು ಹಾಗೂ ರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಸಂದರ್ಭದಲ್ಲಿ ದೇಶದ ಜನತೆ ತೋರಿದ ಸಂಯಮ ಹಾಗೂ ಸಂವೇದನೆ ನಿಜಕ್ಕೂ ಅದ್ಭುತವಾದದು ಎಂದು ಹೇಳಿದ ಭಾಗವತ್, ದೇಶದಲ್ಲಿ ಹಬ್ಬಿದ ಮಾರಕ ಕೊರೊನಾ ವೈರಸ್  ಹಾವಳಿಯ ಪರಿಣಾಮವಾಗಿ, ಕೆಲವರಿಗೆ ತಮ್ಮ ಕೋಮು ದ್ವೇಷವನ್ನು ಕಾರ್ಯರೂಪಕ್ಕೆ. ಸಿಎಎ ವಿರೋಧಿ ಆಂದೋಲನದ ನೆರಳಲ್ಲಿ ದೇಶದಾದ್ಯಂತ ಕೋಮು ದಳ್ಳುರಿ ಹಬ್ಬಿಸಲು ಹುನ್ನಾರ ನಡೆಸಿದವರಿಗೆ ಕೊರೊನಾ ಆಘಾತ ನೀಡಿದೆ. ಕೋಮು ಗಲಭೆ ಸೃಷ್ಟಿಸಬೇಕು ಎಂಬ ಅವರ ಆಸೆ ಮನಸಲ್ಲೇ  ಉಳಿಯುವಂತಾಗಿದೆ ಎಂದು ಹೇಳಿದರು. 

ಅಂತೆಯೇ ಸಿಎಎ ಯಾವುದೇ ಧರ್ಮದ ವಿರುದ್ಧ ನಡೆಯುತ್ತಿರುವ ದಾಳಿಯಲ್ಲ. ಬದಲಿಗೆ ನೆರೆಯ ದೇಶಗಳಲ್ಲಿ ಸಂಕಷ್ಟಕ್ಕೀಡಾಗಿರುವ ನಮ್ಮ ಸಹೋದರರಿಗೆ ನೆರವು ನೀಡಲು ಜಾರಿಗೆ ತಂದ ಕಾನೂನು. ಸಿಎಎ ಹೆಸರಿನಲ್ಲಿ ಕೆಲವರು ಅಪಪ್ರಚಾರ ನಡೆಸುತ್ತಿದ್ದು, ಈ ಕೀಳು ರಾಜಕೀಯವನ್ನು ದೇಶದ ಜನತೆ ಸ್ಪಷ್ಟವಾಗಿ  ತಿರಸ್ಕರಿಸಿರುವುದು ಸಂತಸದ ಸಂಗತಿ ಎಂದು ಭಾಗವತ್ ನುಡಿದರು. ಅಲ್ಲದೇ ನಮ್ಮ ಮುಸ್ಲಿಂ ಸಹೋದರರು ಸುಳ್ಳು ರಾಜಕೀಯ ದಾಳಕ್ಕೆ ಬಲಿಯಾಗಬಾರದು ಎಂದು ಮನವಿ ಮಾಡಿದರು.

ಕೊರೊನಾ ವೈರಸ್ ಹಾವಳಿಯಿಂದ ದೇಶ ನಲುಗಿದ್ದು ಹೌದಾದರೂ, ಕೇಂದ್ರ ಸರ್ಕಾರದ ಶಿಸ್ತುಬದ್ಧ ನೀತಿ ಮತ್ತು ಜನತೆಯ ಸಹಕಾರದಿಂದ ವೈರಾಣು ಅಬ್ಬರವನ್ನು ತಗ್ಗಿಸಲು ಸಾಧ್ಯವಾಗಿದೆ. ತಮ್ಮ ಕುಟುಂಬ ಸದಸ್ಯರೊಂದಿಗೇ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಕೊರೊನಾ ಯೋಧರು ತಮ್ಮ ಪ್ರಾಣವನ್ನೇ  ಪಣಕ್ಕಿಟ್ಟು ಹೋರಾಡುತ್ತಿದ್ದಾರೆ ಮತ್ತು ಈ ಯುದ್ಧದಲ್ಲಿ ಸಮಯದೊಂದಿಗೆ ಹೋರಾಡುತ್ತ ಮುಂಚೂಣಿಯಲ್ಲಿ ಧೈರ್ಯದಿಂದ ನಿಂತಿದ್ದಾರೆ. ಸರ್ಕಾರಿ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ಪೊಲೀಸ್ ಅಧಿಕಾರಿಗಳು, ಪುರಸಭೆ ಕಾರ್ಮಿಕರು ಮತ್ತು ಸ್ವಚ್ಛತಾಕರ್ಮಿಗಳು ಸೋಂಕಿತ ರೋಗಿಗಳಿಗೆ ಸಮರ್ಪಕವಾಗಿ ಸೇವೆ  ಸಲ್ಲಿಸುವ ಮೂಲಕ ಅಸಾಧಾರಣ ಜವಾಬ್ದಾರಿಯ ಪ್ರಜ್ಞೆಯನ್ನು ಪ್ರದರ್ಶಿಸಿದ್ದಾರೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com