ರಾಷ್ಟ್ರೀಯತಾವಾದಿ ವಿಷಯಗಳಿಗೆ ಟ್ವಿಟರ್, ಫೇಸ್‌ಬುಕ್ ನಿಂದ ಅನಿಯಂತ್ರಿತ ಕತ್ತರಿ ಪ್ರಯೋಗ: ತೇಜಸ್ವಿ ಸೂರ್ಯ ಆರೋಪ
ಬಳಕೆದಾರರು ಪೋಸ್ಟ್ ಮಾಡಿದ ರಾಷ್ಟ್ರೀಯತಾವಾದಿ ವಿಷಯಗಳನ್ನು ಟ್ವೀಟರ್, ಫೇಸ್ ಬುಕ್ ಅನಿಯಂತ್ರಿತವಾಗಿ ಕತ್ತರಿ ಪ್ರಯೋಗ ಮಾಡುತ್ತಿವೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಧ್ಯಪ್ರವೇಶ ಬಯಸಿದ್ದಾರೆ.
Published: 23rd September 2020 09:01 PM | Last Updated: 23rd September 2020 09:09 PM | A+A A-

ಸಂಸದ ತೇಜಸ್ವಿ ಸೂರ್ಯ
ನವದೆಹಲಿ: ಬಳಕೆದಾರರು ಪೋಸ್ಟ್ ಮಾಡಿದ ರಾಷ್ಟ್ರೀಯತಾವಾದಿ ವಿಷಯಗಳನ್ನು ಟ್ವೀಟರ್, ಫೇಸ್ ಬುಕ್ ಅನಿಯಂತ್ರಿತವಾಗಿ ಕತ್ತರಿ ಪ್ರಯೋಗ ಮಾಡುತ್ತಿವೆ ಎಂದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಆರೋಪಿಸಿದ್ದು, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಾಯಿಸಿದ್ದಾರೆ.
ಲೋಕಸಭೆಯಲ್ಲಿ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ತೇಜಸ್ವಿ ಸೂರ್ಯ, ಮೂರನೇ ವ್ಯಕ್ತಿ ಬಳಕೆದಾರರು ಪೋಸ್ಟ್ ಮಾಡುವ ವಿಶೇಷವಾಗಿ ರಾಷ್ಟ್ರೀಯತವಾದಿ ಅಂಶಗಳನ್ನು ಟ್ವೀಟರ್ ಮತ್ತು ಫೇಸ್ ಬುಕ್ ಅನಿಯಂತ್ರಿತವಾಗಿ ಸೆನ್ಸಾರ್ ಮಾಡುತ್ತಿರುವ ಬಗ್ಗೆ ಹಲವು ದಿನಗಳಿಂದ ಅನೇಕ ವಿಶ್ವಾಸಾರ್ಹ ಆರೋಪಗಳಿವೆ ಎಂದರು.
ಇದು ಮಾತನಾಡುವ ಸ್ವಾತಂತ್ರಕ್ಕೆ ಕಾರಣ ರಹಿತ ನಿರ್ಬಂಧ ಮಾತ್ರವಲ್ಲದೇ, ಚುನಾವಣಾ ಸಂದರ್ಭದಲ್ಲಿ ಕಾನೂನುಬಾಹಿರ ಮಧ್ಯಪ್ರವೇಶಕ್ಕೂ ಕಾರಣವಾಗಿದ್ದು, ಮಹತ್ವದ ಸಾಂವಿಧಾನಿಕ ಸವಾಲನ್ನು ಒಡ್ಡುತ್ತದೆ ಎಂದು ಹೇಳಿದರು.
ಐಟಿ ಕಾಯ್ದೆ 2000 ರ ಅಡಿಯಲ್ಲಿ ಮಧ್ಯವರ್ತಿಗಳೆಂದು ಫೇಸ್ ಬುಕ್, ಟ್ವೀಟರ್ ನಂತಹ ಸಾಮಾಜಿಕ ಮಾಧ್ಯಮಗಳು ಹೇಳಿಕೊಳ್ಳುತ್ತಿವೆ, ಮಧ್ಯವರ್ತಿಗಳ ಪಾತ್ರವು ಮೂರನೇ ವ್ಯಕ್ತಿಯ ಬಳಕೆದಾರರ ಡೇಟಾವನ್ನು ಸಂಸ್ಕರಿಸಲು, ಸಂಗ್ರಹಿಸಲು ಮತ್ತು ರವಾನಿಸಲು ಸೀಮಿತವಾಗಿದೆ. ಆದರೆ, ಬಳಕೆದಾರರ ವಿಷಯದ ಮೇಲೆ ಹಸ್ತಕ್ಷೇಪವನ್ನು ಒಳಗೊಂಡಿರುವುದಿಲ್ಲ. ಆದ್ದರಿಂದ, ಕಾಯ್ದೆಯ ಸೆಕ್ಷನ್ 79 ಮಧ್ಯವರ್ತಿಗಳಿಗೆ ಹೊಣೆಗಾರಿಕೆಯಿಂದ ವಿನಾಯಿತಿ ನೀಡಲಿದೆ ಎಂದರು.