ಥಾಣೆ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಪಟ್ಟಣದ ಪವರ್‌ಲೂಮ್ ಕಾರ್ಖಾನೆಯಲ್ಲಿ ಗೋಡೆ ಕುಸಿದು ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.
ಕಟೈ ಪ್ರದೇಶದ ತುಕಾರಾಂ ಕಾಂಪೌಂಡ್‌ನಲ್ಲಿ ಶುಕ್ರವಾರ ಸಂಜೆ ಈ ಅಪಘಾತ ಸಂಭವಿಸಿದೆ, ದುರಸ್ತಿ ಕಾರ್ಯದಲ್ಲಿದ್ದ ಪವರ್‌ಲೂಮ್ ಕಾರ್ಖಾನೆಯ ಕಾಂಪೌಂಡ್ ಗೋಡೆ ಕುಸಿದಿದೆ. ದುರ್ಘಟನೆಯಲ್ಲಿ ಮೂವರು ಕಾರ್ಮಿಕರು ಜೀವಂತ ಸಮಾಧಿ ಆಗಿದ್ದಾರೆ.
ಇತರ ನಾಲ್ವರು ಗಾಯಗೊಂಡಿದ್ದು ಅವರುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಥಾಣೆ ಮಹಾನಗರ ಪಾಲಿಕೆಯ ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ (ಆರ್‌ಡಿಎಂಸಿ)ದ ಮುಖ್ಯಸ್ಥ ಸಂತೋಷ್ ಕದಮ್ ಶುಕ್ರವಾರ ತಡರಾತ್ರಿ ಬಿಡುಗಡೆಯಾಗಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಮೃತ ಕಾರ್ಮಿಕರನ್ನು ಮನ್ಸುಖ್ ಭಾಯ್ (45), ರಾಂಚೋಡ್ ಪ್ರಜಾಪತಿ (50) ಮತ್ತು ಭಗವಾನ್ ಜಾಧವ್ (55) ಎಂದು ಗುರುತಿಸಲಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
Advertisement