ಕೋವಿಡ್-19 ಅಸಮರ್ಪಕ ನಿರ್ವಹಣೆ: ಸರ್ಕಾರದ ವಿರುದ್ಧ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಪತಿ ಟೀಕೆ

ಕೋವಿಡ್‌-19 ಸಾಂಕ್ರಾಮಿಕ ನಿರ್ವಹಣೆಯ ವಿಚಾರವಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿ, ಡಾ. ಪರಕಾಲ ಪ್ರಭಾಕರ ಅವರು ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಪತಿ ಪರಕಾಲ ಪ್ರಭಾಕರ್
ನಿರ್ಮಲಾ ಸೀತಾರಾಮನ್ ಪತಿ ಪರಕಾಲ ಪ್ರಭಾಕರ್
Updated on

ಹೈದರಾಬಾದ್: ಕೋವಿಡ್‌-19 ಸಾಂಕ್ರಾಮಿಕ ನಿರ್ವಹಣೆಯ ವಿಚಾರವಾಗಿ ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿ, ಡಾ. ಪರಕಾಲ ಪ್ರಭಾಕರ ಅವರು ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ.

ಕೋವಿಡ್‌-19 ನಿರ್ವಹಣೆ ಕುರಿತಂತೆ ಅವರ ಅಧಿಕೃತ ಯೂಟ್ಯೂಬ್ ಖಾತೆ ‘ಮಿಡ್‌ವೀಕ್‌ ಮ್ಯಾಟರ್ಸ್‌’ ನಲ್ಲಿ ಮಾತನಾಡಿರುವ ಪ್ರಭಾಕರ್ ಅವರು, 'ರಾಜಕೀಯ ನಾಯಕರು ಜನರ ಭಾವನೆಗಳಿಗೆ ಸ್ಪಂದಿಸುವ ಗುಣ ಕಳೆದು ಕೊಂಡಿದ್ದಾರೆ. ಪ್ರಧಾನಿ ಮೋದಿ ಅವರು ಮಾತಿನ ವೈಖರಿ, ಚಾಣಾಕ್ಷ ನಡೆಗಳಿಂದ  ಹೊಣೆಗಾರಿಕೆಯಿಂದ ನುಣುಚಿಕೊಳ್ಳುವ ಕೌಶಲ್ಯಗಳನ್ನು ಸಿದ್ಧಿಸಿಕೊಂಡಿದ್ದಾರೆ. ಹೊಣೆಗಾರಿಕೆ, ಪಾರದರ್ಶಕತೆಯನ್ನು ಕಾಯ್ದುಕೊಳ್ಳುವವರು ಭಾರತದ ಇತಿಹಾಸದಲ್ಲಿ ದಾಖಲಾಗುತ್ತಾರೆ. ಪ್ರಧಾನಿ ಮೋದಿ ಈಗಲಾದರೂ ಸೂಕ್ತವಾದುದನ್ನು ಆರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.

ಅಂತೆಯೇ, 'ನಮ್ಮ ರಾಜಕೀಯ ಮತ್ತು ಧಾರ್ಮಿಕ ಮುಖಂಡರು ಇದ್ಯಾವುದನ್ನೂ ತಲೆಗೆ ಹಾಕಿ ಕೊಂಡಂತಿಲ್ಲ. ರಾಜಕೀಯದವರಿಗೆ ಚುನಾವಣೆ ಮುಖ್ಯ. ಧಾರ್ಮಿಕ ಮುಖಂಡರಿಗೆ ತಮ್ಮ ಆಚರಣೆಗಳು ಮುಖ್ಯವೆನಿಸಿದೆ. ಚುನಾವಣಾ ರ‍್ಯಾಲಿ ಗಳಲ್ಲಿ ಪ್ರಧಾನಿ, ಕೇಂದ್ರ ಸಚಿವರು, ಪ್ರತಿಪಕ್ಷಗಳ ನಾಯಕರು  ಭಾಗಿಯಾಗುತ್ತಾರೆ. ಕುಂಭಮೇಳದಲ್ಲಿ ಸಾವಿರಾರು ಜನ ಶಾಹಿಸ್ನಾನ ಮಾಡುತ್ತಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ತಮ್ಮ ರ‍್ಯಾಲಿಗಳನ್ನು ರದ್ದುಪಡಿಸಿದರು. ಆದರೆ ವಿವಿಧ ಪಕ್ಷಗಳ ಅಭ್ಯರ್ಥಿಗಳು ಕೋವಿಡ್‌-19 ನಡುವೆಯೇ ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದಲ್ಲಿ ಭಾಗಿಯಾದರು. ಚುನಾವಣಾ  ರ‍್ಯಾಲಿ ಹಾಗೂ ಕುಂಭಮೇಳಗಳನ್ನು ಕೆಲವರು ಸಮರ್ಥಿಸಿಕೊಂಡರು. ಇದು ನಿಜಕ್ಕೂ ಬೇಸರದ ಸಂಗತಿ ಎಂದು ಕಿಡಿಕಾರಿದ್ದಾರೆ.

ಅಂತೆಯೇ 'ಭಾರತವು ಈಗ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದೆ. ಕಳೆದ ಒಂದು ವಾರದ ವಿದ್ಯಮಾನಗಳನ್ನು ಗಮನಿಸಿದರೆ, ನಾವು ಎಂಥಹ ಪರಿಸ್ಥಿತಿ ಯಲ್ಲಿ ಇದ್ದೇವೆ, ಕೇಂದ್ರ ಸರ್ಕಾರದ ಸಿದ್ಧತೆ ಹೇಗಿದೆ, ರಾಜಕೀಯ ವ್ಯವಸ್ಥೆಯ ಹೊಣೆಗಾರಿಕೆ ಯಾವ ಮಟ್ಟದಲ್ಲಿದೆ ಬಗ್ಗೆ ಚಿತ್ರಣ ಸಿಗುತ್ತದೆ. ಕಳೆದ  ವರ್ಷ ಕೋವಿಡ್‌ಗೆ ಒಳಗಾದ ಕುಟುಂಬದ ಸದಸ್ಯನ ಚಿಕಿತ್ಸೆಗಾಗಿ ಅನೇಕರು ಜೀವಮಾನದ ಗಳಿಕೆಯನ್ನೆಲ್ಲಾ ವ್ಯಯಿಸಿದ್ದಾರೆ. ಎರಡನೇ ಅಲೆಯು ಇನ್ನಷ್ಟು ಭೀಕರವಾಗಿದೆ. ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಲಿದೆ ಎಂದು ವೈದ್ಯರು ಹೇಳುತ್ತಿದ್ದಾರೆ. ಈಗಾಗಲೇ ಆಸ್ಪತ್ರೆಗಳ ಹೊರಗೆ ರೋಗಿಗಳು, ಅವರ ಸಂಬಂಧಿಕರ  ಸಾಲುಗಟ್ಟಿ ನಿಂತಿದ್ದಾರೆ. ಸ್ಮಶಾನಗಳಲ್ಲಿ ಹೆಣ ಸುಡಲೂ ಕೂಡ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯಗಳು ಮನಕಲಕುತ್ತಿವೆ'.

‘ಎರಡನೇ ಅಲೆಯನ್ನು ಎದುರಿಸಲು ನಾವು ಸಿದ್ಧರಾಗಿಲ್ಲ.. ಸೂಕ್ತರೀತಿಯಲ್ಲಿ ಸಿದ್ಧತೆ ಮಾಡಿಕೊಂಡಿಲ್ಲ ಎಂಬುದು ಸ್ಪಷ್ಟ. ಲಸಿಕೆ ನೀಡಿಕೆಯಲ್ಲಿ ಹಿಂದೆ ಬೀಳುತ್ತಿದ್ದೇವೆ. ಸಿದ್ಧತೆಯ ಬಗ್ಗೆ ಏನೇ ಕೇಳಿದರೂ ಉತ್ತರಿಸುವ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇಲ್ಲ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ನೀಡಿದ  ಸಲಹೆಗಳಿಗೆ ಕೇಂದ್ರದ ಆರೋಗ್ಯ ಸಚಿವರಿಂದ ಅಸಡ್ಡೆಯ ಉತ್ತರ ಸಿಕ್ಕಿತು. ಸಮಸ್ಯೆ ಬಗ್ಗೆ ಆಳವಾಗಿ ಯೋಚಿಸದಿದ್ದರೆ ಹೀಗಾಗುತ್ತದೆ’ ಎಂದು ಪ್ರಭಾಕರ ಅವರು ಟೀಕಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com