ಕೋವಿಡ್-19: 'ಒಬ್ಬ ಸೋಂಕಿತ 406 ಮಂದಿಗೆ ಸೋಂಕು ಅಂಟಿಸಬಹುದು; ಸಾಮಾಜಿಕ ಅಂತರ ಪಾಲನೆ ಮಾಡದಿದ್ದರೆ ದೊಡ್ಡ ದುರಂತ ಕಾದಿದೆ'

ಒಬ್ಬ ಕೊರೋನಾ ಸೋಂಕಿತ ವ್ಯಕ್ತಿ ಕೇವಲ 30 ದಿನಗಳ ಅಂತರದಲ್ಲಿ ಬರೊಬ್ಬರಿ 406 ಮಂದಿಗೆ ಸೋಂಕು ಪ್ರಸರಣ ಮಾಡಬಹುದು.. ಕೋವಿಡ್ ನಿಯಮಗಳನ್ನು ಪಾಲಿಸದೇ ಇದ್ದರೇ ದೊಡ್ಡ ದುರಂತಕ್ಕೆ ಎಡೆ ಮಾಡಿಕೊಟ್ಟಂತೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ಒಬ್ಬ ಕೊರೋನಾ ಸೋಂಕಿತ ವ್ಯಕ್ತಿ ಕೇವಲ 30 ದಿನಗಳ ಅಂತರದಲ್ಲಿ ಬರೊಬ್ಬರಿ 406 ಮಂದಿಗೆ ಸೋಂಕು ಪ್ರಸರಣ ಮಾಡಬಹುದು.. ಕೋವಿಡ್ ನಿಯಮಗಳನ್ನು ಪಾಲಿಸದೇ ಇದ್ದರೇ ದೊಡ್ಡ ದುರಂತಕ್ಕೆ ಎಡೆ ಮಾಡಿಕೊಟ್ಟಂತೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ದೇಶದಲ್ಲಿನ ಕೋವಿಡ್-19 ಸಾಂಕ್ರಾಮಿಕದ ಸ್ಥಿತಿಗತಿ ಕುರಿತು ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಅವರು, ದೇಶದಲ್ಲಿ ಸೋಂಕು ನಿಯಂತ್ರಣ ಜನರ ಕೈಯಲ್ಲಿ ಇದೆ.. ಜನ ಕಡ್ಡಾಯವಾಗಿ ಕೋವಿಡ್-19 ನಿಯಮಾವಳಿಗಳನ್ನು ಪಾಲನೆ  ಮಾಡಲೇಬೇಕು..ಕೊರೋನವೈರಸ್ ಸೋಂಕು ಹರಡುವುದನ್ನು ತಡೆಗಟ್ಟಲು ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಗಳನ್ನು ಧರಿಸುವುದು ಅತ್ಯಂತ ಅನಿವಾರ್ಯವಾಗಿದ್ದು, ಕೋವಿಡ್ ನಿಯಮಗಳನ್ನು ಪಾಲಿಸದೇ ಇದ್ದರೆ ಖಂಡಿತ ದೊಡ್ಡ ದುರಂತ ಎದುರಾಗಬಹುದು ಎಂದು ಹೇಳಿದ್ದಾರೆ.

ಓರ್ವ ಸೋಂಕಿತನಿಂದ 406 ಮಂದಿಗೆ ಸೋಂಕು
ಇದೇ ವೇಳೆ ಓರ್ವ ಸೋಂಕಿತ ವ್ಯಕ್ತಿ 406 ಮಂದಿಗೆ ಸೋಂಕು ಪ್ರಸರಣ ಮಾಡಬಹುದು ಎಂದು ಹೇಳಿದ ಅವರು, ಸೋಂಕಿತ ವ್ಯಕ್ತಿಯು 30 ದಿನಗಳಲ್ಲಿ ವ್ಯಕ್ತಿಯು 406 ಜನರಿಗೆ ಸೋಂಕು ತಗುಲಿಸಬಹುದು ಎಂದು ಅನೇಕ ವಿಶ್ವವಿದ್ಯಾಲಯಗಳು ಸಂಶೋಧನೆ ನಡೆಸಿವೆ. ಹೀಗಾಗಿ ಸೋಂಕಿತ ವ್ಯಕ್ತಿಯಿಂದ ಅಂತರ  ಪಾಲನೆ ಮಾಡಿದರೆ ಸೋಂಕು ಪ್ರಸರಣವನ್ನು ಶೇ.50ರಷ್ಟು ಕಡಿಮೆ ಮಾಡಬಹುದು. 406 ಮಂದಿಯ ಬದಲು 15 ಜನರು ಸೋಂಕಿಗೆ ತುತ್ತಾಗಬಹುದು. ಅದೇ ಇನ್ನೂ ದೂರದ ಅಂತರ ಪಾಲನೆ ಮಾಡಿದರೆ ಈ ಪ್ರಮಾಣ ಶೇ.75ರಷ್ಟಾಗಿ ಕೇವಲ 2.5 ಮಂದಿ ಮಾತ್ರ ಸೋಂಕಿಗೆ ತುತ್ತಾಗಬಹುದು. ಹೀಗಾಗಿ ಸೋಂಕು  ಪ್ರಸರಣ ನಿಯಂತ್ರಣಕ್ಕಾಗಿ ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಗಳನ್ನು ಧರಿಸುವುದು ನಿರ್ಣಾಯಕವಾಗಿದೆ ಎಂದು ಅಗರ್ವಾಲ್ ಹೇಳಿದರು. 

"ನಾವು ಆರು ಅಡಿಗಳಷ್ಟು ದೂರದಲ್ಲಿದ್ದರೂ ಕೂಡ, ಸೋಂಕುರಹಿತ ವ್ಯಕ್ತಿಗೆ ವೈರಸ್ ಸೋಂಕು ಹರಡುವ ಅವಕಾಶವಿದೆ ಎಂದು ಅಧ್ಯಯನವು ಹೇಳುತ್ತಿದೆ. ಇದಕ್ಕೆ ಸಾಕಷ್ಟು ಹೋಮ್ ಐಸೊಲೇಷನ್ ಪ್ರಕರಣಗಳು ಸಾಕ್ಷಿಯಾಗಿವೆ. ಸೋಂಕಿತ ವ್ಯಕ್ತಿ ಮನೆಯಲ್ಲಿದ್ದಾಗ ಸೋಂಕು ರಹಿತ ಕುಟುಂಬಸ್ಥರು ಮಾಸ್ಕ್ ಧರಿಸದೇ  ಇದ್ದಲ್ಲಿ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡದೇ ಇದ್ದಲ್ಲಿ ಅವರಿಗೂ ಸೋಂಕು ತಗುಲುತ್ತದೆ. ಇದಕ್ಕೆ ಸಾಕಷ್ಟು ಪ್ರಕರಣಗಳು ಉದಾಹರಣೆಯಾಗಿವೆ. ಮನೆಯಲ್ಲಿ ಓರ್ವ ವ್ಯಕ್ತಿ ಸೋಂಕಿಗೆ ತುತ್ತಾದರೆ, ಮನೆಯಲ್ಲಿರುವ ಬಹುತೇಕ ಮಂದಿ ಸೋಂಕಿಗೆ ತುತ್ತಾದ ಸಾಕಷ್ಟು ಪ್ರಕರಣಗಳು ನಮ್ಮ ಮುಂದಿವೆ. ಇದಕ್ಕೆ  ಕೋವಿಡ್ ನಿಯಮಾವಳಿಗಳ ಪಾಲನೆಯಲ್ಲಿನ ಕೊರತೆಯೇ ಕಾರಣ ಎಂದು ಹೇಳಿದ್ದಾರೆ. 

ಸೋಂಕಿತ ವ್ಯಕ್ತಿ ಮಾಸ್ಕ್ ಧರಿಸಿ, ಕುಟುಂಬಸ್ಥರು ಮಾಸ್ಕ್ ಧರಿಸದೇ ಇದ್ದರೂ ಕೂಡ ಸೋಂಕು ತಗಲುವು ಸಾಧ್ಯತೆ ಶೇ.30ರಷ್ಟಿದೆ. ಹೀಗಾಗಿ ಸೋಂಕಿತ ವ್ಯಕ್ತಿಯ ಜೊತೆ ಜೊತೆಗೆ ಕುಟುಂಬಸ್ಥರೂ ಕೂಡ ಮಾಸ್ಕ್ ಧರಿಸುವದು, ಅಂತರ ಪಾಲನೆ ಮಾಡುವುದು ಕಡ್ಡಾಯ. ಇಬ್ಬರೂ ಮಾಸ್ಕ್ ಧರಿಸದರೆ ಸೋಂಕು  ಪ್ರಸರಣ ಸಾಧ್ಯತೆ ಶೇ.1.5ಕ್ಕೆ ಕುಸಿಯುತ್ತದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com