ದೇಶದಲ್ಲಿ ಮಾನವ ಬಿಕ್ಕಟ್ಟು ಎದುರಾಗಿದೆ, ಮಾಹಿತಿ ಹತ್ತಿಕ್ಕಿದರೆ ನ್ಯಾಯಾಂಗ ನಿಂದನೆಯಾಗುತ್ತದೆ: ಸುಪ್ರೀಂ ಕೋರ್ಟ್ ಎಚ್ಚರಿಕೆ

ಬಡವರಿಗೆ ಲಸಿಕೆಗಳಿಗೆ ಹಣ ನೀಡಲು ಸಾಧ್ಯವಾಗುವುದಿಲ್ಲವಾದ್ದರಿಂದ ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ಕೋವಿಡ್-19 ಲಸಿಕೆ ಅಭಿಯಾನಕ್ಕೆ ಅಳವಡಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್
Updated on

ನವದೆಹಲಿ: ಬಡವರಿಗೆ ಲಸಿಕೆಗಳಿಗೆ ಹಣ ನೀಡಲು ಸಾಧ್ಯವಾಗುವುದಿಲ್ಲವಾದ್ದರಿಂದ ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ಕೋವಿಡ್-19 ಲಸಿಕೆ ಅಭಿಯಾನಕ್ಕೆ ಅಳವಡಿಸಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ದೇಶದಲ್ಲಿ ಕೊರೋನಾ ಎರಡನೇ ಅಲೆ ತಾಂಡವವಾಡಿ ಜನರು ತತ್ತರಿಸಿ ಹೋಗುತ್ತಿರುವ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಇಂದು ಮಹತ್ವದ ವಿಚಾರಣೆ ನಡೆಸಿ ಆದೇಶವನ್ನು ಹೊರಡಿಸಿದೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು?: ಖಾಸಗಿ ಲಸಿಕೆ ಉತ್ಪಾದಕರು ಯಾವ ರಾಜ್ಯಗಳಿಗೆ ಎಷ್ಟು ಲಸಿಕೆಗಳನ್ನು ನೀಡಬೇಕು ಎಂಬ ಬಗ್ಗೆ ತೀರ್ಮಾನ ಮಾಡಲು ಅವಕಾಶ ಕೊಡಬಾರದು, ದೇಶದಲ್ಲಿ ಆರೋಗ್ಯ ವಲಯ ಮಹತ್ವದ ಘಟಕ್ಕೆ ಬಂದಿದ್ದು ನಿವೃತ್ತ ವೈದ್ಯರು ಅಥವಾ ಅಧಿಕಾರಿಗಳನ್ನು ಸೇವೆಗೆ ಮರು ನೇಮಕ ಮಾಡಿಕೊಳ್ಳಬೇಕು ಎಂದು ಹೇಳಿದೆ.

ಕಳೆದ 70 ವರ್ಷಗಳಲ್ಲಿ ನಾವು ಅನುಸರಿಸಿಕೊಂಡು ಬಂದಿರುವ ಆರೋಗ್ಯ ಮೂಲಭೂತಸೌಕರ್ಯಗಳು ಸೂಕ್ತವಾಗಿಲ್ಲ ಎಂಬುದು ಗೊತ್ತಿರುವ ವಿಚಾರ, ಆದರೆ ಈ ಆರೋಗ್ಯ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಸಮಯಕ್ಕೆ ಸರಿಯಾಗಿ ಎಲ್ಲರಿಗೂ ದೊರಕುವಂತೆ ಮಾಡುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜವಾಬ್ದಾರಿಯಾಗಿದೆ.

ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆ ಉಂಟಾಗಿರುವ ಸಂದರ್ಭದಲ್ಲಿ ಆರೋಗ್ಯ ಸೇವೆ ಕಾರ್ಯಕರ್ತರು, ವೈದ್ಯರಿಗೆ ಸಹ ಸರಿಯಾಗಿ ಬೆಡ್ ಸಿಗುತ್ತಿಲ್ಲ, ಪರಿಸ್ಥಿತಿ ಚಿಂತಾಜನಕವಾಗಿದೆ, ಹೀಗಿರುವಾಗ ಹಾಸ್ಟೆಲ್ ಗಳು, ದೇವಸ್ಥಾನಗಳು, ಮಂದಿರಗಳು, ಚರ್ಚ್ ಹಾಗೂ ಇತರ ಸಾರ್ವಜನಿಕ ಸ್ಥಳಗಳನ್ನು ಕೋವಿಡ್ ಕೇರ್ ಕೇಂದ್ರಗಳನ್ನಾಗಿ ಪರಿವರ್ತಿಸಿ ಎಂದು ಸುಪ್ರೀಂ ಕೋರ್ಟ್ ಸಲಹೆ ನೀಡಿದೆ.

ಕೋವಿಡ್-19 ಸಿದ್ದತೆ ಬಗ್ಗೆ ಪ್ರಸ್ತುತಿಪಡಿಸಿ: ಕೋವಿಡ್-19 ಎರಡನೇ ಅಲೆ ದೇಶದಲ್ಲಿ ತೀವ್ರವಾಗಿರುವಾಗ ಅದರ ಸಿದ್ದತೆಗೆ ಏನೇನು ಮಾಡಿಕೊಂಡಿದ್ದೀರಿ ಎಂದು ದೇಶದ ಮುಂದೆ ಪ್ರಸ್ತುತಪಡಿಸಿ, ಇಂಟರ್ನೆಟ್, ಸೋಷಿಯಲ್ ಮೀಡಿಯಾಗಳಲ್ಲಿ ಕೋವಿಡ್ ಬಗ್ಗೆ ನಾಗರಿಕರು ಎತ್ತಿರುವ ಪ್ರಶ್ನೆಗಳು, ಸಂದೇಹಗಳು ತಪ್ಪು ಎಂದು ಭಾವಿಸಲು ಸಾಧ್ಯವಾಗುವುದಿಲ್ಲ,ದೇಶದ ಜನರ ಕುಂದು-ಕೊರತೆ, ಸಂಶಯ, ಗೊಂದಲಗಳ ಬಗ್ಗೆ ಆಲಿಸಿ ಅವರಿಗೆ ಸೂಕ್ತ ಮಾಹಿತಿ, ತಿಳುವಳಿಕೆ ನೀಡಬೇಕು, ಮಾಹಿತಿ ಸರಾಗವಾಗಿ ಜನತೆಗೆ ತಲುಪಬೇಕು, ಆರೋಗ್ಯ ಸೌಲಭ್ಯ, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮಾಹಿತಿಗಳು ಜನತೆಗೆ ತಲುಪಬೇಕು ಎಂದು ಸಹ ಸುಪ್ರೀಂ ಕೋರ್ಟ್ ಕೇಂದ್ರಕ್ಕೆ ಸಲಹೆ ನೀಡಿದೆ.

ನ್ಯಾಯಾಂಗ ನಿಂದನೆ: ಕೋವಿಡ್-19ಗೆ ಸಂಬಂಧಪಟ್ಟ ಮಾಹಿತಿಗಳನ್ನು ಜನರಿಗೆ ತಲುಪದಂತೆ ತಡೆಯುವುದು, ತಿರಸ್ಕರಿಸುವುದು, ಸೋಷಿಯಲ್ ಮೀಡಿಯಾಗಳಲ್ಲಿ ಮಾಹಿತಿಗಳನ್ನು ಮತ್ತು ವಾಸ್ತವ ಪರಿಸ್ಥಿತಿಗಳನ್ನು ಹತ್ತಿಕ್ಕಲು ನೋಡಿದರೆ ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುತ್ತದೆ. ಈ ನಿಟ್ಟಿನಲ್ಲಿ ಎಲ್ಲಾ ಡಿಜಿಪಿಗಳಿಗೆ ಆದೇಶ ಹೊರಡಿಸಬೇಕೆಂದು ಸಹ ನ್ಯಾಯಾಲಯ ಕೇಂದ್ರ ಸರ್ಕಾರಕ್ಕೆ ಸ್ಪಷ್ಟವಾಗಿ ಆದೇಶ ನೀಡಿದೆ.

ನಾಗರಿಕರು ತಮ್ಮ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ತಿಳಿಸಿದರೆ ಯಾವುದೇ ರಾಜ್ಯವು ಮಾಹಿತಿಯನ್ನು ಹತ್ತಿಕ್ಕುವ ಅಥವಾ ಮಾಹಿತಿಯನ್ನು ಮರೆಮಾಚುವ ಕೆಲಸ ಮಾಡಬೇಡಿ. ಈ ವಿಷಯದಲ್ಲಿ ಯಾವುದೇ ನಾಗರಿಕರಿಗೆ ಕಿರುಕುಳ ನೀಡಿದರೆ ಇದನ್ನು ನ್ಯಾಯಾಂಗ ನಿಂದನೆಯೆಂದು ಪರಿಗಣಿಸಬೇಕಾಗುತ್ತದೆ ಎಂದು ಸಹ ಸುಪ್ರೀಂ ಕೋರ್ಟ್ ಸರ್ಕಾರಗಳಿಗೆ ಒತ್ತಿ ಹೇಳಿದೆ. 

ಈ ದೇಶದ ನಾಗರಿಕ ಅಥವಾ ನ್ಯಾಯಾಧೀಶನಾಗಿ ನನಗೆ ಇದು ಬಹಳ ಕಳವಳಕಾರಿಯಾಗಿದೆ. ನಾಗರಿಕರು ತಮ್ಮ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಂಡರೆ, ಮಾಹಿತಿಯನ್ನು ಹತ್ತಿಕ್ಕಬಾರದು, ಹಾಸಿಗೆ ಅಥವಾ ಆಮ್ಲಜನಕವನ್ನು ಬಯಸಿದರೆ ಯಾವುದೇ ನಾಗರಿಕರು ಸೋಷಿಯಲ್ ಮೀಡಿಯಾದಲ್ಲಿ ಸಹಾಯ ಕೇಳಿದರೆ ಅದನ್ನು ತಡೆಯುವ ಪ್ರಯತ್ನ ಮಾಡಬೇಡಿ, ನಾವೀಗ ಆರೋಗ್ಯ ತುರ್ತು ಸ್ಥಿತಿಯ ಬಿಕ್ಕಟ್ಟಿನಲ್ಲಿದ್ದೇವೆ ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದ್ದಾರೆ.

ವಿವಿಧ ಬೆಲೆ ಏಕೆ?: ಕೋವಿಡ್ ಲಸಿಕೆಗಳ ಬೆಲೆಯ ಬಗ್ಗೆ ನ್ಯಾಯಾಲಯವು ಕೇಂದ್ರವನ್ನು ಪ್ರಶ್ನಿಸಿದೆ. ಈ ಸಮಯದಲ್ಲಿ ಫಾರ್ಮ ಕಂಪೆನಿಗಳಿಂದ ಶೇಕಡಾ 100ರಷ್ಟು ಲಸಿಕೆಗಳನ್ನು ಏಕೆ ಸರ್ಕಾರ ಖರೀದಿಸುತ್ತಿಲ್ಲ, ಕೇಂದ್ರ ಮತ್ತು ರಾಜ್ಯಗಳಿಗೆ ಬೇರೆ ಬೇರೆ ಬೆಲೆಗಳು ಏಕೆ, ದೇಶಾದ್ಯಂತ ಲಸಿಕೆಗಳಿಗೆ ಏಕರೂಪ ಬೆಲೆ ತರಬಹುದಲ್ಲವೇ ಎಂದು ಪ್ರಶ್ನಿಸಿದೆ.

ಶೇಕಡಾ 50ರಷ್ಟು ಲಸಿಕೆಗಳನ್ನು ರಾಜ್ಯ ಸರ್ಕಾರಗಳು ನೇರವಾಗಿ ಉತ್ಪಾದಕರಿಂದ ಖರೀದಿಸಬಹುದು ಎಂದು ಕೇಂದ್ರ ಸರ್ಕಾರ ಹೇಳಿದೆ, ಇದು ಸಮಾನತೆಯನ್ನು ತೋರಿಸುತ್ತದೆಯೇ, ಬಡವರಿಗೆ ಲಸಿಕೆಯನ್ನು ಹಣ ನೀಡಿ ಖರೀದಿಸಲು ಸಾಧ್ಯವಾಗುತ್ತದೆಯೇ ಎಂದು ಪ್ರಶ್ನಿಸಿದೆ.

ಸರ್ಕಾರ ಲಸಿಕೆಗೆ ನಿಗದಿಮಾಡಿರುವ ಬೆಲೆ ಸರಿಯಾಗಿಲ್ಲ. ಶೇಕಡಾ 50ರಷ್ಟು ಡೋಸ್‌ಗಳು ಉಚಿತವಾಗಿ ಲಭ್ಯವಿರುತ್ತವೆ, ಇದು ಕೊರೋನಾ ಮುಂಚೂಣಿ ಕಾರ್ಮಿಕರಿಗೆ ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಬಳಸಲಾಗುತ್ತದೆ. ಉಳಿದ ಡೋಸ್ ಗಳನ್ನು 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಿಗೆ ಬಳಸಲಾಗುತ್ತದೆ, 18-45 ವಯೋಮಾನದ ಐವತ್ತೊಂಬತ್ತು ಕೋಟಿ ಭಾರತೀಯರು ನಮ್ಮ ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಲಸಿಕೆ ಪಡೆಯಲು ಬಡ ಮತ್ತು ಅಂಚಿನಲ್ಲಿರುವ ಜನರು ಹೇಗೆ ಹಣವನ್ನು ಹೊಂದಿಸುತ್ತಾರೆ, ಸ್ವಾತಂತ್ರ್ಯದ ನಂತರ ರಾಷ್ಟ್ರೀಯ ರೋಗನಿರೋಧಕ ಮಾದರಿಯನ್ನು ನಾವು ಅನುಸರಿಸಬೇಕು ಎಂದು ಸುಪ್ರೀಂ ಕೋರ್ಟ್ ಇಂದು ವಿಚಾರಣೆ ವೇಳೆ ತಾರ್ಕಿಕ ಅಂಶವನ್ನು ಮುಂದಿಟ್ಟಿದೆ.

ಖಾಸಗಿಯಾಗಿ ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ ಕೋವಿಶೀಲ್ಡ್ ರಾಜ್ಯಗಳಿಗೆ 400 ರೂಪಾಯಿಗೆ ಬದಲು 300 ರೂಪಾಯಿಗೆ ಇಳಿಕೆ ಮಾಡಲಾಗಿದೆ ಎಂದು ಸಿಇಒ ಆದರ್ ಪೂನವಾಲ್ಲಾ ತಿಳಿಸಿದ್ದಾರೆ. ಭಾರತ್ ಬಯೋಟೆಕ್ ರಾಜ್ಯ ಸರ್ಕಾರಗಳಿಗೆ ತನ್ನ ಕೋವಾಕ್ಸಿನ್ ಬೆಲೆಯನ್ನು ಪ್ರತಿ ಡೋಸ್‌ಗೆ 600 ರೂಪಾಯಿಗಳಿಂದ 400 ರೂಪಾಯಿಗಳಿಗೆ ಇಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com