ಜೈಪುರ: ಸಂಪುಟ ಪುನರ್ ಮುಂದಿರುವಂತೆಯೇ ರಾಜಸ್ಥಾನ ಕಾಂಗ್ರೆಸ್ ನಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ. ವಾರಾಂತ್ಯದಲ್ಲಿ ಹರಿಯಾಣ ಕಾಂಗ್ರೆಸ್ ಅಧ್ಯಕ್ಷೆ ಕುಮಾರಿ ಸೆಲ್ಜಾ ಭೇಟಿ ನಂತರ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರನ್ನು ಮಂಗಳವಾರ ಭೇಟಿಯಾದರು.
ಉನ್ನತ ಮೂಲಗಳ ಪ್ರಕಾರ, ಗೆಹ್ಲೋಟ್ ತನ್ನ 102 ನಿಷ್ಠಾವಂತ ಶಾಸಕರನ್ನು ಬದಿಗೊತ್ತಿ ಸಚಿನ್ ಪೈಲಟ್ ಬಣದ ಬೇಡಿಕೆಗಳನ್ನು ಪೂರೈಸುವ ಮನಸ್ಥಿತಿಯಲ್ಲಿ ಇಲ್ಲ ಮತ್ತು ಆಗಸ್ಟ್ 5 ಕ್ಕೂ ಮುಂಚಿತವಾಗಿ ನಿರೀಕ್ಷಿಸಲಾಗಿದ್ದ ಪುನರ್ ರಚನೆ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಇದು ಇನ್ನೂ ಒಂದು ವಾರ ಮುಂದೂಡುವ ಸಾಧ್ಯತೆಯಿದೆ.
ಸಚಿನ್ ಪೈಲಟ್ ಬೆಂಬಲಿಗರು ಕಾಂಗ್ರೆಸ್ ಆಡಳಿತದ ರಾಜ್ಯದಲ್ಲಿ ಹೆಚ್ಚಿನ ಅಧಿಕಾರವನ್ನು ಪಡೆಯಬೇಕು ಎಂಬ ಬೇಡಿಕೆಗಳ ನಡುವೆ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಆಪ್ತರಾದ ಸೆಲ್ಜಾ ಪಕ್ಷದ ಕೇಂದ್ರ ನಾಯಕತ್ವದ ಸಂದೇಶ ನೀಡಲು ಜೈಪುರಕ್ಕೆ ಭೇಟಿ ನೀಡಿದ್ದರು ಎಂದು ಊಹಿಸಲಾಗಿತ್ತು. ಮಂಗಳವಾರ ಶಿವಕುಮಾರ್ ಜೈಪುರಕ್ಕೆ ಆಗಮಿಸುವುದರೊಂದಿಗೆ ಸಮಸ್ಯೆ ಬಗೆಹರಿಸುವುದು ಸಾಕಷ್ಟು ಕಷ್ಟಕರವಾಗಿದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಗೆಹ್ಲೋಟ್ ಸಂಪುಟ ಪುನರ್ ರಚನೆಗೆ ಸಿದ್ಧವಿಲ್ಲ, ಅವರು ವಿಸ್ತರಣೆ ಮಾಡಲು ಬಯಸಿದ್ದಾರೆ. ತನ್ನ ಸಚಿವರನ್ನು ಕೈಬಿಟ್ಟು, ಪೈಲಟ್ ಗುಂಪಿನಿಂದ ಬರುವ ಹೊಸಬರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಬಯಸಿದ್ದಾರೆ. ಈ ಸಮಸ್ಯೆ ಬಗೆಹರಿಸುವ ಪ್ರಮುಖ ಅಜೆಂಡಾದೊಂದಿಗೆ ಡಿಕೆ ಶಿವಕುಮಾರ್ ಗೆಹ್ಲೋಟ್ ಭೇಟಿ ಮಾಡಿದ್ದಾರೆ. ಪೈಲಟ್ ಬಣ ಮಾತ್ರವಲ್ಲದೇ, ಹೈಕಮಾಂಡ್ ಕೂಡಾ ಕಾರ್ಯಕ್ಷಮತೆ ತೋರದ ಸಚಿವರನ್ನು ಕೈಬಿಡುವಂತೆ ಹೇಳುತ್ತಿದೆ ಎಂದು ರಾಜಸ್ಥಾನ ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಆದಾಗ್ಯೂ, ಯಾವುದೇ ರಾಜಕೀಯ ಉದ್ದೇಶದಿಂದ ಜೈಪುರಕ್ಕೆ ಭೇಟಿ ನೀಡಿಲ್ಲ ಎಂದು ಡಿಕೆ ಶಿವಕುಮಾರ್ ಸುದ್ದಿಗಾರರಿಗೆ ಹೇಳಿದರು. ವೈಯಕ್ತಿಕ ಭೇಟಿ ಇದಾಗಿದೆ. ಯಾರಿಂದರೂ ಯಾವುದೇ ಸಂದೇಶ ಬಂದಿಲ್ಲ, ಯಾವುದೇ ಅಜೆಂಡಾ, ಕರ್ನಾಟಕ, ರಾಜಸ್ಥಾನ ಅಥವಾ ಕೇಂದ್ರಕ್ಕೆ ಸಂಬಂಧಿಸಿದಂತೆ ಯಾವುದೇ ವಿಚಾರ ಇಲ್ಲ ಎಂದು ಹೇಳಿದರು.
ಇಂದು ಸಂಜೆ ಜೈಪುರದಿಂದ ದೆಹಲಿಗೆ ತೆರಳಿರುವ ಡಿಕೆ ಶಿವಕುಮಾರ್ ಬುಧವಾರ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗುವ ಸಾಧ್ಯತೆಯಿದೆ. ಗೆಹ್ಲೋಟ್ ಜೊತೆಗಿನ ಭೇಟಿ ಕುರಿತು ತಿಳಿಸಲಿದ್ದಾರೆ. ಅನೇಕ ಸುತ್ತಿನ ಚರ್ಚೆಗಳು ನಡೆದ ನಂತರ ಗೆಹ್ಲೋಟ್ ಸಂಪುಟ ಸ್ವಲ್ಪ ದಿನಗಳ ನಂತರ ಆಗುವ ಸಾಧ್ಯತೆಯಿದೆ.
Advertisement