ಪೆಗಾಗಸ್ ಬೇಹುಗಾರಿಕೆ: ಎನ್ ಡಿಎ ವಿರುದ್ಧ ಧ್ವನಿ ಎತ್ತಿದ ಜಿತನ್ ರಾಮ್ ಮಾಂಝಿ ಬಗ್ಗೆ ಬಿಜೆಪಿ ಕೆಂಡಾಮಂಡಲ
ಪಾಟ್ನಾ: ಇಸ್ರೇಲಿನ ಪೆಗಾಸಸ್ ತಂತ್ರಾಂಶದ ಮೂಲಕ ಬೇಹುಗಾರಿಕೆ ಪ್ರಕರಣದ ವಿರುದ್ಧ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ ಮತ್ತೊಬ್ಬ ಹಿರಿಯ ನಾಯಕ ಹಾಗೂ ಹಿಂದೂಸ್ತಾನಿ ಅವಂ ಮೋರ್ಚಾ ಮುಖ್ಯಸ್ಥ ಜಿತನ್ ರಾಮ್ ಮಾಂಝಿ ಧ್ವನಿ ಎತ್ತಿದ್ದಾರೆ.
ಪಾಟ್ನಾದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೇಂದ್ರ ಪ್ರತಿಪಕ್ಷಗಳ ಹೋರಾಟಕ್ಕೆ ಬೆಂಬಲ ಸೂಚಿಸಿದ್ದಾರೆ. ಸಂಸತ್ ಅಧಿವೇಶನದಲ್ಲಿ ವಿರೋಧ ಪಕ್ಷಗಳ ನಾಯಕರು ಬೇಹುಗಾರಿಕೆ ನಡೆದಿರುವ ಬಗ್ಗೆ ಆರೋಪಿಸುತ್ತಿದ್ದಾರೆ ಎಂದಾದರೆ, ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಪೆಗಾಸಸ್ ಬೇಹುಗಾರಿಕೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸಬೇಕು. ಆ ಮೂಲಕ ಪ್ರಕರಣದ ಹಿಂದಿರುವ ವ್ಯಕ್ತಿ ಯಾರು ಬೇಹುಗಾರಿಕೆ ನಡೆಸುತ್ತಿರುವುದು ಯಾರು ಎನ್ನುವುದು ಬಹಿರಂಗವಾಗಬೇಕು ಎಂದಿದ್ದಾರೆ.
ಬಿಹಾರ ಸರ್ಕಾರದಲ್ಲಿ ಎನ್ ಡಿಎ ಮೈತ್ರಿ ಸರ್ಕಾರದ ಭಾಗವಾಗಿರುವ ಜಿತನ್ ರಾಮ್ ಮಾಂಝಿ ಈ ಹಿಂದೆಯೂ ಕೂಡ ಹಲವು ವಿಷಯಗಳಿಗೆ ಕೇಂದ್ರ ಸರ್ಕಾರ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ನಡೆಯನ್ನು ವಿರೋಧಿಸಿದ್ದರು. ಪೆಗಾಸಿಸ್ ವಿವಾದದ ಬಗ್ಗೆ ತನಿಖೆ ನಡೆಸಬೇಕು ಎಂದು ಬಿಹಾರ ಸಿಎಂ ನಿತೀಶ್ ಕುಮಾರ್ ಕೂಡ ಆಗ್ರಹಿಸಿದ್ದರು. ಜಿತನ್ ರಾಮ್ ಅವರ ಹೇಳಿಕೆಯಿಂದಾಗಿ ಬಿಜೆಪಿ ಕೆಂಡಾಮಂಡಲವಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ