ಹಿಮಾಚಲದ ಕಿನ್ನೌರ್‌ನಲ್ಲಿ ಭಾರೀ ಭೂಕುಸಿತ: ಇಬ್ಬರು ಸಾವು, ಅವಶೇಷಗಳಡಿ 30 ಮಂದಿ ಸಿಲುಕಿರುವ ಶಂಕೆ

ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ ಭಾರೀ ಭೂಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಮತ್ತು ಅವಶೇಷಗಳ ಅಡಿಯಲ್ಲಿ 30ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಕ್ಷಣಾ ಕಾರ್ಯಾಚರಣೆ
ರಕ್ಷಣಾ ಕಾರ್ಯಾಚರಣೆ

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಬುಧವಾರ ಭಾರೀ ಭೂಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಮತ್ತು ಅವಶೇಷಗಳ ಅಡಿಯಲ್ಲಿ 30ಕ್ಕೂ ಹೆಚ್ಚು ಜನರು ಸಿಲುಕಿರುವ ಶಂಕೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಕ್ಷಣಾ ಕಾರ್ಯಾಚರಣೆಯ ಆರಂಭದಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಕನಿಷ್ಠ 13 ಜನರನ್ನು ಅವಶೇಷಗಳಿಂದ ಹೊರತೆಗೆದು ಹತ್ತಿರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಖ್ತಾ ಅವರು ತಿಳಿಸಿದ್ದಾರೆ.

ಇಲ್ಲಿಯವರೆಗೆ ಎರಡು ಶವಗಳನ್ನು ಪತ್ತೆ ಮಾಡಲಾಗಿದೆ. ಮೃತರಲ್ಲಿ ಒಬ್ಬನನ್ನು ಶಿಮ್ಲಾ ಜಿಲ್ಲೆಯ ರಾಂಪುರ್ ಪ್ರದೇಶದ ಕಾಯೋ ಗ್ರಾಮದ ರೋಹಿತ್ ಕುಮಾರ್ ಎಂದು ಗುರುತಿಸಲಾಗಿದೆ ಎಂದು ಮೊಖ್ತಾ ಹೇಳಿದ್ದಾರೆ.

ಕಿನ್ನೌರ್ ಜಿಲ್ಲೆಯ ನಿಚಾರ್ ತಹಸಿಲ್‌ನ ನಿಗುಲಸರಿಯಲ್ಲಿನ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ ಐದರಲ್ಲಿರುವ ಚೌರಾ ಗ್ರಾಮದಲ್ಲಿ ಮಧ್ಯರಾತ್ರಿ ಭೂಕುಸಿತ ಸಂಭವಿಸಿದೆ ಎಂದು ಅವರು ಹೇಳಿದರು.

ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ(ಎಚ್‌ಆರ್‌ಟಿಸಿ) ಬಸ್ ಚಾಲಕ ಮಹಿಂದರ್ ಪಾಲ್ ಸೇರಿದಂತೆ 13 ಜನರು ಗಾಯಗೊಂಡಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದಕ್ಕೂ ಮುನ್ನ 40ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಹಿಮಾಚಲ ರಸ್ತೆ ಸಾರಿಗೆ ಸಂಸ್ಥೆಯ(ಎಚ್‌ಆರ್‌ಟಿಸಿ) ಬಸ್ ಸೇರಿದಂತೆ ಹಲವು ವಾಹನಗಳು ಅವಶೇಷಗಳ ಅಡಿಯಲ್ಲಿ ಸಿಲುಕಿವೆ ಎಂದು ಉಪ ಆಯುಕ್ತ ಅಬಿದ್ ಹುಸೇನ್ ಸಾದಿಕ್ ಅವರು ಹೇಳಿದ್ದರು.

ಸ್ಥಳಕ್ಕೆ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ(ಎನ್ ಡಿಆರ್ ಎಫ್) ಮತ್ತು ಸ್ಥಳೀಯ ರಕ್ಷಣಾ ತಂಡಗಳು ಆಗಮಿಸಿದ್ದು, ರಕ್ಷಣಾ
ಕಾರ್ಯಾಚರಣೆ ನಡೆಯುತ್ತಿದೆ ಎಂದು ಕಿನ್ನೌರ್ ಉಪ ಆಯುಕ್ತರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com