ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಟ್ವಿಟರ್ ಖಾತೆ ಮರುಸ್ಥಾಪನೆ
ನವದೆಹಲಿ: ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಯನ್ನು ಶನಿವಾರ ಮರುಸ್ಥಾಪಿಸಲಾಗಿದೆ.
ವಾಯುವ್ಯ ದಿಲ್ಲಿಯಲ್ಲಿ ಅತ್ಯಾಚಾರ ಹಾಗೂ ಹತ್ಯೆಗೆ ಒಳಗಾದ ಒಂಬತ್ತು ವರ್ಷದ ಬಾಲಕಿಯ ಸಂತ್ರಸ್ತ ಕುಟುಂಬದ ಚಿತ್ರಗಳನ್ನು ಟ್ವೀಟ್ ಮಾಡಿದ ನಂತರ ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಯನ್ನು ಕಳೆದ ವಾರ ತಾತ್ಕಾಲಿಕವಾಗಿ ಸ್ಥಗಿತ ಗೊಳಿಸಲಾಗಿತ್ತು.
ಬಳಿಕ ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಟ್ವಿಟರ್, ರಾಹುಲ್ ಗಾಂಧಿ ಅವರು ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಹೇಳಿತ್ತು.
ಇದೀಗ ರಾಹುಲ್ ಅವರ ಟ್ವಿಟರ್ ಹ್ಯಾಂಡಲ್ ಅನ್ನು ಮರುಸ್ಥಾಪಿಸಲಾಗಿದ್ದು, ರಾಹುಲ್ ಅವರ ಚಿತ್ರಗಳನ್ನು ಹಂಚಿಕೊಂಡ ಕೆಲವು ಪಕ್ಷದ ನಾಯಕರ ಟ್ವಿಟರ್ ಖಾತೆಗಳನ್ನು ಕೂಡ ಮರುಸ್ಥಾಪಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಈ ಕುರಿತು ಕಾಂಗ್ರೆಸ್ ಪಕ್ಷದ ಮುಖಂಡರೊಬ್ಬರು ಹೇಳಿದ್ದು, "ರಾಹುಲ್ ಗಾಂಧಿಯವರ ಟ್ವಿಟರ್ ಖಾತೆಯನ್ನು ಅನ್‌ಲಾಕ್ ಮಾಡಲಾಗಿದೆ. ಕೆಲವು ನಾಯಕರ ಖಾತೆಗಳನ್ನು ಕೂಡ ಮರುಸ್ಥಾಪಿಸಲಾಗಿದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಟ್ವಿಟರ್ ವಿರುದ್ಧ ರಾಹುಲ್ ಗಾಂಧಿಯವರು ಹರಿಹಾಯ್ದಿದ್ದರು. ಟ್ವಿಟರ್ ರಾಷ್ಟ್ರೀಯ ರಾಜಕೀಯ ಪ್ರಕ್ರಿಯೆಯಲ್ಲಿ ಹಸ್ತಕ್ಷೇಪ ಮಾಡುತ್ತಿದೆ ಎಂದು ಆರೋಪಿಸಿದ್ದರು. ತಮ್ಮ ಟ್ವಿಟರ್ ಹ್ಯಾಂಡಲ್ ಅನ್ನು ಮುಚ್ಚುವುದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ದಾಳಿ ಮಾಡಿದಂತೆ ಎಂದು ಹೇಳಿದ್ದರು.
"ಟ್ವಿಟರ್‌ನ ಅಪಾಯಕಾರಿ ಆಟ" ಎಂಬ ಶೀರ್ಷಿಕೆಯೊಂದಿಗೆ ಯೂಟ್ಯೂಬ್ ವೀಡಿಯೊ ಹೇಳಿಕೆ ನೀಡಿದ್ದ ರಾಹುಲ್ ಗಾಂಧಿ, ಟ್ವಿಟರ್ ವಾಸ್ತವವಾಗಿ ಒಂದು ತಟಸ್ಥ, ವಸ್ತುನಿಷ್ಠ ವೇದಿಕೆಯಲ್ಲ ಎಂಬುದು ಈಗ ಸ್ಪಷ್ಟವಾಗಿದೆ. ಇದು ಪಕ್ಷಪಾತದ ವೇದಿಕೆಯಾಗಿದೆ. ಇದು ಆ ದಿನದ ಸರಕಾರ ಹೇಳುವುದನ್ನು ಕೇಳುತ್ತದೆ. ಕಂಪನಿಯು ತನ್ನ ಲಕ್ಷಾಂತರ ಅನುಯಾಯಿಗಳ ಅಭಿಪ್ರಾಯದ ಹಕ್ಕನ್ನು ನಿರಾಕರಿಸುತ್ತಿದೆ. ಇದು ಅನ್ಯಾಯವಾಗಿದೆ 'ಎಂದು ಹೇಳಿದ್ದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ