ಸದ್ಯಕ್ಕೆ ಪೆಟ್ರೋಲ್, ಡೀಸೆಲ್ ಸುಂಕ ಕಡಿತ ಇಲ್ಲ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿ ಮುಂದುವರೆದಿದ್ದಾರೆ.
ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವರಾಗಿ ಮುಂದುವರೆದಿದ್ದಾರೆ.
Updated on

ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕ ಕಡಿತ ಮಾಡುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.

ತೈಲೋತ್ಪನ್ನಗಳ ದರ ಏರಿಕೆ ಹಿನ್ನಲೆಯಲ್ಲಿ ತಮಿಳುನಾಡು ಸರ್ಕಾರ ಅಬಕಾರಿ ಸುಂಕ ಕಡಿತ ಮಾಡಿದ ಬೆನ್ನಲ್ಲೇ ಇದೀಗ ಕೇಂದ್ರ ಸರ್ಕಾರ ಕೂಡ ಅಬಕಾರಿ ಸುಂಕ ಕಡಿತ ಮಾಡಬೇಕು ಎಂಬ ಕೂಗು ಎದ್ದಿದ್ದು, ಆದರೆ ಇದಕ್ಕೆ ಕೇಂದ್ರ ಸರ್ಕಾರ ನಕಾರ ವ್ಯಕ್ತಪಡಿಸಿದೆ.

ಈ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್‌ಗೆ ನೀಡಿದ್ದ ಸಬ್ಸಿಡಿಗೆ ಬದಲಾಗಿ ಪಾವತಿ ಮಾಡಬೇಕಿರುವ ಮೊತ್ತವು ಸುಂಕ ಕಡಿತಕ್ಕೆ ಅವಕಾಶ ಕೊಡುತ್ತಿಲ್ಲ.. ಎಂದು ಹೇಳುವ ಮೂಲಕ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಧ್ಯಕ್ಕೆ ಪೆಟ್ರೋಲ್, ಡೀಸೆಲ್ ಸುಂಕ ಕಡಿತ ಇಲ್ಲ ಎಂದು ಹೇಳಿದ್ದಾರೆ.

ಹಿಂದಿನ ಯುಪಿಎ ಸರ್ಕಾರದ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲವನ್ನು ಸಬ್ಸಿಡಿ ದರದಲ್ಲಿ ಮಾರಲಾಗುತ್ತಿತ್ತು. ಸಬ್ಸಿಡಿ ಮೊತ್ತವನ್ನು ಪಾವತಿಸುವ ಬದಲು ಆಗ ಕೇಂದ್ರವು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳಿಗೆ 1.34 ಲಕ್ಷ ಕೋಟಿ ರೂ ಮೊತ್ತದ ತೈಲ ಬಾಂಡ್ ನೀಡಿತ್ತು. ಆ  ಬಾಂಡ್‌ನ ಅಸಲು ಹಾಗೂ ಬಡ್ಡಿಯ ಮೊತ್ತವನ್ನು ಈಗ ಪಾವತಿಸಲಾಗುತ್ತಿದೆ.

‘ತೈಲ ಬಾಂಡ್‌ಗೆ ಸಂಬಂಧಿಸಿದ ಮೊತ್ತವನ್ನು ಪಾವತಿಸುವ ಹೊರೆ ಇಲ್ಲದಿದ್ದರೆ ನಾನು ಈಗ ತೈಲೋತ್ಪನ್ನಗಳ ಮೇಲಿನ ಎಕ್ಸೈಸ್‌ ಸುಂಕವನ್ನು ಕಡಿಮೆ ಮಾಡುವ ಸ್ಥಿತಿಯಲ್ಲಿ ಇರುತ್ತಿದ್ದೆ.. ತೈಲ ಬಾಂಡ್ ವಿತರಿಸುವ ಮೂಲಕ ಹಿಂದಿನ ಸರ್ಕಾರವು ನಮ್ಮ ಕೆಲಸವನ್ನು ಕಷ್ಟಕರವಾಗಿಸಿದೆ. ತೈಲ ಬಾಂಡ್‌ಗಳಿಗೆ ಭಾರಿ  ಮೊತ್ತ ತೆಗೆದಿರಿಸಬೇಕಾಗಿದೆ ಎಂದು ಅವರು ವಿವರಿಸಿದರು.

ಕಳೆದ ಏಳು ವರ್ಷಗಳಲ್ಲಿ ತೈಲ ಬಾಂಡ್‌ಗಳ ಮೇಲಿನ ಬಡ್ಡಿ ಪಾವತಿಯು 70,195 ಕೋಟಿ ರೂ ಆಗಿದೆ. ತೈಲ ಬಾಂಡ್‌ನ ಅಸಲು ಮೊತ್ತ 1.34 ಲಕ್ಷ ಕೋಟಿ ರೂ. ಅಸಲು ಮೊತ್ತದಲ್ಲಿ 3,500 ಕೋಟಿ ರೂ ಮಾತ್ರ ಪಾವತಿಯಾಗಿದೆ. ಇನ್ನುಳಿದ 1.3 ಲಕ್ಷ ಕೋಟಿ ಮೊತ್ತವನ್ನು 2025–26ರೊಳಗೆ  ಪಾವತಿಸಬೇಕಿದೆ. ಗಮನಾರ್ಹ ಮೊತ್ತವು ಬಡ್ಡಿ ಹಾಗೂ ಅಸಲು ಪಾವತಿಗೆ ವಿನಿಯೋಗ ಆಗುತ್ತಿದೆ. ನನ್ನ ಮೇಲೆ ಅನ್ಯಾಯದ ಹೊರೆ ಬಿದ್ದಿದೆ ಎಂದು ಅವರು ಅಳಲು ತೋಡಿಕೊಂಡರು.

ಅಬಕಾರಿ ಸುಂಕದಲ್ಲಿ ಮಾಡಿದ ಹೆಚ್ಚಳದಿಂದ ಸಂಗ್ರಹವಾಗಿರುವ ಮೊತ್ತವು ತೈಲ ಕಂಪನಿಗಳಿಗೆ ಪಾವತಿಸಬೇಕಿರುವ ಮೊತ್ತಕ್ಕಿಂತ ಜಾಸ್ತಿ ಆಗಿದೆ. ಪೆಟ್ರೋಲ್ ಮತ್ತು ಡೀಸೆಲ್‌ ಮೇಲಿನ ತೆರಿಗೆಯಿಂದ ಕೇಂದ್ರವು ಸಂಗ್ರಹಿಸಿರುವ ಮೊತ್ತವು ಮಾರ್ಚ್‌ 31ರವರೆಗೆ 3.35 ಲಕ್ಷ ಕೋಟಿ ರೂ ಆಗಿತ್ತು. ಹಿಂದಿನ ವರ್ಷದಲ್ಲಿ  ಸಂಗ್ರಹವಾದ ಮೊತ್ತ 1.78 ಲಕ್ಷ ಕೋಟಿ ರೂ ಎಂದು ಅವರು ಮಾಹಿತಿ ನೀಡಿದರು.  

ಅಂತೆಯೇ ರಾಜ್ಯ ಸರ್ಕಾರಗಳು ಒಪ್ಪಿಗೆ ನೀಡಿದರೆ ಪೆಟ್ರೋಲ್ ಮತ್ತು ಡೀಸೆಲ್‌ಅನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬಹುದು ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com