ಅಫ್ಘಾನಿಸ್ತಾನದಲ್ಲಿ ಕಾರ್ಯನಿರ್ವಹಿಸಿದ್ದ ಐಟಿಬಿಪಿ ಶ್ವಾನಪಡೆ ಈಗ ಛತ್ತೀಸ್ ಘಡದಲ್ಲಿ ನಕ್ಸಲ್ ಕಾರ್ಯಾಚರಣೆಗೆ ನಿಯೋಜನೆ!

ಅಫ್ಘಾನಿಸ್ತಾನದಲ್ಲಿ ಐಟಿಬಿಪಿ ಕಮಾಂಡೋ ಭದ್ರತಾ ಪಡೆಯ ಭಾಗವಾಗಿದ್ದ ಮೂರು ಯುದ್ಧ ನಾಯಿಗಳನ್ನು ಶೀಘ್ರದಲ್ಲೇ ಛತ್ತೀಸ್‌ಗಢದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಡಿ ಕಾವಲು ಪಡೆಗಳ ನಕ್ಸಲ್ ವಿರೋಧಿ ಕಾರ್ಯಾಚರಣಾ ಘಟಕದೊಂದಿಗೆ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ಬುಧವಾರ  ತಿಳಿಸಿದ್ದಾರೆ.
ಅಫ್ಘಾನಿಸ್ತಾನದಲ್ಲಿ ಐಟಿಬಿಪಿಯಲ್ಲಿ ಕಾರ್ಯ ನಿರ್ವಹಿಸಿದ್ದ ಶ್ವಾನಪಡೆ
ಅಫ್ಘಾನಿಸ್ತಾನದಲ್ಲಿ ಐಟಿಬಿಪಿಯಲ್ಲಿ ಕಾರ್ಯ ನಿರ್ವಹಿಸಿದ್ದ ಶ್ವಾನಪಡೆ

ನವದೆಹಲಿ: ಅಫ್ಘಾನಿಸ್ತಾನದಲ್ಲಿ ಐಟಿಬಿಪಿ ಕಮಾಂಡೋ ಭದ್ರತಾ ಪಡೆಯ ಭಾಗವಾಗಿದ್ದ ಮೂರು ಯುದ್ಧ ನಾಯಿಗಳನ್ನು ಶೀಘ್ರದಲ್ಲೇ ಛತ್ತೀಸ್‌ಗಢದಲ್ಲಿ ಕಾರ್ಯನಿರ್ವಹಿಸುತ್ತಿರುವ ಗಡಿ ಕಾವಲು ಪಡೆಗಳ ನಕ್ಸಲ್ ವಿರೋಧಿ ಕಾರ್ಯಾಚರಣಾ ಘಟಕದೊಂದಿಗೆ ನಿಯೋಜಿಸಲಾಗುವುದು ಎಂದು ಅಧಿಕಾರಿಗಳು ಬುಧವಾರ  ತಿಳಿಸಿದ್ದಾರೆ.

ರೂಬಿ (ಹೆಣ್ಣು ಬೆಲ್ಜಿಯಂ ಮಲಿನೋಯಿಸ್ ತಳಿ), ಮಾಯಾ (ಹೆಣ್ಣು ಲ್ಯಾಬ್ರಡಾರ್) ಮತ್ತು ಬಾಬಿ (ಗಂಡು ಡೋಬರ್ಮನ್)-ಈ ಮೂರು ನಾಯಿಗಳನ್ನು ನೈಋತ್ಯ ದೆಹಲಿಯ ಛಾವ್ಲಾ ಪ್ರದೇಶದ ಐಟಿಬಿಪಿ ಕ್ಯಾಂಪ್‌ನಲ್ಲಿರುವ ವಿಶೇಷ ನಾಯಿಗಳ ಶಿಬಿರಕ್ಕೆ ಕಳುಹಿಸಲಾಗಿದೆ. ಮಂಗಳವಾರ ತಾಲಿಬಾನ್ ನಿಯಂತ್ರಣದಲ್ಲಿರುವ  ಅಫ್ಘಾನಿಸ್ತಾನದಿಂದ ವಿಶೇಷ ಮಿಲಿಟರಿ ಸ್ಥಳಾಂತರ ವಿಮಾನದಲ್ಲಿ ಗಾಜಿಯಾಬಾದ್‌ನ ಹಿಂಡನ್ ವಾಯುನೆಲೆಗೆ ಇವು ಬಂದಿಳಿದಿದ್ದವು.

ಈ ನಾಯಿಗಳು ಸುಮಾರು ಮೂರು ವರ್ಷಗಳ ಕಾಲ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಕಮಾಂಡೋ ತುಕಡಿಯೊಂದಿಗೆ ಸೇವೆ ಸಲ್ಲಿಸಿದ್ದವು, ಅದು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಮತ್ತು ಅದರ ರಾಜತಾಂತ್ರಿಕ ಸಿಬ್ಬಂದಿಗೆ ಕಾವಲು  ಕಾಯುತ್ತಿದ್ದವು. "ಮೂರು ನಾಯಿಗಳು ಹಲವು ಸುಧಾರಿತ ಸ್ಫೋಟಕ ಸಾಧನಗಳನ್ನು (ಐಇಡಿ) ಪತ್ತೆ ಮಾಡುವ ಕಾರ್ಯದಲ್ಲಿ ನೈಪುಣ್ಯ ಹೊಂದಿವೆ ಮತ್ತು ಭಾರತೀಯ ರಾಜತಾಂತ್ರಿಕರ ಮಾತ್ರವಲ್ಲದೆ ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವ ಸ್ಥಳೀಯ ಅಫ್ಘಾನ್ ನಾಗರಿಕರ ಜೀವಗಳನ್ನು ರಕ್ಷಿಸಿವೆ. ಅವುಗಳನ್ನು  ಶೀಘ್ರದಲ್ಲೇ ಐಟಿಬಿಪಿ ಘಟಕಗಳೊಂದಿಗೆ ಛತ್ತೀಸ್‌ಗಡದಲ್ಲಿ ಮಾವೋವಾದಿ ವಿರೋಧಿ ಕಾರ್ಯಾಚರಣೆಗಳಲ್ಲಿ ಬಳಕೆ ಮಾಡಲಾಗುತ್ತದೆ ಎಂದು ಅಧಿಕೃತ ಮೂಲಗಳು ಹೇಳಿವೆ.

ಸಾಗರೋತ್ತರ ಕರ್ತವ್ಯಕ್ಕೆ ಕಳುಹಿಸುವ ಮುನ್ನ ನಾಯಿಗಳನ್ನು ಐಟಿಬಿಪಿ ರಾಷ್ಟ್ರೀಯ ತರಬೇತಿ ಕೇಂದ್ರದ ಶ್ವಾನ (ಎನ್‌ಟಿಸಿಡಿ) ತರಬೇತಿ ಕೇಂದ್ರದಲ್ಲಿರಿಸಿ ತಾಲೀಮು ನಡೆಸಲಾಯಿತು. ಈ ಶ್ವಾನಪಡೆ 150 ಐಟಿಬಿಪಿ ಕಮಾಂಡೋಗಳನ್ನು ಒಳಗೊಂಡಂತೆ 150 ಸದಸ್ಯರನ್ನು ಒಳಗೊಂಡಿದ್ದು, ಮಂಗಳವಾರ ಬೆಳಿಗ್ಗೆ  ಐಎಎಫ್ ವಿಮಾನವನ್ನು ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುಜರಾತ್‌ನ ಜಾಮ್‌ನಗರ್‌ನಲ್ಲಿ ಇಂಧನ ತುಂಬಿಸಿಕೊಳ್ಳುವ ಮೂಲಕ ಹಿಂಡನ್ ವಾಯುನೆಲೆ ತಲುಪಿದವು. 

ಅಫ್ಘಾನಿಸ್ತಾನದಲ್ಲಿ ತನ್ನ ರಾಯಭಾರ ಕಚೇರಿ, ದೂತಾವಾಸಗಳು ಮತ್ತು ರಾಜತಾಂತ್ರಿಕರನ್ನು ಭದ್ರತೆಗಾಗಿ ಭಾರತವು 300 ಕ್ಕೂ ಹೆಚ್ಚು ITBP ಕಮಾಂಡೋಗಳನ್ನು ನಿಯೋಜಿಸಿತ್ತು. ನವೆಂಬರ್, 2002 ರಲ್ಲಿ ಕಾಬೂಲ್ ರಾಯಭಾರ ಕಚೇರಿ ಮತ್ತು ಅದರ ನಿವಾಸಿಗಳ ಭದ್ರತೆಗಾಗಿ ಇದನ್ನು ಮೊದಲು  ನಿಯೋಜಿಸಲಾಯಿತು. ನಂತರ ತನ್ನ ಹೆಚ್ಚುವರಿ ತುಕಡಿಗಳನ್ನು ಜಲಾಲಾಬಾದ್, ಕಂದಹಾರ್, ಮಜರ್-ಇ-ಷರೀಫ್ ಮತ್ತು ಹೆರಾತ್‌ನಲ್ಲಿರುವ ಭಾರತೀಯ ದೂತಾವಾಸಗಳಿಗೆ ಕರ್ತವ್ಯಕ್ಕೆ ನಿಯೋಜಿಸಲಾಯಿತು.

ದೇಶದಲ್ಲಿನ ಪ್ರಸ್ತುತ ಬಿಕ್ಕಟ್ಟಿನಿಂದಾಗಿ ಮತ್ತು ಕರೋನವೈರಸ್ ಸಾಂಕ್ರಾಮಿಕವು ಪ್ರಪಂಚವನ್ನು ಆವರಿಸಿರುವ ಕಾರಣದಿಂದಾಗಿ ಅಮೆರಿಕ ಸೇರಿದಂತೆ ಆಫ್ಘನ್ ನಲ್ಲಿ ಸೇನೆ ನಿಯೋಜಿಸಿದ್ದ ದೇಶಗಳು ಅವುಗಳ ನಿರ್ವಹಣೆ ಮಾಡಲಾಗದೇ ತಮ್ಮ ಸೇನಾಪಡೆಗಳನ್ನು ಹಿಂದಕ್ಕೆ ಕರೆಸಿಕೊಂಡಿವೆ. ಅಲ್ಲದೆ ರಾಯಭಾರ  ಕಚೇರಿಗಳನ್ನು ಮುಚ್ಚಿದ ಕಾರಣ ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿಗಳಿಗೆ ಕೆಲಸವಿಲ್ಲದಂತಾಗಿ ಮತ್ತು ತಾಲಿಬಾನ್ ದಾಳಿ ಭೀತಿಯಿಂದಾಗಿ ಅವರೂ ಕೂಡ ತಮ್ಮ ತಮ್ಮ ದೇಶಕ್ಕೆ ಹಿಂದಿರುಗುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com