ಅಲೆಕ್ಸಾಗಾಗಿ ಅಮಿತಾಭ್ ದನಿಯನ್ನು ಖರೀದಿಸಿದ ಅಮೇಜಾನ್

ತಮ್ಮ ದನಿ ನಕಲು ಮಾಡುವವರ ವಿರುದ್ಧ ಕಿಡಿಕಾರಿ ತಮ್ಮ ದನಿಗೆ ಕಾಪಿರೈಟ್ ಪಡೆಯಲು ಮುಂದಾಗಿದ್ದ ಅಮಿತಾಭ್ ಇದೀಗ ತಮ್ಮ ದನಿಯನ್ನು ಅಮೇಜಾನ್ ನ ವಾಯ್ಸ್ ಅಸಿಸ್ಟೆಂಟ್ ಉಪಕರಣ ಅಲೆಕ್ಸಾಗೆ ಎರವಲು ನೀಡಿದ್ದಾರೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ನವದೆಹಲಿ: ವಾಯ್ಸ್ ಅಸಿಸ್ಟೆಂಟ್ ಎಂದೇ ಹೆಸರಾಗಿರುವ ದನಿಯಾಧಾರಿತ ವಿದ್ಯುನ್ಮಾನ ಉಪಕರಣ ಅಮೇಜಾನ್ ಸಂಸ್ಥೆಯ 'ಅಲೆಕ್ಸಾ' ಇನ್ನು ಮುಂದೆ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ದನಿಯಲ್ಲಿ ಮಾತನಾಡಲಿದೆ. ಕೆಲ ಸಮಯದ ಹಿಂದೆ ಅವರು ತಮ್ಮ ದನಿಗೆ ಕಾಪಿ ರೈಟ್ ಪಡೆಯಲು ಮುಂದಾಗಿದ್ದರು. ಉದ್ಯಮದಲ್ಲಿ ಅವರ ಅನುಮತಿ ಪಡೆಯದೆಯೇ ಮಿಮಿಕ್ರಿ ಕಲಾವಿದರಿಂದ ಅವರ ದನಿಯನ್ನು ನಕಲು ಮಾಡಿ ಜಾಹೀರಾತುಗಳನ್ನು ತಯಾರಿಸಲಾಗಿತ್ತು. ಆಗ ಅದರ ವಿರುದ್ಧ ಅಮಿತಾಭ್ ಕಿಡಿ ಕಾರಿ ತಮ್ಮ ದನಿಗೆ ಕಾಪಿ ರೈಟ್ ಪಡೆಯಲು ಮುಂದಾಗಿದ್ದರು. ಇದೀಗ ಅವರ ದನಿಯನ್ನು ತಮ್ಮ ಅಲೆಕ್ಸಾ ಉಪಕರಣಕ್ಕಾಗಿ ಅಮೇಜಾನ್ ಖರೀದಿಸಿದೆ.  

ಇಷ್ಟು ದಿನ ಅಲೆಕ್ಸಾ ಉಪಕರಣವನ್ನು ಚಾಲೂ ಮಾಡಲು ಬಳಕೆದಾರರು 'ಅಲೆಕ್ಸಾ' ಎಂದು ಕರೆಯಬೇಕಾಗಿತ್ತು. ಹಾಗೆ ಕರೆದಾಕ್ಷಣ ಉಪಕರಣ ಆನ್ ಆಗಿಬಿಡುತ್ತಿತ್ತು. ಇನ್ನುಮುಂದೆ ಭಾರತ್ಯ ಬಳಕೆದಾರರು 'ಅಮಿತ್ ಜೀ' ಎಂಉ ಕರೆದರೆ ಸಾಕು, ಅಲೆಕ್ಸಾ ಉಪಕರಣ ಆನ್ ಆಗುತ್ತದೆ. 

ಅಮೇಜಾನ್ ಸಂಸ್ಥೆ ಇದೇ ಮೊದಲ ಬಾರಿಗೆ ಅಮೆರಿಕದಿಂದಾಚೆಗೆ ಮೊದಲ ಸೆಲಬ್ರಿಟಿ ದನಿಯನ್ನು ತನ್ನ ಅಲೆಕ್ಸಾ ಉಪಕರಣಕ್ಕೆ ಅಳವಡಿಸಿದೆ. ಈ ಹಿಂದೆ ಹಾಲಿವುಡ್ ನ ಖ್ಯಾತ ಹಿರಿಯ ನಟ ಸ್ಯಾಮುಯೆಲ್ ಜಾಕ್ಸನ್ ಸೇರಿದಂತೆ ಮೂವರು ಖ್ಯಾತನಾಮರ ದನಿಯನ್ನು ಅಲೆಕ್ಸಾಗೆ ಅಳವಡಿಸಿತ್ತು. ಇದೇ ಮೊದಲ ಬಾರಿಗೆ ಹಾಲಿವುಡ್ ಹೊರತು ಪಡಿಸಿ ಅಮಿತಾಭ್ ಬಚ್ಚನ್ ಗೆ ಮಣೆ ಹಾಕಲಾಗಿದೆ. ಆ ಮೂಲಕ ಭಾರತದಲ್ಲಿ ಅಲೆಕ್ಸಾ ಉಪಕರಣದ ಮಾರಾಟ ಹೆಚ್ಚಿಸುವ ಉದ್ದೇಶವನ್ನು ಸಂಸ್ಥೆ ಹೊಂದಿದೆ.

ಬಲಕೆದಾರರೊಂದಿಗೆ ಸಂವಹನ ನಡೆಸುವ ಅಲೆಕ್ಸಾ ಉಪಕರಣಕ್ಕೆ ಅಮಿತಾಭ್ವರ ದನಿಯನ್ನು ಅಳವಡಿಸುವಲ್ಲಿ ಹಲವು ಸವಾಲುಗಳು ಎದುರಾಗಿದ್ದವು. ಭಾರತ, ಅಮೆರಿಕ, ಪೊಲೆಂಡ್ ಮತ್ತು ಬ್ರಿಟನ್ ದೇಶಗಳ ಅಮೇಜಾನ್ ತಂತ್ರಜ್ನರು ಈ ಕಾರ್ಯಕ್ರಮದ ಹಿಂದೆ ಕೆಲಸ ಮಾಡಿದ್ದಾರೆ. ಅದಕ್ಕೂ ಮುನ್ನ ಅಮಿತಾಭ್ ಅವರ ದನಿಯನ್ನು ಸ್ಥೂಲವಾಗಿ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಬಳಕೆದಾರರಿಗೆ ಅನುಮಾನಕ್ಕೆಡೆಮಾಡದಂತೆ ಅಲೆಕ್ಸಾ ಉಪಕರಣ ಅಮಿತಾಭ್ ಅವರ ದನಿಯನ್ನು ಅನುಕರಿಸಿ ಮಾತನಾಡುತ್ತದೆ ಎಂದು ಸಂಸ್ಥೆ ತಿಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com