ಆದಾಯ ತೆರಿಗೆ ಪೋರ್ಟಲ್ ಸಮಸ್ಯೆ: ಇನ್ಫೋಸಿಸ್ ಸಿಇಒ- ನಿರ್ಮಲಾ ಸೀತಾರಾಮನ್ ಭೇಟಿ
ನವದೆಹಲಿ: ಆದಾಯ ತೆರಿಗೆ ಸಲ್ಲಿಸಲು ಹೊಸದಾಗಿ ಪ್ರಾರಂಭಿಸಲಾಗಿರುವ ಪೋರ್ಟಲ್ ನಲ್ಲಿ ತಾಂತ್ರಿಕ ಸಮಸ್ಯೆಗಳು ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಪೋರ್ಟಲ್ ಅಭಿವೃದ್ಧಿಪಡಿಸಿರುವ ಇನ್ಫೋಸಿಸ್ ಸಂಸ್ಥೆಯ ಸಿಇಒ ಸಲಿಲ್ ಪರೇಖ್ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಈ ವೇಳೆ ತಾಂತ್ರಿಕ ಸಮಸ್ಯೆಗಳು ಇನ್ನೂ ಬಗೆಹರಿಯದೇ ಇರುವುದರ ಬಗ್ಗೆ ನಿರ್ಮಲಾ ಸೀತಾರಾಮನ್ ಕಳವಳ ವ್ಯಕ್ತಪಡಿಸಿದ್ದಾರೆ.
ತಮ್ಮ ಕಚೇರಿಯಲ್ಲಿ ಇನ್ಫೋಸಿಸ್ ಸಿಇಒನ್ನು ಭೇಟಿ ಮಾಡಿದ ಸಚಿವರು ಹೊಸ ವೆಬ್ ಸೈಟ್ ಸಕ್ರಿಯಗೊಂಡು 2 ತಿಂಗಳು ಕಳೆದರೂ ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸದೇ ಇರುವುದಕ್ಕೆ ಕಾರಣ ಕೇಳಿದ್ದಾರೆ.
ಸಚಿವರ ಭೇಟಿ ವೇಳೆ ಪರೇಖ್ ಹಾಗೂ ಅವರ ತಂಡದ ಸದಸ್ಯರು ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಮಾರ್ಗಗಳನ್ನು ಸಚಿವರಿಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ. ಭಾನುವಾರದಂದು ಇದೇ ವಿಷಯವಾಗಿ ಟ್ವೀಟ್ ಮಾಡಿದ್ದ ಆದಾಯ ತೆರಿಗೆ ಇಲಾಖೆ "ಸಮಸ್ಯೆಗಳ ಬಗ್ಗೆ ವಿವರಣೆ ನೀಡುವುದಕ್ಕೆ ಪರೇಖ್ ಅವರಿಗೆ ಸಮನ್ಸ್ ನೀಡಲಾಗಿದೆ" ಎಂದು ತಿಳಿಸಿತ್ತು.
ಜೂ.7 ರಂದು ಲೈವ್ ಆಗಿದ್ದ ವೆಬ್ ಸೈಟ್ ಆ.21-22 ರ ಸಂಜೆ ವರೆಗೂ ಬಳಕೆಗೆ ಲಭ್ಯವಿರಲಿಲ್ಲ. ತುರ್ತು ಮೇಂಟೆನೆನ್ಸ್ ಕಾರಣದಿಂದ ಈ ದಿನಗಳಲ್ಲಿ ಪೋರ್ಟಲ್ ಅಲಭ್ಯವಾಗಿತ್ತು ಎಂದು ಇನ್ಫೋಸಿಸ್ ಕಾರಣ ನೀಡಿತ್ತು. ಪೋರ್ಟಲ್ ನ ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಿರ್ಮಲಾ ಸೀತಾರಾಮನ್ ಇದು ಎರಡನೇ ಬಾರಿಗೆ ಇನ್ಫೋಸಿಸ್ ತಂಡವನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ.
ಇದಕ್ಕೂ ಮುನ್ನ ಜೂ.22 ರಂದು ಇದೇ ವಿಷಯವಾಗಿ ಸಿಒಒ ಪ್ರವೀಣ್ ರಾವ್ ಹಾಗೂ ಪರೇಖ್ ಅವರೊಂದಿಗೆ ನಿರ್ಮಲಾ ಸೀತಾರಾಮನ್ ಚರ್ಚಿಸಿದ್ದರು.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡುವುದಕ್ಕಾಗಿ 2019 ರಲ್ಲಿ ಇನ್ಫೋಸಿಸ್ ಗುತ್ತಿಗೆಯನ್ನು ಪಡೆದಿತ್ತು. ರಿಟರ್ನ್ಸ್ ನ ಪ್ರಕ್ರಿಯೆಯನ್ನು 63 ದಿನಗಳಿಂದ ಒಂದೇ ದಿನಕ್ಕೆ ಇಳಿಕೆ ಮಾಡಿ ಮರುಪಾವಾತಿಯನ್ನು ತ್ವರಿತಗೊಳಿಸುವುದಕ್ಕೆ ಸೂಕ್ತವಾಗುವ ರೀತಿಯ ವ್ಯವಸ್ಥೆ ಕಲ್ಪಿಸುವುದು ಪೋರ್ಟಲ್ ನ ಉದ್ದೇಶವಾಗಿತ್ತು.