'ಹೆಣ್ಮಕ್ಳೇ ಸ್ಟ್ರಾಂಗ್ ಗುರು': ರಾಜಕೀಯ ಪಕ್ಷಗಳು ಮಹಿಳಾ ಮತದಾರರನ್ನು ಓಲೈಸುತ್ತಿರುವುದೇಕೆ?

ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳು ಹಲವು ಕಸರತ್ತುಗಳನ್ನು ಮಾಡುವುದು ಸಾಮಾನ್ಯ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮುಂದಿನ ವರ್ಷದ ಆರಂಭದಲ್ಲಿ ಉತ್ತರ ಪ್ರದೇಶ, ಪಂಜಾಬ್, ಉತ್ತರಾಖಂಡ, ಗೋವಾ ಮತ್ತು ಮಣಿಪುರ ರಾಜ್ಯಗಳಲ್ಲಿ ಚುನಾವಣೆ ನಡೆಯಲಿದೆ. ಈ ಸಂದರ್ಭದಲ್ಲಿ ಮತದಾರರ ಮನವೊಲಿಸಲು ರಾಜಕೀಯ ಪಕ್ಷಗಳು ಹಲವು ಕಸರತ್ತುಗಳನ್ನು ಮಾಡುವುದು ಸಾಮಾನ್ಯ.

ಇತ್ತೀಚೆಗೆ ರಾಜಕೀಯ ಪಕ್ಷಗಳು ಮಹಿಳಾ ಮತದಾರರನ್ನು ಗುರಿಯಾಗಿಟ್ಟುಕೊಂಡು ಚುನಾವಣೆ ವೇಳೆ ಹಲವು ಘೋಷಣೆಗಳನ್ನು ಮಾಡುವುದನ್ನು ನೋಡುತ್ತೇವೆ. ಮಹಿಳಾ ಅಭ್ಯರ್ಥಿಗಳಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷಗಳು ಟಿಕೆಟ್ ಗಳನ್ನು ಹೆಚ್ಚೆಚ್ಚು ನೀಡುತ್ತಿವೆ. ಅದೇ ರೀತಿ ಈ ಬಾರಿ ಪಕ್ಷಗಳು ವಿಶೇಷವಾಗಿ ಮಹಿಳಾ ಮತದಾರರನ್ನು ಗಮನದಲ್ಲಿಟ್ಟುಕೊಂಡಿರುವುದು ಈ 5 ರಾಜ್ಯಗಳಲ್ಲಿ ವಿಶೇಷವಾಗಿ ಕಾಣುತ್ತಿದೆ.

ಉತ್ತರ ಪ್ರದೇಶ: ರಾಜ್ಯದಲ್ಲಿ ಮುಂದಿನ ವರ್ಷ ಆರಂಭದಲ್ಲಿ ನಡೆಯಲಿರುವ ಚುನಾವಣೆಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಟೊಂಕಕಟ್ಟಿ ಓಡಾಡುತ್ತಿದ್ದಾರೆ. ಈಗಾಗಲೇ ಕಾಂಗ್ರೆಸ್ ಮಹಿಳಾ ಮತದಾರರಿಗೆ ಹಲವು ಘೋಷಣೆಗಳನ್ನು ಮಾಡಿದೆ. ಮಹಿಳಾ ಅಭ್ಯರ್ಥಿಗಳಿಗೆ ಹೆಚ್ಚು ಸ್ಪರ್ಧೆಗೆ ಅವಕಾಶ ನೀಡುವುದಾಗಿ ಅಂದರೆ ಶೇಕಡಾ 40ರಷ್ಟು ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದಾಗಿ ಘೋಷಿಸಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸರ್ಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಆಮಿಷವನ್ನು ಕೂಡ ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ನೀಡಿದೆ. 

ಪಂಜಾಬ್: ಇನ್ನು ಪಂಜಾಬ್ ನಲ್ಲಿ ಅಧಿಕಾರ ಪಡೆಯುವ ಪ್ರಯತ್ನದಲ್ಲಿರುವ ಆಪ್ ರಾಷ್ಟ್ರೀಯ ಸಂಚಾಲಯ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, 18 ವರ್ಷಕ್ಕಿಂತ ಮೇಲಿನ ಮಹಿಳೆಯರಿಗೆ ಅಧಿಕಾರಕ್ಕೆ ಬಂದರೆ ಸಾವಿರ ರೂಪಾಯಿ ಅನುದಾನ, ಉಚಿತ ಬಸ್ ಪ್ರಯಾಣ, ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇಕಡಾ 33ರಷ್ಟು ಮೀಸಲಾತಿ, ದುರ್ಬಲ ವರ್ಗದ ಕುಟುಂಬಗಳ ಹೆಣ್ಣುಮಕ್ಕಳ ವಿವಾಹಕ್ಕೆ ಸರ್ಕಾರದಿಂದ ಆರ್ಥಿಕ ಸಹಾಯದ ಭರವಸೆ ನೀಡಿದೆ.

ಉತ್ತರಾಖಂಡ: ಕೇಂದ್ರ ಗೃಹ ಸಚಿವ ಅಮಿತ್ ಶಾ ಇತ್ತೀಚೆಗೆ ಸಿಎಂ ಗಶಿಯಾರಿ ಯೋಜನೆ ಉದ್ಘಾಟಿಸಿದ್ದು, ಅದರಡಿ ಮಹಿಳೆಯರಿಗೆ ಜಾನುವಾರುಗಳ ಮೇವಿಗೆ ಸರ್ಕಾರ ಕಿಟ್ ಒದಗಿಸಲಿದೆ. ಉತ್ತರಾಖಂಡದಲ್ಲಿ ಮಹಿಳೆಯರು ಜಾನುವಾರು ಮೇವಿಗೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದರು. 

ಮಹಿಳೆಯರಿಗೆ ಹೆಚ್ಚಿನ ಅಧಿಕಾರ: ಬಹುದೊಡ್ಡ ರಾಜ್ಯ ಉತ್ತರ ಪ್ರದೇಶ ರಾಜಕೀಯವಾಗಿ ಬಹಳ ಮುಖ್ಯವಾದ ರಾಜ್ಯ. ಇಲ್ಲಿ ಇತ್ತೀಚೆಗೆ ಮಹಿಳೆಯರು ಚುನಾವಣಾ ಫಲಿತಾಂಶದ ನಿರ್ಣಾಯಕ ಅಂಶವಾಗಿದ್ದಾರೆ. ಚುನಾವಣಾ ಆಯೋಗದ ಅಂಕಿಅಂಶ ಪ್ರಕಾರ, ಕಳೆದ ಮೂರು ಸಲದ ವಿಧಾನ ಸಭೆ ಫಲಿತಾಂಶಗಳನ್ನು ನೋಡಿದರೆ, ಮಹಿಳಾ ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವ ಪ್ರಮಾಣ ಕೂಡ ಶೇಕಡಾ 21ರಷ್ಟು ಹೆಚ್ಚಾಗಿದೆ. 

ಮಹಿಳಾ ಮತದಾರರು ಸಕ್ರಿಯರಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಅವರನ್ನು ನೋಡುವ ರೀತಿ ಕೂಡ ಬದಲಾಗುತ್ತಿದೆ. ಮಹಿಳೆಯರು ಅಧಿಕಾರದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿದ್ದಾರೆ ಎಂದು ರಾಜಕೀಯ ವಿಶ್ಲೇಷಕ ಜೆ ಪಿ ಶುಕ್ಲ ಹೇಳುತ್ತಾರೆ. 
ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರದ ಮುಂದೆ ತರಲು, ಗಮನ ಸೆಳೆಯಲು ಮಹಿಳೆಯರು ಮುಂದೆ ಬರುತ್ತಿರುವುದೇ ಈ ಬದಲಾವಣೆಗೆ ಕಾರಣ ಎಂದು ಪಂಜಾಬ್ ನ ರಾಜಕೀಯ ವಿಶ್ಲೇಷಕ ಪ್ರೊ ಆಶುತೋಷ್ ಹೇಳುತ್ತಾರೆ. 
ಇನ್ನು ಆಪ್ ಪಕ್ಷ ಗೋವಾದಲ್ಲಿ ಕೂಡ ಅಧಿಕಾರ ಪಡೆಯಲು ಹವಣಿಸುತ್ತಿದ್ದು ಮಹಿಳಾ ಮತದಾರರನ್ನು ಓಲೈಸುವ ಭರವಸೆಗಳನ್ನು ನೀಡುವ ಸಾಧ್ಯತೆಯಿದೆ. 

ಉತ್ತರಾಖಂಡದಲ್ಲಿ ಹೇಗೆ? ಪರ್ವತ ರಾಜ್ಯ ಉತ್ತರಾಖಂಡದಲ್ಲಿ ಪುರುಷ ಮತ್ತು ಮಹಿಳಾ ಮತದಾರರ ನಡುವಿನ ವ್ಯತ್ಯಾಸ 2007ರಲ್ಲಿ ಶೇಕಡಾ 0.5ರಷ್ಟಿದ್ದಿದ್ದು, ಈಗ ಶೇಕಡಾ 7.06ಕ್ಕೆ ಏರಿಕೆಯಾಗಿದೆ. ಮಹಿಳಾ ಮುಂಚೂಣಿ ಚಳವಳಿಗಳಿಗೆ ಉತ್ತರಾಖಂಡ ಹೆಸರುವಾಸಿ. ಇದುವೇ ಇತ್ತೀಚೆಗೆ ಮಹಿಳಾ ಮತದಾರರು ನಿರ್ಣಾಯಕ ಅಂಶವಾಗಲು ಕಾರಣವಾಗಿರಬಹುದು ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತೆ ತನುಜಾ ಜೋಷಿ. 

ಮಣಿಪುರದಲ್ಲಿ ಪುರುಷರಿಗಿಂತ ಮಹಿಳಾ ಮತದಾರರು ಹೆಚ್ಚು. ಹೀಗಾಗಿ ಇಲ್ಲಿ ಮಹಿಳಾ ಮತದಾರರನ್ನು ಓಲೈಸಲು ರಾಜಕೀಯ ಪಕ್ಷಗಳ ಪೈಪೋಟಿ ಕಾಣುತ್ತಿಲ್ಲವಿರಬಹುದು. ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಬಂದು ಮತ ಚಲಾಯಿಸುತ್ತಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರ ಪ್ರೌಢಿಮೆಯನ್ನು ತೋರಿಸುತ್ತದೆ ಎಂದು ಅಡ್ವೊಕೇಟ್ ನಿಂಗೊಂಬಮ್ ಬೂಪೇಂದ ಮೈಟಿ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com