ನವದೆಹಲಿ: ಕೊರೋನಾ ವೈರಸ್‌ನ ಹೊಸ ರೂಪಾಂತಿ ಓಮಿಕ್ರಾನ್ ಆತಂಕದ ನಡುವೆ ಆರೋಗ್ಯ ಸಿಬ್ಬಂದಿ, ಮುಂಚೂಣಿ ಕಾರ್ಯಕರ್ತರಿಗೆ ಮತ್ತು ರೋಗ ನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಕೋವಿಡ್ ಲಸಿಕೆಯ "ಹೆಚ್ಚುವರಿ" ಡೋಸ್‌ಗಳನ್ನು ಘೋಷಿಸುವಂತೆ ಭಾರತೀಯ ವೈದ್ಯಕೀಯ ಸಂಘ(ಐಎಂಎ) ಸೋಮವಾರ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಮಧ್ಯೆ ಭಾರತದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 21ಕ್ಕೆ ಏರಿಯಾಗಿದೆ.
12 ರಿಂದ 18 ವರ್ಷ ವಯಸ್ಸಿನವರಿಗೆ ಕೋವಿಡ್ ಲಸಿಕೆ ಹಾಕುವ ಪ್ರಸ್ತಾವನೆಯನ್ನು ಸರ್ಕಾರ ತ್ವರಿತಗೊಳಿಸಬೇಕು ಎಂದು ಒತ್ತಾಯಿಸಿರುವ ಐಎಂಎ, ಕೊರೋನಾ ವೈರಸ್‌ನ ಇತ್ತೀಚಿನ ರೂಪಾಂತರಿ ಪ್ರಕರಣಗಳು ಭಾರತದ ಹಲವಾರು ಪ್ರಮುಖ ರಾಜ್ಯಗಳಿಂದ ವರದಿಯಾಗಿವೆ ಮತ್ತು ಅವುಗಳ ಸಂಖ್ಯೆಯು ಹೆಚ್ಚಾಗಲಿದೆ ಎಂದು ವೈದ್ಯರ ಸಂಘ ಹೇಳಿದೆ.
ಲಭ್ಯವಿರುವ ವೈಜ್ಞಾನಿಕ ಪುರಾವೆಗಳು ಮತ್ತು ಹೊಸ ರೂಪಾಂತರಿ ಪತ್ತೆಯಾಗಿರುವ ದೇಶದ ಅನುಭವದ ಪ್ರಕಾರ, ಓಮಿಕ್ರಾನ್ ಹೆಚ್ಚಿನ ಪ್ರಮಾಣದಲ್ಲಿ ಹರಡುತ್ತದೆ ಮತ್ತು ಹೆಚ್ಚಿನ ಜನರ ಮೇಲೆ ಪರಿಣಾಮ ಬೀರುತ್ತದೆ ಎಂದು ಐಎಂಎ ಹೇಳಿದೆ.
Advertisement