ನಾಗಾಲ್ಯಾಂಡ್: ಮೊದಲು ನ್ಯಾಯ ಸಿಗಲಿ ಆ ನಂತರ ಪರಿಹಾರ ಸ್ವೀಕರಿಸುತ್ತೇವೆ; ಸೇನೆಯಿಂದ ಹತರಾದವರ ಕುಟುಂಬಗಳ ಒತ್ತಾಯ
ಗುವಾಹಟಿ: ನಾಗಾಲ್ಯಾಂಡ್ ನಲ್ಲಿ ಸೇನೆಯಿಂದ ಹತ್ಯೆಗೀಡಾದ ವ್ಯಕ್ತಿಗಳ ಕುಟುಂಬ ಸದಸ್ಯರು ಸರ್ಕಾರ ನೀಡಲು ಮುಂದಾಗಿರುವ ಪರಿಹಾರ ಹಣವನ್ನು ನಿರಾಕರಿಸಿದ್ದಾರೆ.
"ನಮ್ಮ ಕುಟುಂಬ ಸದಸ್ಯರ ಸಾವಿಗೆ ಕಾರಣರಾದ 21 ಪ್ಯಾರಾ ಕಮಾಂಡೋಗಳನ್ನು ಶಿಕ್ಷಿಸಿ, ಈಶಾನ್ಯ ರಾಜ್ಯಗಳಲ್ಲಿ ಸೇನಾ ಪಡೆಗಳಿಗೆ ನೀಡಲಾಗಿರುವ ವಿಶೇಷ ಅಧಿಕಾರವನ್ನು ಹಿಂಪಡೆಯುವವರೆಗೂ ಪರಿಹಾರವನ್ನು ಸ್ವೀಕರಿಸುವುದಿಲ್ಲ" ಎಂದು ಕುಟುಂಬ ಸದಸ್ಯರು ಹೇಳಿದ್ದಾರೆ.
ನಾಗಾಲ್ಯಾಂಡ್ ನ ಸಿಎಂ ರಾಜ್ಯ ಸರ್ಕಾರದಿಂದ, ಮೃತರ ಕುಟುಂಬ ಸದಸ್ಯರಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದರು. ಕೇಂದ್ರ ಸರ್ಕಾರ ಸಂತ್ರಸ್ತರ ಕುಟುಂಬಕ್ಕೆ ತಲಾ 11 ಲಕ್ಷ ರೂಪಾಯಿ ಹಾಗೂ ಉದ್ಯೋಗವನ್ನು ನೀಡುವ ಘೋಷಣೆ ಮಾಡಿತ್ತು.
ಒಟಿಂಗ್ ಗ್ರಾಮ ಪರಿಷತ್ ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿದ್ದು, ಡಿ. 5 ರಂದು ಗ್ರಾಮದ ಜನತೆ ಕುಟುಂಬ ಸದಸ್ಯರ ಮರಣೋತ್ತರ ಪರೀಕ್ಷೆ, ಅಂತ್ಯಕ್ರಿಯೆಯ ಸಂಕಷ್ಟದ ಸ್ಥಿತಿಯನ್ನು ಎದುರಿಸುತ್ತಿದ್ದಾಗ ಸಚಿವ ಹಾಗೂ ಜಿಲ್ಲಾಧಿಕಾರಿಗಳು 18.30 ಲಕ್ಷ ರೂಪಾಯಿಗಳನ್ನು ನೀಡಲು ಮುಂದಾಗಿದ್ದರು. ಅದನ್ನು ಅವರು ಸಾವನ್ನಪ್ಪಿರುವವರ ಕುಟುಂಬ ಸದಸ್ಯರಿಗೆ ಮುಂಗಡವಾಗಿ ಅಥವಾ ಕಂತಿನಲ್ಲಿ ನೀಡುತ್ತಿದ್ದ ಹಣ ಎಂಬುದು ನಮಗೆ ಬಳಿಕ ತಿಳಿಯಿತು ಎಂದು ಗ್ರಾಮ ಪರಿಷತ್ ಅಸಮಾಧಾನ ವ್ಯಕ್ತಪಡಿಸಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ