ಅಯೋಧ್ಯೆಯಲ್ಲಿ ಬಿಜೆಪಿ ನಾಯಕರ ಸಂಬಂಧಿಕರಿಂದಲೇ ಭೂಕಬಳಿಕೆ: ಯೋಗಿ ಸರ್ಕಾರ ತನಿಖೆಗೆ ಆದೇಶ
ಲಕ್ನೋ: ಅಯೋಧ್ಯೆಯಲ್ಲಿ ನಿರ್ಮಿತವಾಗುತ್ತಿರುವ ರಾಮ ಮಂದಿರದ ಬಳಿ ಬಿಜೆಪಿ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ಸಂಬಂಧಿಕರು ಭೂಮಿಯನ್ನು ಕಬಳಿಸಿದ್ದಾರೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ತನಿಖೆಗೆ ಆದೇಶ ಹೊರಡಿಸಿದೆ.
ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟಿಸಿದ ನಂತರ, ರಾಮ ಮಂದಿರ ನಿರ್ಮಾಣ ಕುರಿತು ಇದ್ದ ವಿವಾದಕ್ಕೆ ತೆರೆಬಿದ್ದ ನಂತರ ಶಾಸಕರು, ಮೇಯರ್ ಗಳು, ಆಯುಕ್ತರ ಸಂಬಂಧಿಕರು, ಎಸ್‍ಡಿಎಂ ಮತ್ತು ಡಿಐಜಿ ಅಯೋಧ್ಯೆಯಲ್ಲಿ ಭೂಮಿ ಖರೀದಿಸಿದ್ದಾರೆ ಎಂದು ವದಂತಿ ಹರಡಿತ್ತು.
ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಈ ವಿಷಯವನ್ನು ಕೂಲಂಕುಷವಾಗಿ ತನಿಖೆ ನಡೆಸುವಂತೆ ಕಂದಾಯ ಇಲಾಖೆಗೆ ಆದೇಶಿಸಿದ್ದಾರೆ ಎಂದು ಉತ್ತರಪ್ರದೇಶದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನವನೀತ್ ಸೆಹಗಲ್ ಮಾಹಿತಿ ನೀಡಿದರು.
‘ಧರ್ಮದ ನೆಪದಲ್ಲಿ ಹಿಂದುತ್ವ ದರೋಡೆ ನಡೆಸುತ್ತಿದೆ’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಸತ್ಯದ ಮಾರ್ಗವನ್ನು ಅನುಸರಿಸುತ್ತದೆ. ಹಿಂದುತ್ವವು ಧರ್ಮದ ಸೋಗಿನಲ್ಲಿ ದರೋಡೆ ಮಾಡುತ್ತದೆ” ಎಂದು ಅವರು ಹಿಂದಿಯಲ್ಲಿ ಟ್ವೀಟ್ ಮಾಡಿ ಸುದ್ದಿಯ ವರದಿಯನ್ನು ಟ್ಯಾಗ್ ಮಾಡಿದ್ದಾರೆ.
ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಬುಧವಾರ ಸದನದಲ್ಲಿ ಇದೇ ವಿಷಯ ಪ್ರಸ್ತಾಪಿಸಲು ಪ್ರಯತ್ನಿಸಿದರು. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಇದನ್ನು “ಭೂ ಹಗರಣ” ಎಂದು ಕರೆದಿದ್ದರು, ಬಿಜೆಪಿಗೆ ಸಂಪರ್ಕ ಹೊಂದಿದ ಜನರು ಅಯೋಧ್ಯೆ ನಗರದೊಳಗೆ ಭೂಮಿಯನ್ನು ಬಹಿರಂಗವಾಗಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಗೌರವಾನ್ವಿತ ಮೋದಿಜಿ, ಈ ಬಹಿರಂಗ ಲೂಟಿಯ ಬಗ್ಗೆ ನೀವು ಯಾವಾಗ ಮಾತನಾಡುತ್ತೀರಾ? ಕಾಂಗ್ರೆಸ್ ಪಕ್ಷ, ದೇಶದ ಜನರು ಮತ್ತು ರಾಮಭಕ್ತರು ಈ ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಇದು ದೇಶದ್ರೋಹವಲ್ಲವೇ? ಇದು ದೇಶದ್ರೋಹಕ್ಕಿಂತ ಕಡಿಮೆಯೇ? ಬಿಜೆಪಿ ಈಗ ಅಯೋಧ್ಯೆಯಲ್ಲಿ ‘ಅಂಧೇರ್ ನಗರ್, ಚೌಪತ್ ರಾಜಾ’ದ ವ್ಯವಹಾರ ನಡೆಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ