ಜಮ್ಮು: ಕಣಿವೆ ಪ್ರದೇಶದಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಗುಂಡಿನ ಸಪ್ಪಳ ಕೇಳಿಬಂದಿದೆ. ದಾಳಿಯಲ್ಲಿ ಓರ್ವ ಯೋಧರು ಹುತಾತ್ಮರಾಗಿದ್ದು, ಮೂವರು ಎಲ್ ಇಟಿ ಉಗ್ರರು ಹತರಾಗಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮ ಜಿಲ್ಲೆಯ ಹಂಜಿನ್ ರಾಜ್ ಪೊರಾ ಪ್ರದೇಶದಲ್ಲಿ ಭದ್ರತಾ ಪಡೆ ಯೋಧರು ಮತ್ತು ಎಲ್ ಇಟಿ ಉಗ್ರಗಾಮಿಗಳ ನಡುವೆ ಗುಂಡಿನ ಚಕಮಕಿ ನಡೆದು ಯೋಧರೊಬ್ಬರು ಹುತಾತ್ಮಗೊಂಡಿದ್ದಾರೆ ಎಂದು ಕಾಶ್ಮೀರ ವಲಯ ಪೊಲೀಸರು ತಿಳಿಸಿದ್ದಾರೆ.
ಉಗ್ರರ ಇರುವಿಕೆ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ಪ್ರದೇಶವನ್ನು ಸುತ್ತುವರಿದು ಶೋಧ ಕಾರ್ಯ ನಡೆಸಲು ಆರಂಭಿಸಿದರು. ಈ ವೇಳೆ ಉಗ್ರರು ಏಕಾಏಕಿ ಗುಂಡಿನ ಮಳೆಗೈಯಲು ಆರಂಭಿಸಿದರು. ಪೊಲೀಸರು ಮತ್ತು ಸೇನಾಪಡೆ ಜಂಟಿಯಾಗಿ ಇಂದು ಬೆಳಗ್ಗೆ ಕಾರ್ಯಾಚರಣೆ ಆರಂಭಿಸಿತು.
ಉಗ್ರರ ಇರುವಿಕೆ ಬಗ್ಗೆ ಖಚಿತವಾಗಿ ಮಾಹಿತಿ ಪಡೆದ ಪೊಲೀಸರು ಉಗ್ರರನ್ನು ಶರಣಾಗುವಂತೆ ಕೇಳಿಕೊಂಡರೂ ಒಪ್ಪದೆ ದಾಳಿ ನಡೆಸಿದಾಗ ಎನ್ ಕೌಂಟರ್ ಏರ್ಪಟ್ಟಿತು. ದಾಳಿಯಲ್ಲಿ ಮೂವರು ಉಗ್ರರ ಹತ್ಯೆಯಾಗಿದೆ ಎಂದು ಕಾಶ್ಮೀರ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ. ಇನ್ನೂ ಆ ಪ್ರದೇಶದಲ್ಲಿ ಎನ್ ಕೌಂಟರ್ ಮುಂದುವರಿದಿದೆ.
Advertisement