ಸಂಪುಟ ವಿಸ್ತರಣೆಗೆ ಮುನ್ನ ಪ್ರಧಾನಿ ಅಧಿಕೃತ ನಿವಾಸ ಬಳಿ ಬಿರುಸಿನ ಚಟುವಟಿಕೆ: ಶೋಭಾ ಕರಂದ್ಲಾಜೆ, ನಾರಾಯಣಸ್ವಾಮಿ ಆಗಮನ?
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯತ್ತ ಈಗ ಎಲ್ಲರ ಚಿತ್ತ ನೆಟ್ಟಿದೆ. ಎನ್ ಡಿಎ-2 ಸರ್ಕಾರ ಬಂದ ಮೇಲೆ ನರೇಂದ್ರ ಮೋದಿ ಸಂಪುಟದ ವಿಸ್ತರಣೆ ಇಂದು ಸಾಯಂಕಾಲ ನಡೆಯಲಿದೆ. ಅದಕ್ಕೂ ಮುನ್ನ ಪ್ರಧಾನ ಮಂತ್ರಿಗಳ ಅಧಿಕೃತ ನಿವಾಸ ದೆಹಲಿಯ 7, ಲೋಕ ಕಲ್ಯಾಣ ಮಾರ್ಗ್ ಗೆ ಈಗ ಒಬ್ಬೊಬ್ಬರೇ ಸಂಭಾವ್ಯ ಸಚಿವರು, ರಾಜಕೀಯ ನಾಯಕರು ಆಗಮಿಸುತ್ತಿದ್ದಾರೆ.
ಇಂದು ಬೆಳಗ್ಗೆ ಪ್ರಧಾನಿಯವರೊಂದಿಗೆ ಸಂಪುಟ ವಿಸ್ತರಣೆಗೆ ಮುನ್ನ ಮಾತುಕತೆ ನಡೆಸಿ ಅಂತಿಮ ಸಿದ್ದತೆ ನಡೆಸಲು ಗೃಹ ಸಚಿವ ಅಮಿತ್ ಶಾ ಬಂದಿದ್ದರು. ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ ಪಿ ನಡ್ಡ ಕೂಡ ಬಂದರು. ನಂತರ ಬಿಜೆಪಿ ನಾಯಕರಾದ ಮೀನಾಕ್ಷಿ ಲೇಖಿ, ಸರ್ಬಾನಂದ ಸೊನೊವಾಲ್, ಪುರುಷೋತ್ತಮ್ ರೂಪಾಲ, ನಿಶಿತ್ ಪ್ರಾಮಾಣಿಕ್, ಆರ್ ಸಿಪಿ ಸಿಂಗ್, ಪಷುಪತಿ ಪರಸ್, ಅವರು ಪ್ರಸ್ತುತ ಪ್ರಧಾನಿ ನಿವಾಸದಲ್ಲಿ ತೀವ್ರ ಚರ್ಚೆಯಲ್ಲಿ ತೊಡಗಿದ್ದಾರೆ ಎಂದು ಸುದ್ದಿಸಂಸ್ಥೆಗಳು ವರದಿ ಮಾಡುತ್ತಿವೆ.
ಶೋಭಾ ಕರಂದ್ಲಾಜೆಗೆ ಸಚಿವ ಪಟ್ಟ?: ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಮಧ್ಯಪ್ರದೇಶದ ಬಿಜೆಪಿ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಅವರ ಹೆಸರು ಬಲವಾಗಿ ಕೇಳಿಬರುತ್ತಿದ್ದು, ಈಗಾಗಲೇ ಪ್ರಧಾನಿ ನಿವಾಸಕ್ಕೆ ಆಗಮಿಸಿದ್ದಾರೆ. ಅವರ ಬೆನ್ನಲ್ಲೇ ಕರ್ನಾಟಕದಿಂದ ಸಂಸದೆ ಶೋಭಾ ಕರಂದ್ಲಾಜೆ ಮತ್ತು ಚಿತ್ರದುರ್ಗದ ಸಂಸದ ಎ ನಾರಾಯಣಸ್ವಾಮಿಯವರು ಕೂಡ ಪ್ರಧಾನಿ ನಿವಾಸಕ್ಕೆ ತೆರಳಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ನಾರಾಯಣ್ ರಾಣೆ, ಭಿವಾಂಡಿ ಲೋಕಸಭಾ ಸಂಸದ ಕಪಿಲ್ ಪಾಟೀಲ್, ಬಿಜೆಪಿಯ ಉತ್ತರ ಪ್ರದೇಶದ ಮಿತ್ರ ಅನುಪ್ರಿಯಾ ಪಟೇಲ್, ಬಿಜೆಪಿ ಸಂಸದ ಜ್ಯೋತಿರಾದಿತ್ಯ ಸಿಂಧಿಯಾ, ಉತ್ತರಾಖಂಡದ ಶಾಸಕ ಅಜಯ್ ಭಟ್ ಪ್ರಧಾನಿ ನಿವಾಸದಲ್ಲಿದ್ದಾರೆ.ಪ್ರಧಾನ ಮಂತ್ರಿಗಳ ಕಚೇರಿ ಆಯ್ದ ಅಭ್ಯರ್ಥಿಗಳನ್ನು ದೂರವಾಣಿ ಮೂಲಕ ಪ್ರತ್ಯೇಕವಾಗಿ ಕರೆಯುತ್ತಿದೆ, ಕೆಲವರು ನಿನ್ನೆಯೇ ದೆಹಲಿ ತಲುಪಿದ್ದರು.
ಮೋದಿಯವರು 2019 ರ ಮೇನಲ್ಲಿ ಎರಡನೇ ಅವಧಿಗೆ ಅಧಿಕಾರ ವಹಿಸಿಕೊಂಡ ನಂತರ ಇದು ಅವರ ಮಂತ್ರಿ ಮಂಡಳಿಯಲ್ಲಿ ನಡೆದ ಮೊದಲ ಪುನಾರಚನೆ ಅಥವಾ ವಿಸ್ತರಣೆಯಾಗಿದೆ. ಪ್ರಧಾನ ಮಂತ್ರಿ ಯುವ ಮುಖಗಳನ್ನು ಈ ಬಾರಿ ತಮ್ಮ ಸಂಪುಟಕ್ಕೆ ಸೇರ್ಪಡೆ ಮಾಡಲು ಹೆಚ್ಚು ಉತ್ಸುಕತೆ ಹೊಂದಿದ್ದು ಸಾಮಾಜಿಕ ಮತ್ತು ಪ್ರಾದೇಶಿಕ ಆದ್ಯತೆ ಮೇರೆಗೆ ಸಂಸದರಿಗೆ ಸಚಿವ ಸ್ಥಾನ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ