ಗುಜರಾತ್: ನಕಲಿ ಪಾಸ್‌ಪೋರ್ಟ್, ವೀಸಾ ಬಳಸಿ ಜನರನ್ನು ವಿದೇಶಕ್ಕೆ ಕಳುಹಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ ಎಟಿಎಸ್
ಅಹಮದಾಬಾದ್: ನಕಲಿ ಪಾಸ್‌ಪೋರ್ಟ್ ಮತ್ತು ವೀಸಾ ಸೃಷ್ಟಿಸಿ ಹಲವಾರು ಜನರನ್ನು ವಿದೇಶಕ್ಕೆ ಕಳುಹಿಸಿದ ಆರೋಪದ ಮೇಲೆ 45 ವರ್ಷದ ವ್ಯಕ್ತಿಯನ್ನು ಸೂರತ್ ನಲ್ಲಿ ಗುಜರಾತ್ ಭಯೋತ್ಪಾದನಾ ನಿಗ್ರಹ ದಳ(ಎಟಿಎಸ್) ಬಂಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಗುಜರಾತ್ ಎಟಿಎಸ್ ತಂಡವು ಸೋಮವಾರ ಸೂರತ್‌ನ ವರಾಚಾ ಪ್ರದೇಶದ ಮನೆಯೊಂದರ ಮೇಲೆ ದಾಳಿ ನಡೆಸಿದ್ದು ಕೆನಡಾ, ಟರ್ಕಿ, ಅಮೆರಿಕಾ, ಪೆರು, ಇತರ ದೇಶಗಳ ವೀಸಾ ಅಂಚೆಚೀಟಿಗಳನ್ನು ಹೊಂದಿರುವ ಹಲವಾರು ನಕಲಿ ಪಾಸ್‌ಪೋರ್ಟ್‌ಗಳೊಂದಿಗೆ ಆಡಂ ಮೊಹಮ್ಮದ್ ಇರ್ಫಾನ್ ಎಂಬಾತನನ್ನು ಬಂಧಿಸಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.
ನಕಲಿ ಪಾಸ್‌ಪೋರ್ಟ್ ಮತ್ತು ವೀಸಾ ತಯಾರಿಸುವುದರ ಹೊರತಾಗಿ, ಇರ್ಫಾನ್ ಒದಗಿಸಿದ ನಕಲಿ ಗುರುತು ಮತ್ತು ದಾಖಲೆಗಳನ್ನು ಬಳಸಿ ಹಲವರು ಪಾಸ್‌ಪೋರ್ಟ್‌ಗಳನ್ನು ಪಡೆದುಕೊಂಡಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಈ ಪಾಸ್‌ಪೋರ್ಟ್‌ಗಳನ್ನು ಮಹಾರಾಷ್ಟ್ರ, ದೆಹಲಿ ಮತ್ತು ಇತರ ರಾಜ್ಯಗಳಲ್ಲಿನ ಪಾಸ್‌ಪೋರ್ಟ್ ಕಚೇರಿಗಳಿಂದ ನೀಡಲಾಗಿದೆ ಎಂದು ಹೇಳಿದರು.
ನಕಲಿ ಪಾಸ್‌ಪೋರ್ಟ್ ಮತ್ತು ವೀಸಾಗಳಲ್ಲಿ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪ್ರಜೆಗಳನ್ನು ಯುಕೆ, ಕೆನಡಾ, ದಕ್ಷಿಣ ಆಫ್ರಿಕಾ ಮತ್ತು ಯುರೋಪಿಯನ್ ದೇಶಗಳಿಗೆ ಪಾಕಿಸ್ತಾನದ ಮೂಲಕ ಕಳುಹಿಸಿದ್ದಾಗಿ ಆರೋಪಿಗಳು ಹೇಳಿಕೊಂಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಇತ್ತೀಚೆಗೆ, ಆರೋಪಿಗಳು ನಕಲಿ ಪಾಸ್‌ಪೋರ್ಟ್ ಮತ್ತು ವೀಸಾ ಬಳಸಿ ಭಾರತದಿಂದ ಇಬ್ಬರು ಬಾಲಕಿಯರನ್ನು ಬಾಂಗ್ಲಾದೇಶದ ಮೂಲಕ ದುಬೈಗೆ ಕಳುಹಿಸಲು ಯೋಜಿಸಿದ್ದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಸೂರತ್, ಭರೂಚ್, ವಡೋದರಾ, ಕೋಲ್ಕತಾ ಮತ್ತು ಮುಂಬೈಗಳಲ್ಲಿ ಆರೋಪಿಗಳ ವಿರುದ್ಧ ಈಗಾಗಲೇ ಕನಿಷ್ಠ ಏಳು ಎಫ್‌ಐಆರ್ ದಾಖಲಿಸಲಾಗಿದೆ. ಈ ಹಿಂದೆ ಈ ಆರು ಪ್ರಕರಣಗಳಲ್ಲಿ ಆತನನ್ನು ಬಂಧಿಸಲಾಗಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ. ಇದೇ ರೀತಿಯ ಆರೋಪದ ಮೇಲೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.