ತೈಲ ಬೆಲೆ ಇಳಿಸಿ, ಜಿಎಸ್ ಟಿ ಸರಳೀಕರಣಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಶಶಿ ತರೂರ್ ಒತ್ತಾಯ

ಇಂಧನದ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರದ ಬೊಕ್ಕಸವನ್ನು ತುಂಬುವ ಸಾಧನವನ್ನಾಗಿ ಪ್ರಧಾನಿ ನರೇಂದ್ರ ಮೋದಿ ಬಳಸಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಶಶಿ ತರೂರ್ ಆರೋಪಿಸಿದ್ದಾರೆ.
ಶಶಿ ತರೂರ್
ಶಶಿ ತರೂರ್
Updated on

ಚೆನ್ನೈ: ಇಂಧನದ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರದ ಬೊಕ್ಕಸವನ್ನು ತುಂಬುವ ಸಾಧನವನ್ನಾಗಿ ಪ್ರಧಾನಿ ನರೇಂದ್ರ ಮೋದಿ ಬಳಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್ ಮುಖಂಡ ಶಶಿ ತರೂರ್, ತೈಲ ಮೇಲಿನ ಸೆಸ್ , ತರಿಗೆ ಹಾಗೂ ಅತ್ಯಾವಶ್ಯಕ ಸರಕುಗಳ ಮೇಲಿನ ಆಮದು ಬೆಲೆಯನ್ನು ಗಮನಾರ್ಹವಾಗಿ ಇಳಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಅಲ್ಲದೇ, ಗೃಹ ಬಳಕೆ ವಸ್ತುಗಳ ಮೇಲಿನ ಜಿಎಸ್ ಟಿ ದರವನ್ನು ಕೇಂದ್ರ ಸರ್ಕಾರ ಸರಳ ಮತ್ತು ತರ್ಕಬದ್ಧಗೊಳಿಸಬೇಕೆಂದು ಅವರು ಹೇಳಿದ್ದಾರೆ. ತಮಿಳನಾಡು ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಶಿ ತರೂರ್, ಜನಸಾಮಾನ್ಯರ ಸಂಪೂರ್ಣ ನಿರ್ಲಕ್ಷ್ಯಕ್ಕಾಗಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಕೇಂದ್ರ ಸರ್ಕಾರ ಕಳೆದ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ತೆರಿಗೆ ಒಂದರಿಂದಲೇ  4.2 ಲಕ್ಷ ಕೋಟಿ ಹಣ ಸಂಗ್ರಹಿಸಿದೆ. ಇದು ಹಿಂದಿನ ಆಡಳಿತದ ಅವಧಿಯಲ್ಲಿ ಸಂಗ್ರಹಿಸಿದ ಮೊತ್ತಕ್ಕಿಂತ ಮೂರು ಪಟ್ಟು ಹೆಚ್ಚಾಗಿದೆ ಎಂದು ಹೇಳಿದರು.

ಯುಪಿಎ ಸರ್ಕಾರ ಆಡಳಿತವಿದ್ದಾಗ  ಪ್ರತಿ ಲೀಟರ್ ಪೆಟ್ರೋಲ್  ಮೇಲೆ 6.45 ರೂ. ಸೆಸ್ ಸಂಗ್ರಹಿಸಿ, ಮೂರು ರೂ. ಗಳನ್ನು ರಾಜ್ಯಗಳಿಗೆ ನೀಡಲಾಗುತಿತ್ತು. ಇದೀಗ ಬಿಜೆಪಿ ಸರ್ಕಾರ ತೈಲ ಬೆಲೆಯನ್ನು ಗಮನಾರ್ಹವಾಗಿ ಏರಿಕೆ ಮಾಡಿದ್ದು, ಈಗಲೂ ರಾಜ್ಯ ಸರ್ಕಾರಗಳು ಮೂರು ರೂಪಾಯಿ ನೀಡುತ್ತಿವೆ ಎಂದರು.

ಕಳೆದ ಏಳು ವರ್ಷಗಳ ಬಿಜೆಪಿ ಆಡಳಿತಾವಧಿಯಲ್ಲಿ ತೈಲ ಬೆಲೆ ಏರಿಕೆಯಿಂದ ನಾವೆಲ್ಲ ಉಸಿರುಕಟ್ಟಿದಂತಾಗಿದೆ. ಎಲ್ ಪಿಜಿ ಬೆಲೆ ಕೂಡಾ ಗಗನ ಮುಖಿಯಾಗಿದೆ. ಪ್ರಸ್ತುತದಲ್ಲಿನ ಇಂತಹ ಬಿಕ್ಕಟ್ಟಿಗೆ ಬಿಜೆಪಿಯ ದುರಾಡಳಿತ ಮತ್ತು ಆರ್ಥಿಕತೆಯ ತಪ್ಪು ನಿರ್ವಹಣೆಯೇ ಕಾರಣವಾಗಿದೆ ಎಂದು ದೂಷಿಸಿದರು. 

ಅಂತಾರಾಷ್ಟ್ರೀಯ ಬೆಲೆಗಳು ನಿಧಾನವಾಗಿ ಹೆಚ್ಚುತ್ತಿವೆ. ಇಂಧನದ ಮೇಲಿನ ತೆರಿಗೆಯನ್ನು ಕೇಂದ್ರ ಸರ್ಕಾರದ ಬೊಕ್ಕಸ ತುಂಬಿಸಲು ಸಾಧನವನ್ನಾಗಿ ಬಳಸಿಕೊಳ್ಳಲಾಗುತ್ತಿದೆ, ಜನಸಾಮಾನ್ಯರನ್ನು ಸಂಪೂರ್ಣವಾಗಿ ಅಲಕ್ಷಿಸಲಾಗಿದೆ ಎಂದು ಆರೋಪಿಸಿದ ಅವರು, ಸೋಮವಾರದಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ರಫೆಲ್ ಒಪ್ಪಂದ ಕುರಿತು ಪೂರ್ಣ ಪ್ರಮಾಣದ ತನಿಖೆಗೆ ಒತ್ತಾಯಿಸಲಾಗುವುದು ಎಂದು ಶಶಿ ತರೂರ್ ತಿಳಿಸಿದರು.

ಮೇಕೆದಾಟು ಯೋಜನೆ ಕುರಿತು ತಮಿಳುನಾಡು ಹಾಗೂ ಕರ್ನಾಟಕ ನಡುವಿನ ಅಂತರ ರಾಜ್ಯ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಬೇಕೆಂದು ಶಶಿ ತರೂರ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Open in App

Advertisement

X
Kannada Prabha
www.kannadaprabha.com