ನವದೆಹಲಿ: ಬಕ್ರಿ-ಈದ್ ಆಚರಣೆಗೂ ಮುನ್ನ ಕೋವಿಡ್-19 ನಿರ್ಬಂಧ ಸಡಿಲಿಕೆ ಮಾಡಿರುವ ಕೇರಳ ಸರ್ಕಾರದ ಕ್ರಮವನ್ನು ಭಾರತೀಯ ವೈದ್ಯಕೀಯ ಸಂಘ ಅನಗತ್ಯ ಹಾಗೂ ಅನುಚಿತ ನಡೆ ಎಂದು ಹೇಳಿದೆ.
ವೈದ್ಯಕೀಯ ತುರ್ತು ಇರುವಾಗ ಇಂತಹ ನಿರ್ಧಾರ ಕೈಗೊಂಡಿರುವ ಕೇರಳ ಸರ್ಕಾರದ ನಡೆ ಅನಗತ್ಯ ಹಾಗೂ ಅನುಚಿತವಾಗಿದೆ ಎಂದು ಐಎಂಎ ಹೇಳಿದ್ದು, ನಿರ್ಬಂಧ ಸಡಿಲಿಕೆಯನ್ನು ಹಿಂಪಡೆಯುವಂತೆ ಸಲಹೆ ನೀಡಿದೆ. ಕೇರಳ ಸರ್ಕಾರ ತನ್ನ ನಿರ್ಧಾರವನ್ನು ಹಿಂಪಡೆದು ಕೋವಿಡ್-19 ತಡೆಗೆ ಸೂಕ್ತವಾದಂತಹ ನಡಾವಳಿಗಳನ್ನು ಜಾರಿಗೊಳಿಸದೇ ಇದ್ದಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರುವುದಾಗಿಯೂ ಐಎಂಎ ಎಚ್ಚರಿಸಿದೆ.
ಉತ್ತರ ಭಾರತದಲ್ಲಿ ಹಲವು ರಾಜ್ಯಗಳು ಸಾಂಕ್ರಾಮಿಕ ದೃಷ್ಟಿಯಿಂದ ಜನಪ್ರಿಯ ಉತ್ಸವ ಹಾಗೂ ತೀರ್ಥಯಾತ್ರೆಗಳನ್ನು ರದ್ದುಗೊಳಿಸಿವೆ. ಇಂತಹ ಸಂದರ್ಭದಲ್ಲಿ ಕೇರಳ ಸರ್ಕಾರ ಗುಂಪು ಸೇರುವುದಕ್ಕೆ ಅವಕಾಶ ನೀಡಿರುವ ನಿರ್ಧಾರವನ್ನು ತೆಗೆದುಕೊಂಡಿರುವುದು ದುರದೃಷ್ಟಕರ ಎಂದು ಐಎಂಎ ಟೀಕಿಸಿದೆ.
"ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವುದು ಹಾಗೂ ಸೆರೋಪಾಸಿಟಿವಿಟಿಯ ನಡುವೆಯೇ ಕೇರಳ ಸರ್ಕಾರ ಬಕ್ರಿ-ಈದ್ ನ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ನಿರ್ಧಾರ ಕೈಗೊಂಡಿರುವುದು ನೋವಿನ ಸಂಗತಿಯಾಗಿದೆ. ದೇಶದ ಹಾಗೂ ಮಾನುಕುಲದ ಒಳಿತಿಗಾಗಿ ಐಎಂಎ ಈ ನಿರ್ಧಾರವನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತದೆ ಹಾಗೂ ಕೋವಿಡ್-19 ನಿರ್ಬಂಧ ಮುರಿಯುವವರೆಡೆಗೆ ಶೂನ್ಯ ಸಹಿಷ್ಣುಗಳಾಗಿರಬೇಕೆಂದು ಒತ್ತಾಯಿಸುತ್ತದೆ" ಎಂದು ಹೇಳಿದೆ.
Advertisement