ಕೇರಳ: ಪೂರ್ಣ ಪ್ರಮಾಣದ ಲಸಿಕೆ ಹಾಕಿಸಿಕೊಂಡಿದ್ದರೂ 39 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್-19 ಸೋಂಕು ದೃಢ!
ತಿರುವನಂತಪುರಂ: ಕೇರಳದ ತ್ರಿಶೂರ್ ಸರ್ಕಾರಿ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ವಿದ್ಯಾರ್ಥಿಗಳ ಪೈಕಿ ಪೂರ್ಣ ಪ್ರಮಾಣದ ಲಸಿಕೆ ಹಾಕಿಸಿಕೊಂಡಿದ್ದ 39 ವಿದ್ಯಾರ್ಥಿಗಳಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕೋವಿಡ್-19 ಲಾಕ್ ಡೌನ್ ಕಾರಣದಿಂದಾಗಿ ಮೆಡಿಕಲ್ ಕಾಲೇಜ್ ನ್ನು ಬಂದ್ ಮಾಡಲಾಗಿತ್ತು. ಜೂ.1 ರಿಂದ ಪುನಃ ಪ್ರಾರಂಭ ಮಾಡಲಾಗಿತ್ತು. ಜೂ.5 ರಿಂದ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳು ಕ್ಯಾಂಪಸ್ ಗೆ ಆಗಮಿಸಿದ್ದರು.
ಜೂ.06 ರಂದು ಎರಡನೇ ಬ್ಯಾಚ್ ನ 175 ವಿದ್ಯಾರ್ಥಿಗಳು ಆಗಮಿಸಿದ ದಿನದಂದೇ ಮೊದಲ ಕೋವಿಡ್-19 ಸೋಂಕು ಪ್ರಕರಣ ವರದಿಯಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಂಕು ಪ್ರಕರಣಗಳು ಏರಿಕೆಯಾಗುತ್ತಿದ್ದಂತೆಯೇ, ಈ ಬ್ಯಾಚ್ ನ ಎಲ್ಲಾ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆಯನ್ನು ಜುಲೈ 17 ರಂದು ನಡೆಸಲಾಗಿತ್ತು. 20 ಮಂದಿಗೆ ಸೋಂಕು ದೃಢಪಟ್ಟಿದ್ದ ಕಾರಣದಿಂದಾಗಿ ವಿದ್ಯಾರ್ಥಿಗಳಿಗೆ ಮನೆಗೆ ತೆರಳಲು ಅನುಮತಿ ನೀಡಲಾಗಿತ್ತು.
ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಮೂರು ಬ್ಯಾಚ್ ನ ವಿದ್ಯಾರ್ಥಿಗಳಷ್ಟೇ ಕ್ಯಾಂಪಸ್ ನಲ್ಲಿದ್ದಾರೆ. ಈ ಬ್ಯಾಚ್ ಗಳ ಪೈಕಿ 39 ಮಂದಿ ವಿದ್ಯಾರ್ಥಿಗಳಿಗೆ (ಎಲ್ಲರಿಗೂ ಎರಡೂ ಡೋಸ್ ಲಸಿಕೆ ಹಾಕಲಾಗಿದೆ) ಸೋಂಕು ಪತ್ತೆಯಾಗಿದೆ ಎಂದು ಆಸ್ಪತ್ರೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸೋಂಕು ಪತ್ತೆಯಾದ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಶೇಷವಾಗಿ ಆಯೋಜಿಸಲಾಗಿದ್ದ ಕೋಠಡಿಗಳಲ್ಲಿ ಅವರಿಗೆ ಥಿಯರಿ ಪರೀಕ್ಷೆಗಳನ್ನು ಬರೆಯುವುದಕ್ಕೆ ಅವಕಾಶ ಮಾಡಿಕೊಡಲಾಗಿದೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ