ಅಸ್ಸಾಂ: ಕೋವಿಡ್ ರೋಗಿ ಸತ್ತ ಬಳಿಕ ಸಂಬಂಧಿಕರಿಂದ ವೈದ್ಯರ ಮೇಲೆ ಹಲ್ಲೆ, 24 ಮಂದಿ ಬಂಧನ

ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಅಲ್ಲಲ್ಲಿ ವೈದ್ಯರ, ದಾದಿಯರ ಮೇಲೆ ಹಲ್ಲೆ ನಡೆದ ಘಟನೆಗಳು ನಡೆದಿವೆ. ಅಸ್ಸಾಂ ರಾಜ್ಯದ ಹೊಜೈ ಜಿಲ್ಲೆಯ ಆಸ್ಪತ್ರೆಯಲ್ಲಿ ಕೂಡ ಮತ್ತೊಂದು ಘಟನೆ ನಡೆದಿದ್ದು, ಜನರ ಗುಂಪೊಂದು ಕೋವಿಡ್ ರೋಗಿ ನಿನ್ನೆ ತೀರಿಹೋದ ನಂತರ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.
ವೈದ್ಯರ ಮೇಲೆ ಕೋವಿಡ್ ನಿಂದ ಮೃತಪಟ್ಟ ರೋಗಿಯ ಸಂಬಂಧಿಕರಿಂದ ಹಲ್ಲೆ
ವೈದ್ಯರ ಮೇಲೆ ಕೋವಿಡ್ ನಿಂದ ಮೃತಪಟ್ಟ ರೋಗಿಯ ಸಂಬಂಧಿಕರಿಂದ ಹಲ್ಲೆ
Updated on

ಹೊಜೈ(ಅಸ್ಸಾಂ): ಕೊರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಅಲ್ಲಲ್ಲಿ ವೈದ್ಯರ, ದಾದಿಯರ ಮೇಲೆ ಹಲ್ಲೆ ನಡೆದ ಘಟನೆಗಳು ನಡೆದಿವೆ. ಅಸ್ಸಾಂ ರಾಜ್ಯದ ಹೊಜೈ ಜಿಲ್ಲೆಯ ಆಸ್ಪತ್ರೆಯಲ್ಲಿ ಕೂಡ ಮತ್ತೊಂದು ಘಟನೆ ನಡೆದಿದ್ದು, ಜನರ ಗುಂಪೊಂದು ಕೋವಿಡ್ ರೋಗಿ ನಿನ್ನೆ ತೀರಿಹೋದ ನಂತರ ವೈದ್ಯರ ಮೇಲೆ ಹಲ್ಲೆ ನಡೆಸಿದ್ದಾರೆ.

ಪ್ರಕರಣ ಸಂಬಂಧ ಇದುವರೆಗೆ ಮೂವರನ್ನು ಬಂಧಿಸಲಾಗಿದೆ. ನಿನ್ನೆ ಅಪರಾಹ್ನ ಕೊರೋನಾದ ಗಂಭೀರ ಸ್ಥಿತಿಯಲ್ಲಿದ್ದ ರೋಗಿ ಉಡಾಲಿ ಕೇರ್ ಸೆಂಟರ್ ನಲ್ಲಿ ಮೃತಪಟ್ಟರು. ಕೂಡಲೇ ರೋಗಿಯ ಸಂಬಂಧಿಕರು ಮತ್ತು ಕುಟುಂಬಸ್ಥರ ಗುಂಪು ಆಸ್ಪತ್ರೆಗೆ ಬಂದು ವೈದ್ಯರ ಮೇಲೆ ಹಲ್ಲೆ ನಡೆಸಲು ಆರಂಭಿಸಿದರು ಎಂದು ಹೊಜೈ ಎಸ್ಪಿ ಬಾರುನ್ ಪುರ್ಕಯಸ್ತ ತಿಳಿಸಿದ್ದಾರೆ.

ನಮಗೆ ಮಾಹಿತಿ ಸಿಕ್ಕಿದ ಕೂಡಲೇ ನಮ್ಮ ತಂಡ ಆಸ್ಪತ್ರೆಗೆ ಹೋಗಿ ಮೂವರನ್ನು ಬಂಧಿಸಿದ್ದಾರೆ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಬರುನ್ ಪುರ್ಯಕಸ್ತ ಪಿಟಿಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ವೈದ್ಯರ ಮೇಲೆ ಹಲ್ಲೆ ನಡೆದ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಅದರಲ್ಲಿ ವೈದ್ಯರೆಂದು ಕಾಣುತ್ತಿರುವ ವ್ಯಕ್ತಿಯ ಮೇಲೆ ಜನರ ಗುಂಪು ಹಲ್ಲೆ ಮಾಡುತ್ತಿದ್ದು ಅದರಲ್ಲಿ ಮಹಿಳೆ ಕೂಡ ಒಬ್ಬರಿದ್ದಾರೆ.

ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮ, ಕೊರೋನಾ ಸೋಂಕಿನ ಈ ಸಮಯದಲ್ಲಿ ಮುಂಚೂಣಿ ಕಾರ್ಯಕರ್ತರ ಮೇಲೆ ನಡೆದಿರುವ ಇಂತಹ ಹಲ್ಲೆ ಘಟನೆಯನ್ನು ಖಂಡಿತಾ ಸಹಿಸಲು ಸಾಧ್ಯವಿಲ್ಲ. ಇದಕ್ಕೆ ನಮ್ಮ ಸರ್ಕಾರ ಪ್ರೋತ್ಸಾಹ ನೀಡುವುದಿಲ್ಲ ಎಂದಿದ್ದಾರೆ.

ಘಟನೆ ಸಂಬಂಧ ಇಲ್ಲಿಯವರೆಗೆ 24 ಮಂದಿಯನ್ನು ಬಂಧಿಸಿದ್ದು, ಸದ್ಯದಲ್ಲಿಯೇ ಚಾರ್ಜ್ ಶೀಟ್ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ. 

ಹಲ್ಲೆ ನಡೆಸಿದವರನ್ನು ಪತ್ತೆಹಚ್ಚಿ ಸೂಕ್ತ ಶಿಕ್ಷೆ ನೀಡಬೇಕೆಂದು ಸಿಎಂ ಕಾನೂನು ಮತ್ತು ಸುವ್ಯವಸ್ಥೆ ವಿಶೇಷ ಡಿಜಿಪಿ ಜ್ಞಾನೇಂದ್ರ ಪ್ರತಾಪ್ ಸಿಂಗ್ ಅವರಿಗೆ ಸೂಚಿಸಿದ್ದಾರೆ.

ವೈದ್ಯರ ಮೇಲೆ ಹಲ್ಲೆ ನಡೆಸಿದವರನ್ನು ಬಂಧಿಸಬೇಕೆಂದು ಹೊಜೈ ಎಸ್ಪಿಯವರಿಗೆ ಸೂಚನೆ ನೀಡಲಾಗಿದೆ ಎಂದು ಡಿಜಿಪಿ ಸಿಂಗ್ ತಿಳಿಸಿದ್ದಾರೆ. ಹಲ್ಲೆಗೊಳಗಾದ ವೈದ್ಯರನ್ನು ಸೈಜು ಕುಮಾರ್ ಸೆನಪತಿ ಎಂದು ಗುರುತಿಸಲಾಗಿದೆ.

ಇನ್ನು ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸ್ಥಳೀಯ ಕಾಂಗ್ರೆಸ್ ಸಂಸದ ಪ್ರದ್ಯುತ್ ಬೊರ್ಡೊಲೈ, ವೈದ್ಯರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಒಪ್ಪಲು ಸಾಧ್ಯವೇ ಇಲ್ಲ, ಜಿಲ್ಲಾಡಳಿತಕ್ಕೆ ಕೂಡಲೇ ಕ್ರಮ ಕೈಗೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ ಎಂದು ಹೇಳಿದ್ದಾರೆ.

ವೈದ್ಯರುಗಳ ಒಕ್ಕೂಟ ಒತ್ತಾಯ: ಅಸ್ಸಾಂನಲ್ಲಿ ಕರ್ತವ್ಯನಿರತ ವೈದ್ಯರ ಮೇಲೆ ರೋಗಿಯ ಸಂಬಂಧಿಕರ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಏಮ್ಸ್ ನ ವೈದ್ಯರ ಸಂಘ, ಸಾಂಕ್ರಾಮಿಕ ರೋಗ ಕಾಯ್ದೆ 1897ರ ಅಡಿಯಲ್ಲಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಂಡು ಮುಂದೆ ಇಂತಹ ಘಟನೆ ನಡೆಯದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com