ಮನೆ-ಮನೆಗೆ ನುಗ್ಗಿ ಕೊರೋನಾ ವೈರಸ್ ಮೇಲೆ 'ಸರ್ಜಿಕಲ್ ಸ್ಟ್ರೈಕ್' ಮಾಡಿ: ಕೇಂದ್ರಕ್ಕೆ ಬಾಂಬೆ ಹೈಕೋರ್ಟ್

ಪ್ರಸ್ತುತ ದೇಶದ ಅತಿದೊಡ್ಡ ಶತ್ರುವಾಗಿರುವ ಕೊರೋನಾ ವೈರಸ್ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿ. ಗಡಿಯಲ್ಲಿ ನಿಂತರೆ ಸಾಲದು, ಮನೆ ಮನೆಗೆ ನುಗ್ಗಿ ಶತ್ರುವನ್ನು ಹೊಡೆದು ಹಾಕಿ ಎಂದು ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ಹೇಳಿದೆ.
ಬಾಂಬೆ ಹೈಕೋರ್ಟ್
ಬಾಂಬೆ ಹೈಕೋರ್ಟ್

ಮುಂಬೈ: ಪ್ರಸ್ತುತ ದೇಶದ ಅತಿದೊಡ್ಡ ಶತ್ರುವಾಗಿರುವ ಕೊರೋನಾ ವೈರಸ್ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡಿ. ಗಡಿಯಲ್ಲಿ ನಿಂತರೆ ಸಾಲದು, ಮನೆ ಮನೆಗೆ ನುಗ್ಗಿ ಶತ್ರುವನ್ನು ಹೊಡೆದು ಹಾಕಿ ಎಂದು ಕೇಂದ್ರಕ್ಕೆ ಬಾಂಬೆ ಹೈಕೋರ್ಟ್ ಹೇಳಿದೆ. 

ಮುಖ್ಯ ನ್ಯಾಯಮೂರ್ತಿ ದೀಪಂಕರ್ ದತ್ತಾ ಮತ್ತು ನ್ಯಾಯಮೂರ್ತಿ ಜಿಎಸ್ ಕುಲಕರ್ಣಿ ಅವರ ವಿಭಾಗೀಯ ಪೀಠವು ಕೇಂದ್ರ ಸರ್ಕಾರದ ಹೊಸ 'ಮನೆಗೆ ಹತ್ತಿರ' ವ್ಯಾಕ್ಸಿನೇಷನ್ ಕಾರ್ಯಕ್ರಮವು ವೈರಸ್ ವಾಕ್ಸಿನೇಷನ್ ಕೇಂದ್ರಕ್ಕೆ ಬರುವವರೆಗೆ ಕಾಯುವಂತಿದೆ ಎಂದು ಲೇವಡಿ ಮಾಡಿದೆ. 

'ಕೊರೋನಾವೈರಸ್ ನಮ್ಮ ಅತಿದೊಡ್ಡ ಶತ್ರು. ನಾವು ಅದನ್ನು ಹೊಡೆದುರುಳಿಸಬೇಕಾಗಿದೆ. ಶತ್ರು ಕೆಲವು ಪ್ರದೇಶಗಳಲ್ಲಿ, ಹೊರಗೆ ಬರಲು ಸಾಧ್ಯವಾಗದ ಕೆಲವು ಜನರ ಒಳಗೆ ವಾಸಿಸುತ್ತಿದ್ದು, ನಿಮ್ಮ (ಸರ್ಕಾರ) ವಿಧಾನವು ಸರ್ಜಿಕಲ್ ಸ್ಟ್ರೈಕ್ ನಂತೆ ಇರಬೇಕು. ನೀವು ಗಡಿಯಲ್ಲಿ ನಿಂತಿದ್ದೀರಿ, ವೈರಸ್ ನಿಮ್ಮ ಬಳಿಗೆ ಬರಲು ಕಾಯುತ್ತಿದೆ. ನೀವು ಶತ್ರು ಪ್ರದೇಶವನ್ನು ಪ್ರವೇಶಿಸುತ್ತಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ದತ್ತಾ ಹೇಳಿದರು.

ಸಾರ್ವಜನಿಕರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರ ಹೆಚ್ಚಿನ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ. ಆದರೆ ಅವು ವಿಳಂಬವಾಗಿದ್ದು ಹಲವಾರು ಜೀವಗಳು ನಷ್ಟವಾಗಿವೆ ಎಂದು ನ್ಯಾಯಪೀಠ ಹೇಳಿದೆ. 

75 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರು, ಗಾಲಿಕುರ್ಚಿಯಲ್ಲಿ ಕುಳಿತಿರುವವರು, ವಿಶೇಷ ಸಾಮರ್ಥ್ಯ ಹೊಂದಿರದ ವ್ಯಕ್ತಿಗಳಿಗೆ ಮನೆ ಬಾಗಿಲಿಗೆ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪ್ರಾರಂಭಿಸಲು ಸರ್ಕಾರಕ್ಕೆ ನಿರ್ದೇಶನ ಕೋರಿ ಧುರುತಿ ಕಪಾಡಿಯಾ ಮತ್ತು ಕುನಾಲ್ ತಿವಾರಿ ವಕೀಲರಿಬ್ಬರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಈ ಸಂಬಂಧ ಮುಂಬೈ ಹೈಕೋರ್ಟ್ ಈ ಹೇಳಿಕೆ ನೀಡಿದೆ. 

ಪ್ರಸ್ತುತ ಮನೆ-ಮನೆಗೆ ಹೋಗಿ ಲಸಿಕೆ ಹಾಕಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರ ಮಂಗಳವಾರ ನ್ಯಾಯಾಲಯಕ್ಕೆ ತಿಳಿಸಿತ್ತು. ಇನ್ನು ಮನೆ-ಮನೆ ಬದಲಿಗೆ 'ಮನೆಯ ಹತ್ತಿರ' ವ್ಯಾಕ್ಸಿನೇಷನ್ ಕೇಂದ್ರಗಳನ್ನು ಪ್ರಾರಂಭಿಸಲು ನಿರ್ಧರಿಸಿರುವುದಾಗಿ ಹೇಳಿತ್ತು. ಇದಕ್ಕೆ ನ್ಯಾಯಪೀಠ ಕೇರಳ, ಜಮ್ಮು ಮತ್ತು ಕಾಶ್ಮೀರ, ಬಿಹಾರ, ಒಡಿಶಾ ಮತ್ತು ಮಹಾರಾಷ್ಟ್ರದ ವಸೈ-ವಿರಾರ್‌ನಂತಹ ಕೆಲವು ಪುರಸಭೆಗಳು ಮನೆ-ಮನೆ ಲಸಿಕೆ ಕಾರ್ಯಕ್ರಮಗಳನ್ನು ಪ್ರಾರಂಭಿಸಿರುವುದನ್ನು ಉದಾಹರಣೆಯಾಗಿ ನೀಡಿ ಹೈಕೋರ್ಟ್ ಬುಧವಾರ ಗಮನಸೆಳೆಯಿತು. 

ದೇಶಾದ್ಯಂತದ ಇತರ ರಾಜ್ಯಗಳಲ್ಲಿ ಇದನ್ನು ಏಕೆ ಪ್ರೋತ್ಸಾಹಿಸಬಾರದು? ಕೇಂದ್ರ ಸರ್ಕಾರವು ಆ ರಾಜ್ಯ ಸರ್ಕಾರಗಳು ಮತ್ತು ನಾಗರಿಕ ಸಂಸ್ಥೆಗಳಿಗೆ ಏಕೆ ಪ್ರೋತ್ಸಾಹಿಸಬಾರದು. ಅವು ಕೇಂದ್ರದ ಅನುಮೋದನೆಗಾಗಿ ಕಾಯುತ್ತಿವೆಯಾ ಎಂದು ನ್ಯಾಯಾಲಯ ಹೇಳಿದೆ.

ಉತ್ತರ, ದಕ್ಷಿಣ ಮತ್ತು ಪೂರ್ವದ ಇತರ ರಾಜ್ಯಗಳು ಈಗಾಗಲೇ ಯಾವುದೇ ಅನುಮೋದನೆ ಇಲ್ಲದೆ ಪ್ರಾರಂಭಿಸಿದಾಗ ಮಹಾರಾಷ್ಟ್ರ ಮತ್ತು ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್(ಬಿಎಂಸಿ) ಮಾತ್ರ ಮನೆ-ಮನೆ-ಲಸಿಕೆ ಪ್ರಾರಂಭಿಸಲು ಕೇಂದ್ರದ ಅನುಮೋದನೆಗಾಗಿ ಏಕೆ ಕಾಯುತ್ತಿದೆ. 'ಪಶ್ಚಿಮ ಮಾತ್ರ ಏಕೆ ಕಾಯುತ್ತಿದೆ?' ಕೇಂದ್ರ ಸರ್ಕಾರವು ಅನುಮತಿ ನೀಡಿದರೆ ಮಾತ್ರ ಮನೆ ಬಾಗಿಲಿಗೆ ಲಸಿಕೆ ನೀಡಲು ಸಿದ್ಧರಿರುವುದಾಗಿ ಹೇಳುವ ಮೂಲಕ ನ್ಯಾಯಾಲಯದ ನಿರೀಕ್ಷೆಗೆ ತಕ್ಕಂತೆ ಬದುಕಲು ಬಿಎಂಸಿ ಸಹ ವಿಫಲವಾಗಿದೆ ಎಂದು ನ್ಯಾಯಪೀಠ ಹೇಳಿದೆ. ಹೆಚ್ಚಿನ ವಿಚಾರಣೆಗೆ ಜೂನ್ 11ಕ್ಕೆ ನ್ಯಾಯಪೀಠ ಮುಂದೂಡಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com