ಹೆಚ್ಚು ಮಕ್ಕಳಿರುವ ಕುಟುಂಬಕ್ಕೆ 1 ಲಕ್ಷ ರೂ. ಬಹುಮಾನ ಘೋಷಿಸಿದ ಮಿಜೋರಾಂ ಕ್ರೀಡಾ ಸಚಿವ

ತಮ್ಮ ಕ್ಷೇತ್ರದಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಪ್ರಮಾಣಪತ್ರ ಮತ್ತು ಟ್ರೋಫಿಯ ಜೊತೆಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಮಿಜೋರಾಂನ ಕ್ರೀಡಾ ಸಚಿವರು ಘೋಷಣೆ ಮಾಡಿದ್ದಾರೆ.
ಝಿಯೆನಾ ಚನಾ
ಝಿಯೆನಾ ಚನಾ
Updated on

ಗುವಾಹಟಿ: ತಮ್ಮ ಕ್ಷೇತ್ರದಲ್ಲಿ ಹೆಚ್ಚು ಮಕ್ಕಳನ್ನು ಹೊಂದಿರುವ ಕುಟುಂಬಕ್ಕೆ ಪ್ರಮಾಣಪತ್ರ ಮತ್ತು ಟ್ರೋಫಿಯ ಜೊತೆಗೆ 1 ಲಕ್ಷ ರೂ. ನಗದು ಬಹುಮಾನ ನೀಡಲಾಗುವುದು ಎಂದು ಮಿಜೋರಾಂನ ಕ್ರೀಡಾ ಸಚಿವರು ಘೋಷಣೆ ಮಾಡಿದ್ದಾರೆ. 

ವಿಶ್ವ ಅಪ್ಪಂದಿರ ದಿನ ಹಿನ್ನೆಲೆಯಲ್ಲಿ ಮಿಜೋರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರಾಯ್ಟೆ ಅವರು ಈ ಘೋಷಣೆಯನ್ನು ಮಾಡಿದ್ದಾರೆ. ಆದರೆ, ಬಹುಮಾನಕ್ಕೆ ಅರ್ಹರಾಗಬೇಕಾದರೆ ಕನಿಷ್ಟ ಎಷ್ಟು ಮಕ್ಕಳಿರಬೇಕೆಂಬುದನ್ನು ತಿಳಿಸಿಲ್ಲ. 

ಬಹುಮಾನ ಘೋಷಣೆ ಮಾಡಿದ ಬಳಿಕ ಮಾತನಾಡಿರುವ ರಾಬರ್ಟ್ ರೊಮಾವಿಯಾ ರಾಯ್ಟೆ ಅವರು, ಇದಕ್ಕೆ ಕಾರಣವನ್ನೂ ನೀಡಿದ್ದಾರೆ. ರಾಷ್ಟ್ರೀಯ ಜನಸಂಖ್ಯೆಯ ಸರಾಸರಿ 382ಕ್ಕೆ ಹೋಲಿಸಿದರೆ ಮಿಜೋರಾಂನ ಪ್ರತಿ ಚದರ ಕಿ.ಮೀ ಜನಸಂಖ್ಯೆ ಸಾಂದ್ರತೆಯು ಕೇವಲ 52 ಮಾತ್ರ ಇದೆ. ಮಿಜೋರಾಂನಲ್ಲಿ ಜನಸಂಖ್ಯೆ ಬೆಳವಣಿಗೆ ಕ್ಷೀಣಿಸುತ್ತಿದ್ದು, ಬಂಜೆತನ ಪ್ರಮಾಣ ಏರಿಕೆಯಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ ಎಂದು ಹೇಳಿಕೊಂಡಿದ್ದಾರೆ.

ರಾಬರ್ಟ್ ರೊಮಾವಿಯಾ ರಾಯ್ಟೆ ಅವರು, ಐಜಾಲ್ ಈಸ್ಟ್ II ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು, ಐಜಾಲ್ ಫುಟ್ಬಾಲ್ ಕ್ಲಬ್'ನ ಮಾಲೀಕರಾಗಿದ್ದಾರೆ. ಈ ಕ್ಲಬ್'ನ್ನು ಐಜಾಲ್ ಎಫ್'ಸಿ ಎಂದು ಕರೆಯಲಾಗುತ್ತದೆ. 

2011 ರ ಜನಗಣತಿಯ ಪ್ರಕಾರ, ಮಿಜೋರಾಂ 10.91 ಲಕ್ಷ ಜನಸಂಖ್ಯೆಯನ್ನು ಹೊಂದಿದೆ ಎಂದು ತಿಳಿದುಬಂದಿದ್ದು, ಇದು ದೇಶದ ಎರಡನೇ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ರಾಜ್ಯವು ಸುಮಾರು 21,087 ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದ್ದು, ಅದರಲ್ಲಿ ಶೇ.91ರಷ್ಟು ಭಾಗ ಅರಣ್ಯವಿದೆ. ರಾಜ್ಯದಲ್ಲಿ ಮಿಜೋಸ್ ಅತೀ ದೊಡ್ಡ ಸಮುದಾಯವಾಗಿದೆ.

ಮಿಜೋರಾಂನಲ್ಲಿ ಮಿಜೋಸ್ ಬುಡಕಟ್ಟು ಜನಾಂಗದವರು ಹೆಚ್ಚು ವಾಸಿಸುತ್ತಿದ್ದಾರೆ. ಅರುಣಾಚಲ ಪ್ರದೇಶದ ನಂತರ ಮಿಜೋರಾಂ ಅತಿ ಕಡಿಮೆ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿದೆ. ಅದೇ ಸಮಯದಲ್ಲಿ, ಅಸ್ಸಾಂನ ನೆರೆಯ ರಾಜ್ಯ ಮಿಜೋರಾಂನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಇತ್ತೀಚೆಗೆ ತಮ್ಮ ಸರ್ಕಾರವು ಎರಡು ಮಕ್ಕಳ ನೀತಿಯನ್ನು ಕ್ರಮೇಣ ಜಾರಿಗೆ ತರುವುದಾಗಿ ಘೋಷಿಸಿತು.

ದೇಶದ ಅನೇಕ ರಾಜ್ಯಗಳು ಜನಸಂಖ್ಯಾ ನಿಯಂತ್ರಣ ನೀತಿಯನ್ನು ಬೆಂಬಲಿಸುತ್ತಿರುವ ಸಮಯದಲ್ಲಿ ರೊಮಾವಿಯಾ ರಾಯ್ಟೆ ಅವರ ಈ ಘೋಷಣೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಕೆಲ ದಿನಗಳ ಹಿಂದಷ್ಟೇ ಮಿಜೋರಾಂನ ಫ್ಯಾಮಿಲಿ ಮ್ಯಾನ್ ಝಿಯೆನಾ ಚನಾ ಅವರು ನಿಧನ ಹೊಂದಿದ್ದರು. ಮಿಜೋರಾಂನ 76 ವರ್ಷ ಝಿಯೊನಾ ಚನಾ ಅವರು. 38 ಪತ್ನಿಯರು, 94 ಮಕ್ಕಳು ಹಾಗೂ 14 ಸೊಸೆಯರು ಹಾಗೂ 33 ಮಂದಿ ಮೊಮ್ಮಕ್ಕಳನ್ನು ಹೊಂದಿದ ವಿಶ್ವದ ಅತೀದೊಡ್ಡ ಕುಟುಂಬದ ಮುಖ್ಯಸ್ಥ ಎಂಬ ಕೀರ್ತಿಯನ್ನು ಪಡೆದಿದ್ದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com