ರಾಷ್ಟ್ರಪತಿ ಭೇಟಿ ವೇಳೆ ವಾಹನ ದಟ್ಟಣೆ: ಕೋವಿಡ್-19 ನಂತರದ ಸಮಸ್ಯೆಗೆ ಮಹಿಳೆ ಸಾವು

ರಾಷ್ಟ್ರಪತಿ ಭೇಟಿ ವೇಳೆ ವಾಹನ ದಟ್ಟಣೆಯಿಂದ ಕೋವಿಡ್-19 ನಂತರದ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳೆ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತಲುಪಲಾಗದೇ ಮೃತಪಟ್ಟಿದ್ದಾರೆ. 
ವಂದನಾ ಮಿಶ್ರಾ
ವಂದನಾ ಮಿಶ್ರಾ

ಕಾನ್ಪುರ: ರಾಷ್ಟ್ರಪತಿ ಭೇಟಿ ವೇಳೆ ವಾಹನ ದಟ್ಟಣೆಯಿಂದ ಕೋವಿಡ್-19 ನಂತರದ ಸಮಸ್ಯೆಗಳಿಂದ ಬಳಲುತ್ತಿದ್ದ ಮಹಿಳೆ ಸೂಕ್ತ ಸಮಯಕ್ಕೆ ಆಸ್ಪತ್ರೆಗೆ ತಲುಪಲಾಗದೇ ಮೃತಪಟ್ಟಿದ್ದಾರೆ. 

ಮೃತಪಟ್ಟ ಮಹಿಳೆ ವಂದನಾ ಮಿಶ್ರ (50), ಇಂಡಿಯನ್ ಇಂಡಸ್ಟ್ರೀಸ್ ಅಸೋಸಿಯೇಷನ್ (ಐಐಎ) ಯ ಸ್ಥಳೀಯ ಅಧ್ಯಕ್ಷರಾಗಿದ್ದು, ಕಾನ್ಪುರದಲ್ಲಿ ಮೃತಪಟ್ಟಿದ್ದಾರೆ. 

ಕಿದ್ವಾಯಿ ನಗರದ ನಿವಾಸಿಯಾಗಿದ್ದ ವಂದನಾ ಮಿಶ್ರ ಅವರಿಗೆ ಏಪ್ರಿಲ್ ನಲ್ಲಿ ಕೋವಿಡ್-19 ಸೋಂಕು ತಗುಲಿತ್ತು. ಆದರೆ ಕೋವಿಡ್-19 ಸೋಂಕು ನೆಗೆಟೀವ್ ಬಂದ ಎರಡು ತಿಂಗಳಾದರೂ ವಂದನಾ ಮಿಶ್ರ ಅವರು ಕೋವಿಡ್-19 ನಂತರದ ಸಮಸ್ಯೆಗಳಿಂದ ಬಳಲುತ್ತಿದ್ದರು. ತತ್ಪರಿಣಾಮವಾಗಿ ಅವರಿಗೆ ಆಗಾಗ್ಗೆ ಆಸ್ಪತೆಯ ಚಿಕಿತ್ಸೆ ಅಗತ್ಯವಿರುತ್ತಿತ್ತು. 

ಜೂ.25 ರಂದು ಮಧ್ಯಾಹ್ನವೂ ಆಕೆಯನ್ನು ಕೆಲವೊಂದು ಕ್ಲಿನಿಕಲ್ ಪರೀಕ್ಷೆಗಳು ಹಾಗೂ ಟೆಸ್ಟ್ ಗಳಿಗೆ ಕರೆದೊಯ್ಯಲಾಗಿತ್ತು, ಸಂಜೆ 4:30 ವೇಳೆಗೆ ಮನೆಗೆ ಬಂದ ನಂತರ ಆಕೆಗೆ ಅಸ್ವಸ್ಥತೆ ಕಾಡಿದ್ದರಿಂದ ಅವರನ್ನು ಮತ್ತೆ ಆಸ್ಪತ್ರೆಗೆ ಕರೆದೊಯ್ಯಬೇಕಾಯಿತು. ಸಂಬಂಧಿಕರು ಕಾರಿನಲ್ಲಿ ವಂದನಾ ಮಿಶ್ರಾ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದರು. ಆದರೆ ರಾಷ್ಟ್ರಪತಿಗಳು ಕಾನ್ಪುರಕ್ಕೆ ಭೇಟಿ ನೀಡಿದ್ದರಿಂದ ವಾಹನ ಸಂಚಾರ ದಟ್ಟಣೆ ಉಂಟಾಗಿ ಗೋವಿಂದ್ ಪುರಿ ಮೇಲ್ಸೇತುವೆ ಮೇಲೆ ವಾಹನಗಳ ನಡುವೆ ಸಿಲುಕಿ ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಲು ಸಾಧ್ಯವಾಗಲಿಲ್ಲ. ಆಸ್ಪತ್ರೆ ತಲುಪುವ ವೇಳೆಗೆ ಆಕೆ ಮೃತಪಟ್ಟಿದ್ದರೆಂದು ವೈದ್ಯರು ಘೋಷಿಸಿದ್ದಾರೆ. 

ಈ ದುರ್ಘಟನೆ ನಡೆದಿರುವುದಕ್ಕೆ ಕ್ಷಮೆ ಕೇಳಿರುವ ಕಾನ್ಪುರ ಪೊಲೀಸ್ ಆಯುಕ್ತರು ತನಿಖೆಗೆ ಆದೇಶಿಸಿದ್ದು, ಸಬ್ ಇನ್ಸ್ಪೆಕ್ಟರ್ ಹಾಗೂ ಮೂವರು ಪೇದೆಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಕಾನ್ಪುರ ಪೊಲೀಸ್ ಆಯುಕ್ತ ಆಸೀಮ್ ಅರುಣ್ ಅವರು ಆದೇಶಿಸಿರುವ ತನಿಖೆಯನ್ನು ಎಡಿಸಿಪಿ (ಕಾನ್ಪುರ ದಕ್ಷಿಣ) ನಡೆಸಲಿದ್ದಾರೆ. 

ರಾಷ್ಟ್ರಪತಿಗಳು ಜೂ.25 ರಿಂದ ಮೂರು ದಿನಗಳ ಕಾನ್ಪುರ ಪ್ರವಾಸದಲ್ಲಿದ್ದಾರೆ. ಈ ಘಟನೆ ಕುರಿತು ಪೊಲೀಸ್ ಆಯುಕ್ತರು ಕ್ಷಮೆ ಕೋರಿದ್ದು, ಕಾನ್ಪುರ ನಗರ ಪೊಲೀಸರ ಪರವಾಗಿ ನಾನು ಕ್ಷಮೆ ಕೋರುತ್ತೇನೆ, ಇದು ದೊಡ್ಡ ಪಾಠವಾಗಿದೆ. ಮಾರ್ಗ ಬದಲಾವಣೆ ವಿಚಾರದಲ್ಲಿ ಇನ್ನಷ್ಟು ಜಾಗರೂಕರಾಗಿರುತ್ತೇವೆ. ಸಾರ್ವಜನಿಕರನ್ನು ನಿಲುಗಡೆ ಮಾಡುವಂತಹ ಪರಿಸ್ಥಿತಿಗಳನ್ನು ಸಾಧ್ಯವಾದಷ್ಟೂ ತಪ್ಪಿಸುವ ರೀತಿ ವ್ಯವಸ್ಥೆ ಮಾಡಲು ಯತ್ನಿಸುತ್ತೇವೆ ಎಂದು ಹೇಳಿದ್ದಾರೆ. 

ರಾಷ್ಟ್ರಪತಿಗಳಿಗೂ ಈ ವಿಷಯ ತಲುಪಿದ್ದು, ಸಹೋದರಿ ವಂದನಾ ಮಿಶ್ರಾ ಅವರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕಾನ್ಪುರ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರನ್ನು ಭೇಟಿ ಮಾಡಿ ಮಾಹಿತಿ ಪಡೆದಿದ್ದಾರೆ, ವಂದನಾ ಮಿಶ್ರಾ ಅವರ ಅಂತ್ಯಕ್ರಿಯೆಯಲ್ಲಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದು, ರಾಷ್ಟ್ರಪತಿಗಳ ಸಂತಾಪ ಸಂದೇಶವನ್ನು ಕುಟುಂಬ ಸದಸ್ಯರಿಗೆ ತಲುಪಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com