ರಸ್ತೆ ನಿರ್ಮಾಣಕ್ಕೆ 15 ಲಕ್ಷ ಕೋಟಿ ರೂಪಾಯಿ ವೆಚ್ಚ: ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ
ನವದೆಹಲಿ: ಮುಂದಿನ ಎರಡು ವರ್ಷದಲ್ಲಿ ಸರ್ಕಾರ, 15 ಲಕ್ಷ ಕೋಟಿ ರೂಪಾಯಿ ವೆಚ್ಚದ ರಸ್ತೆ ನಿರ್ಮಾಣದ ಗುರಿ ಹೊಂದಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.ಮೂಲಸೌಕರ್ಯ ಅಭಿವೃದ್ಧಿಗೆ ಸರ್ಕಾರ ಅಗ್ರ ಆದ್ಯತೆ ನೀಡಲಿದೆ ಎಂದು ಅವರು ಹೇಳಿದ್ದಾರೆ.
ಇಂಡೋ-ಅಮೆರಿಕ ಸಹಭಾಗಿತ್ವ ಮುನ್ನೋಟ ಸಮ್ಮೇಳನವನ್ನುದ್ದೇಶಿಸಿ ನಿನ್ನೆ ವಿಡಿಯೋ ಕಾನ್ಫರೆನ್ ಮೂಲಕ ಮಾತನಾಡಿದ ಅವರು, ಪ್ರಸಕ್ತ ವರ್ಷದಲ್ಲಿ ಸಚಿವಾಲಯ ದಿನವೊಂದಕ್ಕೆ 40 ಕಿಲೋಮೀಟರ್ ಹೆದ್ದಾರಿ ನಿರ್ಮಾಣದ ಗುರಿ ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ರಸ್ತೆ ನಿರ್ಮಾಣ ವಲಯಕ್ಕೆ ಸರ್ಕಾರ ಶೇಕಡ 100 ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಎಫ್.ಡಿ.ಐ ಗೆ ಸಮ್ಮತಿ ನೀಡಿದೆ ಎಂದರು.
ಈ ನಿಟ್ಟಿನಲ್ಲಿ ಭಾರತದ, 2019-2025 ನೇ ಸಾಲಿನ ರಾಷ್ಟ್ರೀಯ ಮೂಲಸೌಕರ್ಯ ಪೈಪ್ಲೈನ್ - ಎನ್ಐಪಿ ಯೋಜನೆ ಮೊದಲನೆಯದಾಗಿದ್ದು, ತನ್ನ ನಾಗರಿಕರಿಗೆ ವಿಶ್ವದರ್ಜೆಯ ಮೂಲ ಸೌಕರ್ಯಗಳನ್ನು ಒದಗಿಸುವ ಮೂಲಕ ಅವರ ಜೀವನವನ್ನು ಉನ್ನತಿಗೇರಿಸಲು ಸರ್ಕಾರ ಬದ್ಧವಾಗಿದೆ ಎಂದೂ ಸಚಿವರು ತಿಳಿಸಿದರು.


