ಕೋವಿಡ್ ನಿರ್ವಹಣೆಯಲ್ಲಿ ಮಹತ್ತರ ಪಾತ್ರ: ಶಿಕ್ಷಕಿ, ಆರೋಗ್ಯ ಸಚಿವೆ ಶೈಲಜಾ ದಾಖಲೆ ಅಂತರದ ಜಯ

ಮಾರಕ ಕೊರೋನಾ ವೈರಸ್ ಸೋಂಕು ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸಿದ್ದ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು ಹಾಲಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಅಂತರದ ಜಯ ಸಾಧಿಸಿದ್ದಾರೆ.
ಶೈಲಜಾ
ಶೈಲಜಾ

ಕೊಚ್ಚಿನ್: ಮಾರಕ ಕೊರೋನಾ ವೈರಸ್ ಸೋಂಕು ಸಾಂಕ್ರಾಮಿಕವನ್ನು ಸಮರ್ಥವಾಗಿ ಎದುರಿಸಿದ್ದ ಕೇರಳದ ಆರೋಗ್ಯ ಸಚಿವೆ ಕೆಕೆ ಶೈಲಜಾ ಅವರು ಹಾಲಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಅಂತರದ ಜಯ ಸಾಧಿಸಿದ್ದಾರೆ.

ಹೌದು... ಕೋವಿಡ್ 19 ಸೋಂಕು ಕ್ಷಿಪ್ರವಾಗಿ ಹರಡುತ್ತಿದ್ದ ಸಂದರ್ಭದಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ಎಲ್ಲರಿಂದ ಮೆಚ್ಚುಗೆ ಪಡೆದಿದ್ದ ಕೇರಳದ ಆರೋಗ್ಯ ಸಚಿವೆ, ಶಿಕ್ಷಕಿ ಕೆಕೆ ಶೈಲಜಾ ಅವರು ಕಣ್ಣೂರು ಜಿಲ್ಲೆಯ ಮಟ್ಟಾನ್ನೂರ್ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮ ಪ್ರತಿಸ್ಫರ್ಧಿಯನ್ನು 61ಸಾವಿರಕ್ಕೂ ಹೆಚ್ಚು ಮತಗಳಿಂದ  ಪರಾಜಯಗೊಳಿಸಿದ್ದಾರೆ. 

ಸಿಪಿಐಎಂನ ಭದ್ರಕೋಟೆ ಎಂದೇ ಹೇಳಲಾಗುತ್ತಿದ್ದ ಮಟ್ಟಾನ್ನೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಕೆಕೆ ಶೈಲಜಾ ಟೀಚರ್ ಅವರು ರೆವಲ್ಯೂಶನರಿ ಸೋಶಿಯಲಿಸ್ಟ್ ಪಕ್ಷದ ಇಲಿಕ್ಕಲ್ ಅಗಸ್ಥಿ ಅವರನ್ನು 61ಸಾವಿರ ಮತಗಳಿಂದ ಸೋಲಿಸಿದ್ದಾರೆ. ಈ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಭಾರತೀಯ ಜನತಾ ಪಕ್ಷದ ಬಿಜು 3ನೇ ಸ್ಥಾನಕ್ಕೆ  ತಳ್ಳಲ್ಪಟ್ಟಿದ್ದಾರೆ. ಕೆಕೆ ಶೈಲಜಾ ಅವರು ನಿವೃತ್ತ ಶಿಕ್ಷಕಿಯಾಗಿದ್ದು, ಹಾಲಿ ಪಿಣರಾಯಿ ವಿಜಯನ್ ಸರ್ಕಾರದಲ್ಲಿ ಆರೋಗ್ಯ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರು ಕೇರಳದ ಎಲ್ ಡಿಎಫ್ ಸರ್ಕಾರದಲ್ಲಿ ಕೋವಿಡ್-19 ಸೋಂಕಿನ ಆರಂಭಿಕ ಹಂತದಲ್ಲಿ ಅದ್ಭುತ ಕೆಲಸ ಮಾಡುವ ಮೂಲಕ ಜನರ  ಮನಗೆದ್ದಿದ್ದರು.

ಕೆಕೆ ಶೈಲಜಾ ಅವರು ಜಾರಿಗೆ ತಂದಿದ್ದ ನಿಯಮಗಳು ಇತರೆ ರಾಜ್ಯಗಳಿಗೆ ಮಾದರಿಯಾಗಿತ್ತು. ಕರ್ನಾಟಕವೂ ಸೇರಿದಂತೆ ಸಾಕಷ್ಟು ರಾಜ್ಯಗಳ ಸರ್ಕಾರಗಳು ಕೆಕೆ ಶೈಲಜಾ ಅವರಿಂದೆ ಮೊದಲ ಅಲೆ ವೇಳೆ ಸೋಂಕು ನಿರ್ಬಂಧಿಸುವ ಕುರಿತು ಸಲಗೆಗಳನ್ನೂ ಪಡೆದಿದ್ದವು. ಈಗಲೂ ಕೂಡ ಕೇರಳದಲ್ಲಿ ಕೋವಿಡ್  ಸಂಬಂಧಿ ಸಾವಿನ ಸಂಖ್ಯೆ ಕಡಿಮೆಯಾಗಿರುವುದಾಗಿ ವರದಿ ತಿಳಿಸಿದೆ.

ಇನ್ನು ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದ ಎಲ್ ಡಿಎಫ್ ಮೈತ್ರಿಕೂಟ 75 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದು, ಯುಡಿಎಫ್ 41 ಸ್ಥಾನಗಳಲ್ಲಿ ಜಯ ಸಾಧಿಸಿದೆ. ಕೇರಳದಲ್ಲಿ ಎರಡನೇ ಬಾರಿ ಎಲ್ ಡಿಎಫ್ ಅಧಿಕಾರಕ್ಕೆ ಏರುತ್ತಿರುವುದು ರಾಜ್ಯದ  ರಾಜಕೀಯದ ನಾಲ್ಕು ದಶಕಗಳ ಇತಿಹಾಸದಲ್ಲಿ ಹೊಸ ಮೈಲಿಗಲ್ಲಾಗಿದೆ. ಅಂತೆಯೇ ಶಬರಿ ಮಲೆ ವಿವಾದದ ಮೂಲಕ ಕೇರಳ ರಾಜಕೀಯದಲ್ಲಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಗೇಮ್ ಚೇಂಜರ್ ಆಗುವ ಕನಸು ಕಾಣುತ್ತಿತ್ತು. ಆದರೆ ಕೇರಳದ ಮತದಾರರಿಂದ ಬಿಜೆಪಿ  ನಿರೀಕ್ಷೆಯಷ್ಟು ಮನ್ನಣೆ ದೊರೆತಿಲ್ಲ. ಎನ್ ಡಿಎ ಮೈತ್ರಿಕೂಟ ಶೂನ್ಯ ಸಾಧನೆ ಮಾಡಿದೆ.
 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com