ಕೋವಿಡ್-19 ನಿರ್ವಹಣೆ ವೈಫಲ್ಯದಿಂದಾಗಿ ದೇಶಕ್ಕೇ ಕೆಟ್ಟ ಹೆಸರು.. ಕೂಡಲೇ ಆರೋಗ್ಯ ಸಚಿವ, ವಿದೇಶಾಂಗ ಸಚಿವರನ್ನು ಕಿತ್ತೊಗೆಯಿರಿ: ಕಾಂಗ್ರೆಸ್

ಕೋವಿಡ್-19 ನಿರ್ವಹಣೆಯ ವೈಫಲ್ಯದಿಂದಾಗಿ ದೇಶಕ್ಕೇ ಕೆಟ್ಟ ಹೆಸರು ಉಂಟಾಗಿದ್ದು, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಕೂಡಲೇ ಸಂಪುಟದಿಂದ ಕಿತ್ತೊಗೆಯಿರಿ ಎಂದು ಕಾಂಗ್ರೆಸ್ ಆಗ್ರಹಿಸಿದೆ. 
ಎಸ್ ಜೈಶಂಕರ್ ಮತ್ತು ಡಾ.ಹರ್ಷವರ್ಧನ್
ಎಸ್ ಜೈಶಂಕರ್ ಮತ್ತು ಡಾ.ಹರ್ಷವರ್ಧನ್
Updated on

ನವದೆಹಲಿ: ಕೋವಿಡ್-19 ನಿರ್ವಹಣೆಯ ವೈಫಲ್ಯದಿಂದಾಗಿ ದೇಶಕ್ಕೇ ಕೆಟ್ಟ ಹೆಸರು ಉಂಟಾಗಿದ್ದು, ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಮತ್ತು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರನ್ನು ಕೂಡಲೇ ಸಂಪುಟದಿಂದ ಕಿತ್ತೊಗೆಯಿರಿ ಎಂದು ಕಾಂಗ್ರೆಸ್ ಆಗ್ರಹಿಸಿದೆ. 

ಕೋವಿಡ್-19 ಸಾಂಕ್ರಾಮಿಕ ನಿರ್ವಹಣೆಯಲ್ಲಿ ಉಭಯ ಸಚಿವರು ವಿಫಲರಾಗಿದ್ದು, ಇಂತಹ ಕಠಿಣ ಹೃದಯದವರಿಂದ ದೇಶಕ್ಕೇ ಅಪಖ್ಯಾತಿ ಉಂಟಾಗಿದೆ. ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾ ಮಾಡಬೇಕೆಂದು ಕಾಂಗ್ರೆಸ್ ಒತ್ತಾಯಿಸಿದೆ. ಕೋವಿಡ್-19 ನಿಂದ ಬಳಲುತ್ತಿರುವ ಸಾಮಾನ್ಯ ಜನರ ಸಮಸ್ಯೆಗಳ  ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ಸರ್ಕಾರವು ಕೋವಿಡ್ ಸಾಂಕ್ರಾಮಿಕ ರೋಗದ ನೈಜತೆಯ ನಿರ್ವಹಣೆ ಮಾಡುವ ಬದಲು ಕೇವಲ ಗ್ರಹಿಕೆಯ ನಿರ್ವಹಣೆಯಲ್ಲಿ ಆಸಕ್ತಿ ಹೊಂದಿದೆ. ದೇಶವು ಕಠಿಣ ಪರಿಸ್ಥಿತಿಯಲ್ಲಿದ್ದು, ವ್ಯಾಪಕ ಹಾನಿ ಮತ್ತು ಸಾವುಗಳಿಗೆ ಸಾಕ್ಷಿಯಾಗುತ್ತಿದೆ ಎಂದು ಕಾಂಗ್ರೆಸ್ ಹೇಳಿದೆ.

ಈ ಬಗ್ಗೆ ಮಾತನಾಡಿರುವ ಕಾಂಗ್ರೆಸ್ ವಕ್ತಾರರಾದ ಸುಪ್ರಿಯಾ ಶ್ರೀನಾಟೆ ಅವರು, 'ಆಮ್ಲಜನಕ, ಐಸಿಯು ಹಾಸಿಗೆಗಳು ಮತ್ತು ಜೀವ ಉಳಿಸುವ ಔಷಧಿಗಳ ಕೊರತೆಯಿಂದ ಜನರು ಸಾಯುತ್ತಿರುವ ಸಮಯದಲ್ಲಿ, ಸರ್ಕಾರವು ಕೇವಲ ಸುದ್ದಿ ಮುಖ್ಯಾಂಶಗಳಲ್ಲಿ ಮತ್ತು ಸರ್ಕಾರದ ಚಾರಿತ್ರ್ಯ ನಿರ್ವಹಣೆಯನ್ನು  ಉತ್ತಮಗೊಳಿಸುಕೊಳ್ಳುವುದರಲ್ಲಿ ಆಸಕ್ತಿ ಹೊಂದಿದೆ. ಜನರ ಆಸಕ್ತಿ ಮತ್ತು ಅಗತ್ಯಗಳನ್ನು ಕಡೆಗಣಿಸುವ ಮೂಲಕ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಆರೋಗ್ಯ ಸಚಿವ ಹರ್ಷವರ್ಧನ್ ಜನ ಸಮಸ್ಯೆಗಳನ್ನು ಗೇಲಿ ಮಾಡುತ್ತಿರುವಂತಿದೆ. ಹೀಗಾಗಿ ಇಬ್ಬರೂ ಸಚಿವರನ್ನು ಸಂಪುಟದಿಂದ ಕೂಡಲೇ  ವಜಾಗೊಳಿಸಬೇಕು ಎಂದು ಮೋದಿ ಸರ್ಕಾರವನ್ನು ಆಗ್ರಹಿಸಿದ್ದಾರೆ. 

ಈ ಇಬ್ಬರು ಸಚಿವರು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಣೆ ಮಾಡದೇ ದೇಶಕ್ಕೆ ಅಪಖ್ಯಾತಿಯನ್ನು ತರುತ್ತಿದ್ದಾರೆ. ದೇಶದಲ್ಲಿ ಕೋವಿಡ್ ಸಾಂಕ್ರಾಮಿಕ ಸೋಂಕು ತಾರಕಕ್ಕೇರಿರುವ ಈ ಸಂದರ್ಭದಲ್ಲಿ ಆರೋಗ್ಯ ಸಚಿವರು ಸಂಪೂರ್ಣವಾಗಿ ನಾಪತ್ತೆಯಾಗಿದ್ದಾರೆ. ಅಂತೆಯೇ ಜಾಗತಿಕ ಸಮುದಾಯದೊಂದಿಗೆ  ನಿಕಟ ಸಂಪರ್ಕ ಹೊಂದಿ ಸಾಂಕ್ರಾಮಿಕ ನಿರ್ವಹಣೆಯಲ್ಲಿ ಮಹತ್ತರ ಪಾತ್ರವಹಿಸಬೇಕಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೂ ಕೂಡ ತನ್ನ ಕರ್ತವ್ಯಗಳಿಂದ ನುಣುಚಿಕೊಳ್ಳುವಂತೆ ವರ್ತಿಸುತ್ತಿದ್ದಾರೆ. ಜನರ ಹಿತಾಸಕ್ತಿಗಳಿಗೆ ವಿರುದ್ಧವಾಗಿ ವರ್ತಿಸುತ್ತಿರುವ, ದೇಶಕ್ಕೆ ಅಪಖ್ಯಾತಿ ತರುವ ಮತ್ತು ಜನರ ನೋವು  ಮತ್ತು ಸಂಕಟಗಳಿಗೆ ಕಠಿಣ ಹೃದಯಿಗಳಂತೆ ವರ್ತಿಸುತ್ತಿರುವ ಈ ಇಬ್ಬರು ಮಂತ್ರಿಗಳನ್ನು ಪ್ರಧಾನಿ ಮೋದಿ ಸಂಪುಟದಿಂದ ಕೂಡಲೇ ವಜಾ ಮಾಡಬೇಕು ಎಂದು ಶ್ರೀನಾಟೆ ಆಗ್ರಹಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವರು ತಾವು ನಿರ್ವಹಿಸುವ ಹುದ್ದೆಗೆ ಗೌರವ ನೀಡುತ್ತಿಲ್ಲ. ಪ್ರಸ್ತುತ ಬಿಜೆಪಿ ನೇತೃತ್ವದ ಸರ್ಕಾರವು ಕೆಲಸ ಮಾಡುವ ಬದಲು ಈ ಹಿಂದಿನ ಸರ್ಕಾರಗಳನ್ನು ದೂಷಿಸುವುದರಲ್ಲಿ ತಲ್ಲೀನವಾಗಿದೆ. ಆದರೆ ತನ್ನದೇ ಆದ ವೈಫಲ್ಯಗಳನ್ನು ಒಪ್ಪಿಕೊಳ್ಳುತ್ತಿಲ್ಲ. ಮೊದಲು ತನ್ನ ತಪ್ಪನ್ನು  ತಿದ್ದುಕೊಂಡು ಸರ್ಕಾರ ಜವಾಬ್ದಾರಿಯುತವಾಗಿ ವರ್ತಿಸಬೇಕು. ಸೆಂಟ್ರಲ್ ವಿಸ್ಟಾ ಯೋಜನೆ ಮತ್ತು ಪ್ರಧಾನ ಮಂತ್ರಿಗಳ ನಿವಾಸ ಸೇರಿದಂತೆ ಎಲ್ಲಾ ಅನಿವಾರ್ಯವಲ್ಲದ ಖರ್ಚುಗಳನ್ನು ಮೋದಿ ಸರ್ಕಾರ ನಿಲ್ಲಿಸಬೇಕು. ಸಾಂಕ್ರಾಮಿಕದ ವಿರುದ್ಧ ಹೋರಾಡಲು ಆರೋಗ್ಯ ಸೌಲಭ್ಯಗಳನ್ನು ಸುಧಾರಿಸಲು ಲಭ್ಯವಿರುವ  ಪ್ರತಿಯೊಂದು ಸಂಪನ್ಮೂಲವನ್ನು ಬೇರೆಡೆಯಿಂದ ಪಡೆದುಕೊಳ್ಳಬೇಕು ಅವರು ಒತ್ತಾಯಿಸಿದರು.
 
ಅಂತೆಯೇ, ವಿದೇಶದಿಂದ ಪಡೆದ ಪರಿಹಾರ ವಿತರಣೆಗೆ ಸಂಬಂಧಿಸಿದಂತೆ ಯಾವುದೇ ಪ್ರೋಟೋಕಾಲ್ ಅಥವಾ ಮಾರ್ಗಸೂಚಿಗಳಿಲ್ಲ. ದೇಶಕ್ಕೆ ಬರುತ್ತಿರುವ ವಿದೇಶಿ ನೆರವಿನಲ್ಲಿ ಸರ್ಕಾರ ಪಾರದರ್ಶಕತೆ ತರಬೇಕು. ಸ್ವೀಕರಿಸುವವರ ವಿವರಗಳನ್ನು ಮತ್ತು ಅದನ್ನು ಹೇಗೆ ವಿತರಿಸಲಾಗುತ್ತಿದೆ ಎಂಬುದನ್ನು ಜನರಗೆ  ತಿಳಿಸಬೇಕು. ವಿದೇಶಿ ನೆರವು ವಿತರಣೆಯಲ್ಲಿ ಏಕೆ ವಿಳಂಬವಾಗುತ್ತಿದೆ. ಸರ್ಕಾರದ ಇಂತಹ ನ್ಯೂನ್ಯತೆಗಳಿಂದಾಗಿ ನಿತ್ಯ ಸಾವಿರಾರು ಜನರು ಸಾಯುತ್ತಿದ್ದಾರೆ. ಕಳೆದ ಒಂದೇ ವಾರದಲ್ಲಿ ಅಂದರೆ ಕೋವಿಡ್-19 ಮಾರ್ಗಸೂಚಿ ಮತ್ತು ನಿರ್ಬಂಧಗಳು ಜಾರಿಯಲ್ಲಿರುವ ಏಪ್ರಿಲ್ 26 ರಿಂದ ಮೇ 2 ರವರೆಗೆ  23,000 ಜನರು  ಸಾವನ್ನಪ್ಪಿದ್ದಾರೆ. ಕೋವಿಡ್-19 ಅನ್ನು ನಿಯಂತ್ರಿಸಲು ಪ್ರಧಾನಿ ವೈದ್ಯರು, ವಿಜ್ಞಾನಿಗಳು ಮತ್ತು ತಜ್ಞರೊಂದಿಗೆ ಚರ್ಚೆ ನಡೆಸಬೇಕು ಶ್ರೀನಾಟೆ ಹೇಳಿದ್ದಾರೆ.

2ನೇ ಅಲೆಗೇ ಈ ಸ್ಥಿತಿಯಾದರೆ ಇನ್ನು ಮೂರನೇ ಅಲೆಯ ನಿಯಂತ್ರಣಕ್ಕೆ ಸರ್ಕಾರ ಏನು ಕ್ರಮಗಳನ್ನು ಕೈಗೊಂಡಿದೆ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com