ಮಕ್ಕಳ ಮೇಲೆ ಕೋವ್ಯಾಕ್ಸಿನ್ ಲಸಿಕೆ 2, 3ನೇ ಹಂತದ ಕ್ಲಿನಿಕಲ್ ಟ್ರಯಲ್ಸ್ ಗೆ ತಜ್ಞರ ಸಮಿತಿ ಶಿಫಾರಸು

2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಬಳಕೆ ಕುರಿತ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ತಜ್ಞರ ಸಮಿತಿ ಅನುಮೋದನೆ ನೀಡಿದೆ.
ಮಕ್ಕಳಿಗೆ ಕೋವಿಡ್ ಲಸಿಕೆ (ಪಿಟಿಐ ಚಿತ್ರ)
ಮಕ್ಕಳಿಗೆ ಕೋವಿಡ್ ಲಸಿಕೆ (ಪಿಟಿಐ ಚಿತ್ರ)
Updated on

ನವದೆಹಲಿ: 2 ರಿಂದ 18 ವರ್ಷದೊಳಗಿನ ಮಕ್ಕಳಿಗೆ ಭಾರತ್ ಬಯೋಟೆಕ್ ನ ಕೋವ್ಯಾಕ್ಸಿನ್ ಲಸಿಕೆ ಬಳಕೆ ಕುರಿತ 2 ಮತ್ತು 3ನೇ ಹಂತದ ಪ್ರಯೋಗಕ್ಕೆ ತಜ್ಞರ ಸಮಿತಿ ಅನುಮೋದನೆ ನೀಡಿದೆ.

18 ವರ್ಷಕ್ಕೂ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಕಾರ್ಯಕ್ರಮ ಘೋಷಣೆಯಾದ ಬೆನ್ನಲ್ಲೇ ದೇಶದಲ್ಲಿ ಪುಟ್ಟಮಕ್ಕಳಲ್ಲಿಯೂ ಮಾರಕ ಕೊರೋನಾ ವೈರಸ್ ತನ್ನ ಪರಿಣಾಮ ತೋರಿಸುತ್ತಿರುವ ಆತಂಕಕಾರಿ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ದೇಶದ ವಿವಿಧೆಡೆ ಕೋವಿಡ್ ಸೋಂಕಿನಿಂದಾಗಿ ಮಕ್ಕಳ ಆರೋಗ್ಯ ಹದಗೆಟ್ಟು  ಆಸ್ಪತ್ರೆಗೆ ದಾಖಲಾಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಇದು ಮಕ್ಕಳಿಗೂ ಕೋವಿಡ್ ಲಸಿಕೆ ನೀಡುವ ಕುರಿತು ಚರ್ಚೆ ಹುಟ್ಟುಹಾಕಿತ್ತು. ಇದೀಗ ತಜ್ಞರ ಸಮಿತಿ ಈ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿದ್ದು 2ರಿಂದ 18 ವರ್ಷದೊಳಗಿನ ಮಕ್ಕಳಿಗೆ 2 ಮತ್ತು 3ನೇ ಹಂತದ ಕ್ಲಿನಿಕಲ್ ಪ್ರಯೋಗ ನಡೆಸುವಂತೆ ಶಿಫಾರಸ್ಸು ಮಾಡಿದೆ.

ದೆಹಲಿ ಏಮ್ಸ್, ಪಾಟ್ನಾ ಏಮ್ಸ್ ಮತ್ತು ನಾಗಪುರದ ನಾಗ್ಪುರದ ಮೆಡಿಟ್ರಿನಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ವಿವಿಧ ಕೇಂದ್ರಗಳಲ್ಲಿ 525 ವಿಷಯಗಳಲ್ಲಿ ಈ ಲಸಿಕೆ ಪ್ರಯೋಗ ನಡೆಯಲಿದೆ ಎಂದು ಹೇಳಲಾಗಿದೆ.

ಈ ಹಿಂದೆ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ 2 ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ II / III ಹಂತದ ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಮಕ್ಕಳಲ್ಲಿ ಸುರಕ್ಷತೆ, ಪ್ರತಿಕ್ರಿಯಾತ್ಮಕತೆ ಮತ್ತು ಇಮ್ಯುನೊಜೆನೆಸಿಟಿಯನ್ನು ಮೌಲ್ಯಮಾಪನ ಮಾಡಲು ಕ್ಲಿನಿಕಲ್  ಪ್ರಯೋಗಕ್ಕಾಗಿ ಕೇಂದ್ರ ಸರ್ಕಾರದ ಅನುಮತಿ ಕೋರಿತ್ತು. ಈ ಅರ್ಜಿಯ ವಿಚಾರವಾಗಿ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (ಸಿಡಿಎಸ್ಕೊ) ಯ ಕೋವಿಡ್-19  ವಿಷಯ ತಜ್ಞರ ಸಮಿತಿ (ಎಸ್‌ಇಸಿ) ಚರ್ಚೆ ನಡೆಸಿದೆ. ಈ ಮೊದಲು ಫೆಬ್ರವರಿ 24 ರ ಎಸ್‌ಇಸಿ ಸಭೆಯಲ್ಲಿ ಈ ಪ್ರಸ್ತಾಪವನ್ನು  ಚರ್ಚಿಸಲಾಗಿತ್ತು ಮತ್ತು ಪರಿಷ್ಕೃತ ಕ್ಲಿನಿಕಲ್ ಟ್ರಯಲ್ ಪ್ರೋಟೋಕಾಲ್ (ನಿಯಮಾವಳಿ) ಸಲ್ಲಿಸಲು ಸಂಸ್ಥೆಯನ್ನು ಕೇಳಲಾಗಿತ್ತು.

ಮೂಲಗಳ ಪ್ರಕಾರ, ಈ ಕುರಿತಂತೆ ವಿವರವಾದ ಚರ್ಚೆಯ ನಂತರ, ಕೊರೊನಾ ವೈರಸ್ ಲಸಿಕೆಯ ಪ್ರಸ್ತಾವಿತ ಹಂತ II / III ಕ್ಲಿನಿಕಲ್ ಪ್ರಯೋಗವನ್ನು 2 ರಿಂದ 18 ವರ್ಷ ವಯಸ್ಸಿನ ಮಕ್ಕಳಲ್ಲಿ ನಡೆಸಲು ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿದುಬಂದಿದೆ. ಅಂತೆಯೇ ಅಧ್ಯಯನದ ಮೂರನೇ ಹಂತಕ್ಕೆ  ಮುಂದುವರಿಯುವ ಮೊದಲು ಸಿಡಿಎಸ್ಕೊಗೆ ಡಿಎಸ್ಎಂಬಿ ಶಿಫಾರಸುಗಳೊಂದಿಗೆ 2ನೇ ಹಂತದ ಕ್ಲಿನಿಕಲ್ ಪ್ರಯೋಗದ ಮಧ್ಯಂತರ ಸುರಕ್ಷತಾ ದತ್ತಾಂಶವನ್ನು ಸಂಸ್ಥೆಯು ಸಲ್ಲಿಸಬೇಕು ಎಂಬ ಷರತ್ತಿನ ಮೇರೆಗೆ ಕ್ಲಿನಿಕಲ್ ಪ್ರಯೋಗಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದು ತಿಳಿದುಬಂದಿದೆ. 

ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸಹಯೋಗದೊಂದಿಗೆ ಭಾರತ್ ಬಯೋಟೆಕ್ ಸಂಸ್ಥೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿರುವ ಕೋವಾಕ್ಸಿನ್ ಲಸಿಕೆಯನ್ನು ಪ್ರಸ್ತುತ  ಭಾರತದ ಕೋವಿಡ್ -19 ವ್ಯಾಕ್ಸಿನೇಷನ್ ಅಭಿಯಾನದಲ್ಲಿ ವಯಸ್ಕರಲ್ಲಿ ಬಳಸಲಾಗುತ್ತಿದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com