ಮಹಾರಾಷ್ಟ್ರ: 2ನೇ ಮದುವೆಯಾಗಿದ್ದಕ್ಕೆ ಮಹಿಳೆಗೆ ಎಂಜಲು ನೆಕ್ಕುವ ಶಿಕ್ಷೆ ವಿಧಿಸಿದ ಪಂಚಾಯತ್, ಎಫ್ಐಆರ್ ದಾಖಲು

ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡು 2ನೇ ವಿವಾಹವಾಗಿದ್ದ ಮಹಿಳೆಯೊಬ್ಬರಿಗೆ ಸ್ಥಳೀಯ ಪಂಚಾಯತಿಯೊಂದು ಎಂಜಲು ನೆಕ್ಕುವ ಶಿಕ್ಷೆ ವಿಧಿಸಿದ ಘಟನೆಯೊಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಮುಂಬೈ: ಮೊದಲ ಪತಿಯಿಂದ ವಿಚ್ಛೇದನ ಪಡೆದುಕೊಂಡು 2ನೇ ವಿವಾಹವಾಗಿದ್ದ ಮಹಿಳೆಯೊಬ್ಬರಿಗೆ ಸ್ಥಳೀಯ ಪಂಚಾಯತಿಯೊಂದು ಎಂಜಲು ನೆಕ್ಕುವ ಶಿಕ್ಷೆ ವಿಧಿಸಿದ ಘಟನೆಯೊಂದು ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ. 

ಕಳೆದ ತಿಂಗಳು ಘಟನೆ ನಡೆದಿದ್ದು, ಪಂಚಾಯತಿ ಆದೇಶ ತಿರಸ್ಕರಿಸಿದ ಮಹಿಳೆ ಪೊಲೀಸರಿಗೆ ದೂರು ನೀಡಿದ ಹಿನ್ನೆಲೆಯಲ್ಲಿ ಇದೀಗ ಪ್ರಕರಣ ಬೆಳಕಿಗೆ ಬಂದಿದೆ. 

2015ರಲ್ಲಿ ಮೊದಲ ಪತಿಯಿಂದ ವಿಚ್ಛೇದನ ಪಡೆದಿದ್ದ ಮಹಿಳೆ, 2019ರಲ್ಲಿ ಎರಡನೇ ಮದುವೆಯಾಗಿದ್ದರು. ಸಂತ್ರಸ್ತ ಮಹಿಳೆ ನಾಥ್ ಜೋಗಿ ಸಮುದಾಯಕ್ಕೆ ಸೇರಿದವರಾಗಿದ್ದು, ಸ್ಥಳೀಯ ಪಂಚಾಯತ್ ಸದಸ್ಯರು ಮಹಿಳೆಯ ಎರಡನೇ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು. 

ಇದರಂತೆ ಮಹಿಳೆಯ ಎರಡನೇ ವಿವಾಹದ ಬಗ್ಗೆ ಪಂಚಾಯತ್ ಸದಸ್ಯರು ಸಭೆ ನಡೆಸಿ ಮಾತುಕತೆ ನಡೆಸಿದ್ದು, ಸಭೆ ವೇಳೆ ಮಹಿಳೆಯ ಸಹೋದರಿ, ಸಂಬಂಧಿಕರನ್ನು ಕರೆಸಿದ್ದಾರೆ. ಈ ವೇಳೆ ಪಂಚಾಯತ್ ಸದಸ್ಯರು ಬಾಳೆ ಎಲೆ ಮೇಲೆ ಉಗುಳಲಿದ್ದು, ಈ ಉಗುಳನ್ನು ಶಿಕ್ಷೆಯಾಗಿ ಮಹಿಳೆ ನೆಕ್ಕಬೇಕೆಂದು ತಿಳಿಸಿದ್ದಾರೆ. ಅಲ್ಲದೆ, ಮಹಿಳೆ ಎರಡನೇ ಮದುವೆ ಮಾಡಿಕೊಂಡ ಶಿಕ್ಷೆಗಾಗಿ ರೂ.1 ಲಕ್ಷ ದಂಡ ಕಟ್ಟುವಂತೆಯೂ ತಿಳಿಸಿದ್ದಾರೆ. ಶಿಕ್ಷೆ ಪೂರ್ಣಗೊಂಡ ಬಳಿಕ ಮಹಿಳೆಯನ್ನು ಮರಳಿ ಸಮುದಾಯಕ್ಕೆ ಸೇರಿಸಿಕೊಳ್ಳುವುದಾಗಿ ತಿಳಿಸಿದ್ದಾರೆ. 

ಬಳಿಕ ಮಹಿಳೆಯ ಸಹೋದರಿ ಹಾಗೂ ಸಂಬಂಧಿಕರು ಶಿಕ್ಷೆ ಕುರಿತು ಮಾಹಿತಿ ನೀಡಿದ್ದಾರೆ. ಶಿಕ್ಷೆ ಬಗ್ಗೆ ತಿಳಿದ ಮಹಿಳೆ ಆಘಾತಗೊಂಡಿದ್ದು, ಕೂಡಲೇ ಪೊಲೀಸ್ ಠಾಣೆ ಮೆಟ್ಟಿಲೇರಿ, ಪಂಚಾಯತ್ ಸದಸ್ಯರ ವಿರುದ್ಧ ದೂರು ನೀಡಿದ್ದಾರೆ. 

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು, ಇದೀಗ ಪಂಚಾಯತ್ ಸದಸ್ಯರ ವಿರುದ್ಧ ಸಾಮಾಜಿಕ ಬಹಿಷ್ಕಾರ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯ್ದೆ 2016, ಮಹಾರಾಷ್ಟ್ರ ಜನರ ಸಂರಕ್ಷಣೆ ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಿಕೊಂಡು, ತನಿಖೆ ಆರಂಭಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com