ತಮಿಳುನಾಡು: ವಣ್ಣಿಯಾರ್ ಸಮುದಾಯಕ್ಕೆ ಕಲ್ಪಿಸಿದ್ದ ಶೇ 10.5 ಮೀಸಲಾತಿ ರದ್ದುಗೊಳಿಸಿದ ಮದ್ರಾಸ್ ಹೈಕೋರ್ಟ್

ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ವಣ್ಣಿಯಾರ್ ಜಾತಿಗೆ ಶೇ. 10.5 ರಷ್ಟು ಮೀಸಲಾತಿ ಒದಗಿಸುವ ತಮಿಳುನಾಡು ಸರ್ಕಾರದ ಕಾನೂನನ್ನು ಮದ್ರಾಸ್ ಹೈಕೋರ್ಟ್ ರದ್ದುಪಡಿಸಿದೆ.
ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್

ಬೆಂಗಳೂರು: ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ವಣ್ಣಿಯಾರ್ ಜಾತಿಗೆ ಶೇ. 10.5 ರಷ್ಟು ಮೀಸಲಾತಿ ಒದಗಿಸುವ ತಮಿಳುನಾಡು ಸರ್ಕಾರದ ಕಾನೂನನ್ನು ಮದ್ರಾಸ್ ಹೈಕೋರ್ಟ್ ರದ್ದುಪಡಿಸಿದೆ.

ತಮಿಳುನಾಡು ಖಾಸಗಿ ಶಿಕ್ಷಣ ಸಂಸ್ಥೆಗಳು ಸೇರಿದಂತೆ ವಿದ್ಯಾಸಂಸ್ಥೆಗಳಲ್ಲಿ ವಿಶೇಷ ಸೀಟು ಮತ್ತು ಅತ್ಯಂತ ಹಿಂದುಳಿದ ವರ್ಗಗಳು ಮತ್ತು ಡಿನೋಟಿಫೈಡ್ ಸಮುದಾಯಗಳ ಮೀಸಲಾತಿ ಕಾಯಿದೆಯ ಅಡಿಯಲ್ಲಿ ರಾಜ್ಯದ ವ್ಯಾಪ್ತಿಯ ಸೇವೆಗಳಲ್ಲಿ ನೇಮಕಾತಿ ಅಥವಾ ನಿಯುಕ್ತಿಯ ವಿಶೇಷ ಮೀಸಲಾತಿ ಕಾಯಿದೆ- 2021ನ್ನು ನ್ಯಾಯಮೂರ್ತಿಗಳಾದ ಎಂ ದುರೈಸ್ವಾಮಿ ನೇತೃತ್ವದ ಪೀಠ ರದ್ದುಪಡಿಸಿದೆ.

ಈ ಕಾಯಿದೆ ಎಲ್ಲಾ ಅತ್ಯಂತ ಹಿಂದುಳಿದ ವರ್ಗಗಳಿಗೆ(ಎಂಬಿಸಿ) ಮತ್ತು ಡಿನೋಟಿಫೈಡ್ ಸಮುದಾಯಗಳಿಗೆ(ಡಿಎನ್ಸಿ) ಶೇ. 20 ಕೋಟಾ ವ್ಯಾಪ್ತಿಯಲ್ಲಿ ವಣ್ಣಿಯಾರ್ ಸಮುದಾಯಕ್ಕೆ ಶೇ 10.5ರಷ್ಟು ಒಳ ಮೀಸಲಾತಿ ಒದಗಿಸಲು ಯತ್ನಿಸಿತ್ತು.

ಸಂಖ್ಯಾತ್ಮಕವಾಗಿ ಪ್ರಬಲ ಸಮುದಾಯಕ್ಕೆ ಸೇರಿದವರಾಗಿದ್ದರೂ ಎಂಬಿಸಿ/ ಡಿಎನ್ಸಿಯ ಇತರ ಸಮುದಾಯಗಳೊಂದಿಗೆ ಸ್ಪರ್ಧಿಸಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿ ಎಂಬಿಸಿ ಜಾತಿಯಾದ ವಣ್ಣಿಯಾರ್ ಸಮುದಾಯದ ಬೇಡಿಕೆ ಈಡೇರಿಸಲು ವಿಶೇಷ ಕಾನೂನು ತರಲಾಗಿದೆ ಎಂದು ಕಾನೂನಿನಲ್ಲಿ ತಿಳಿಸಲಾಗಿತ್ತು.

ಉದ್ಯೋಗಕ್ಕೆ ಸಂಬಂಧಿಸಿದಂತೆ ವಣ್ಣಿಯಾರ್ಗಳ ಸಾಮಾಜಿಕ-ಶೈಕ್ಷಣಿಕ ಸ್ಥಿತಿಯ ಕುರಿತು ಯಾವುದೇ ಪ್ರಮಾಣೀಕರಿಸಬಹುದಾದ ಮಾಹಿತಿ ಇಲ್ಲದೆ ಕಾನೂನು ಜಾರಿ ಮಾಡಲಾಗಿದ್ದು, ವಣ್ಣಿಯಾರ್ಗಳನ್ನು ಉಪ ವರ್ಗೀಕರಣ ಮಾಡಲು ಯಾವುದೇ ವಸ್ತುನಿಷ್ಠ ಮಾನದಂಡಗಳಿಲ್ಲ ಎಂದು ನ್ಯಾಯಾಲಯ ತೀರ್ಪು ನೀಡಿದೆ.

ಎಂಬಿಸಿಗಳಿಗೆ ಒಟ್ಟಾರೆ ಮೀಸಲಿಟ್ಟ ಶೇ.20ರಷ್ಟು ಮೀಸಲಾತಿಯಲ್ಲಿ ವಣ್ಣಿಯಾರ್ ಸಮುದಾಯಕ್ಕೆ ಶೇ.10.5ರಷ್ಟು ಮೀಸಲಾತಿ ನೀಡಿದರೆ, ಉಳಿದ 115 ಎಂಬಿಸಿ ಸಮುದಾಯಗಳಿಗೆ ಶೇ.9.5ರಷ್ಟು ಪಾಲು ಮಾತ್ರ ಸಿಗಲಿದೆ ಎಂದು ಕೋರ್ಟ್ ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com