ಅನಂತಪುರ: ಭಾರಿ ಮಳೆ ಮತ್ತು ಭೀಕರ ಪ್ರವಾಹಕ್ಕೆ ತುತ್ತಾಗಿರುವ ಆಂಧ್ರ ಪ್ರದೇಶದಲ್ಲಿ ಮತ್ತೊಂದು ದುರಂತ ಸಂಭವಿಸಿದ್ದು, ಕದಿರಿ ಪಟ್ಟಣದಲ್ಲಿ ಕಟ್ಟಡವೊಂದು ಕುಸಿದು ನಾಲ್ಕು ಮಂದಿ ಧಾರುಣವಾಗಿ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯ ಇತಿಹಾಸ ಪ್ರಸಿದ್ಧ ಕದಿರಿ ಪಟ್ಟಣದಲ್ಲಿ ಈ ದುರಂತ ಸಂಭವಿಸಿದ್ದು, ನಿರಂತರ ಮಳೆಯಿಂದಾಗಿ ಇಲ್ಲಿನ ಓಲ್ಡ್ ಚೇರ್ಮನ್ ಸ್ಟ್ರೀಟ್‌ನಲ್ಲಿರುವ ಎರಡು ಅಂತಸ್ತಿನ ಕಟ್ಟಡ ಕುಸಿದಿದೆ. ಪರಿಣಾಮ ಮನೆಯಲ್ಲಿದ್ದ ಮೂರು ಮಕ್ಕಳು, ಓರ್ವ ಹಿರಿಯ ಮಹಿಳೆ ಕಟ್ಟಡದ ಅವಶೇಷಗಳಡಿ ಸಿಲುಕಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಮತ್ತೊಬ್ಬ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಹಳೆಯಕಟ್ಟಡದ ಮೇಲೆ ಕುಸಿದ ನಿರ್ಮಾಣ ಹಂತದ ಕಟ್ಟಡ
ಇನ್ನು ಮಹಿಳೆ ಮತ್ತು ಮಕ್ಕಳು ಇದ್ದ ಮನೆಯ ಪಕ್ಕದಲ್ಲೇ ಮತ್ತೊಂದು ಮನೆ ನಿರ್ಮಾಣವಾಗುತ್ತಿತ್ತು. ಮಳೆಯಿಂದಾಗಿ ನಿರ್ಮಾಣ ಹಂತದ ಮನೆಯ ಅಡಿಪಾಯ ಹಾಳಾಗಿತ್ತು. ಹೀಗಾಗಿ ಆ ಮನೆ ಹಳೆಯ ಮನೆ ಮೇಲೆ ಕುಸಿದು ಈ ಅವಘಡ ಸಂಭವಿಸಿದೆ. ಕಟ್ಟಡದ ಅವಶೇಷಗಳಡಿಯಲ್ಲಿ ಸುಮಾರು 10 ಮಂದಿ ಸಿಲುಕಿರುವ ಶಂಕೆ ಇದ್ದು, ತತ್ ಕ್ಷಣವೇ ಕಾರ್ಯಾಚರಣೆ ನಡೆಸಿದ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಅವಶೇಷಗಳಡಿಯಿಂದ ಆರು ಜನರನ್ನು ಹೊರತೆಗೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅಧಿಕಾರಿಗಳು ಪಿಲ್ಲರ್‌ಗಳಿಲ್ಲದೆ ನಾಲ್ಕು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿರುವುದು ಅಪಘಾತಕ್ಕೆ ಕಾರಣ ಎಂದು ಶಂಕಿಸಿದ್ದಾರೆ. ಕಟ್ಟಡ ಕುಸಿದಿದ್ದು, ಸುತ್ತಲಿನ ಇತರ ಎರಡು ಮನೆಗಳಿಗೆ ಸಣ್ಣಪುಟ್ಟ ಹಾನಿಯಾಗಿದೆ. ಜೆಸಿಬಿ ಮೂಲಕ ಅವಶೇಷಗಳನ್ನು ತೆಗೆಯುವ ಕಾರ್ಯ ಮುಂದುವರಿದಿದೆ ಎಂದು ಹೇಳಿದರು.
Advertisement